ದಲಿತರನ್ನು ಬದುಕಲು ಬಿಡದ ದೇಶದಲ್ಲಿ ಏನೇನಾಗುತ್ತಿದೆ?

ಇಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿನ

Update: 2022-12-06 05:04 GMT

ಸಮಾಜ ಮತ್ತು ಅದರ ರಾಜಕೀಯ ಪ್ರತಿನಿಧಿಗಳು ಮೂಲಭೂತವಾಗಿ ಬದಲಾಗುವವರೆಗೆ ಸಾಂವಿಧಾನಿಕ ಆದರ್ಶಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ.
-ಡಾ. ಬಿ.ಆರ್. ಅಂಬೇಡ್ಕರ್

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿಅಂಶಗಳ ಪ್ರಕಾರ, 2011ರಿಂದ 2020ರ ಅವಧಿಯಲ್ಲಿ ನಡೆದ ದಲಿತರ ಮೇಲಿನ ಹಿಂಸಾಚಾರ ಪ್ರಕರಣಗಳ ಸಂಖ್ಯೆ 4,15,821. ದಲಿತ ಸಮುದಾಯದವರೊಬ್ಬರು ಈ ದೇಶದ ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿಯೇ ದಲಿತರ ಮೇಲಿನ ದೌರ್ಜನ್ಯಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆದಿರುವುದು ವಿಪರ್ಯಾಸವಲ್ಲವೆ?

ಕೊಲೆ, ದೌರ್ಜನ್ಯ, ಅತ್ಯಾಚಾರ, ಜಾತಿ ನಿಂದನೆ ಮೊದಲಾದ ಹತ್ತು ಹಲವು ಬಗೆಯಲ್ಲಿ ದಲಿತರು ಮೇಲ್ಜಾತಿಯವರಿಂದ ಪ್ರತೀ ದಿನವೂ ಪ್ರತೀ ಕ್ಷಣವೂ ಅಸ್ಥಿರತೆ ಅನುಭವಿಸುತ್ತಿರುವ ಕರಾಳ ವಾಸ್ತವ ಈ ದೇಶದಲ್ಲಿದೆ. ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಏರಿದನೆಂದು ಕೊಂದವರಿದ್ದಾರೆ. ಬೈಕ್ ಓಡಿಸಿಕೊಂಡು ಹೋಗುವಾಗ ತಮ್ಮನ್ನು ಹಿಂದಿಕ್ಕಿದನೆಂದು ದಲಿತ ವ್ಯಕ್ತಿಯನ್ನು ಥಳಿಸಿದವರಿದ್ದಾರೆ. 

ಕಳ್ಳತನದ ಆರೋಪ ಹೊರಿಸಿ ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ಹೊಡೆಯುವವರಿದ್ದಾರೆ. ತಾವು ಕುಡಿಯುವ ನೀರು ಮುಟ್ಟಿದರೆಂಬ ಕಾರಣಕ್ಕೆ ದಲಿತರನ್ನು ಹೊಡೆದು ಹಿಂಸಿಸಿದವರಿದ್ದಾರೆ. ದೇವರ ರಥ ಮುಟ್ಟಿದರೆಂದು ದಲಿತ ಯುವಕರ ಮೇಲೆ ಹಲ್ಲೆ ಮಾಡಿದವರಿದ್ದಾರೆ. ದೇವರ ಗುಜ್ಜುಕೋಲು ಮುಟ್ಟಿದನೆಂದು ದಲಿತ ಬಾಲಕನನ್ನು ಥಳಿಸಿ ಅಮಾನವೀಯತೆ ಮೆರೆದವರಿದ್ದಾರೆ. ಪರಿಶಿಷ್ಟ ಜಾತಿಯ ಕಾರ್ಮಿಕರನ್ನು ಕೂಡಿಹಾಕಿ ಅಮಾನವೀಯವಾಗಿ ಹಿಂಸಿಸಿದವರಿದ್ದಾರೆ.

ಇವೆಲ್ಲವೂ ಒಂದೆಡೆಯಾದರೆ ಇವರ ಕೈಯಲ್ಲಿ ಕೊಲೆಯಾಗುವ ದಲಿತರ ಸಂಖ್ಯೆ, ಅತ್ಯಾಚಾರಕ್ಕೆ ತುತ್ತಾಗುವ ದಲಿತ ಬಾಲೆಯರ ಸಂಖ್ಯೆಯೂ ದೊಡ್ಡದಿದೆ. ದಲಿತರನ್ನು ಬದುಕಲು ಬಿಡದ, ನಿರಂತರವಾಗಿ ಕಾಡುವ ಈ ಸಮಾಜ ಮುಂದಿನ ಪೀಳಿಗೆಗೆ ಕೊಡುತ್ತಿರುವ ಸಂದೇಶವಾದರೂ ಏನು?

2022ರಲ್ಲಿ 60 ಸಾವಿರ ದಾಟಿವೆ ದೌರ್ಜನ್ಯ ಪ್ರಕರಣಗಳು

2021ರಲ್ಲಿ ದೇಶಾದ್ಯಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಒಟ್ಟು 60,045 ದೌರ್ಜನ್ಯ ಪ್ರಕರಣಗಳು ಅದೊಂದೇ ವರ್ಷದಲ್ಲಿ ದಾಖಲಾಗಿವೆ. ಇವುಗಳಲ್ಲಿ 50,900 ಪ್ರಕರಣಗಳು ಪರಿಶಿಷ್ಟಜಾತಿಯವರ ಮೇಲಿನ ದೌರ್ಜನ್ಯ ಪ್ರಕರಣಗಳಾದರೆ, 9,145 ಪ್ರಕರಣಗಳು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ಪ್ರಕರಣಗಳು.

ಬೇರೆ ಬೇರೆ ಕಾರಣಗಳಿಗಾಗಿ, ಬೆಳಕಿಗೆ ಬಾರದಿರುವ ಪ್ರಕರಣಗಳು ಎಷ್ಟಿರಬಹುದು ಎಂದು ಊಹಿಸಿದರೆ ಭಯಾನಕ ಚಿತ್ರವೊಂದು ಕಣ್ಣೆದುರು ಬಾರದೇ ಇರದು. ಇಷ್ಟಾಗಿಯೂ ದಾಖಲಾಗುವ ಇಷ್ಟು ದೊಡ್ಡ ಸಂಖ್ಯೆಯ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗುವವರು ಕೆಲವೇ ಆರೋಪಿಗಳು. 2021ರಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ.64ರಲ್ಲಷ್ಟೇ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಉಳಿದ ಶೇ.36 ಪ್ರಕರಣಗಳು ವಜಾಗೊಂಡಿವೆ.

2011ರಿಂದ 2020ರ ಅವಧಿಯಲ್ಲಿ ದಲಿತ ವಿರೋಧಿ ಪ್ರಕರಣಗಳು

ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, 2011ರಲ್ಲಿ ದಲಿತರ ವಿರುದ್ಧ 33,719 ಅಪರಾಧ ಪ್ರಕರಣಗಳು ನಡೆದಿವೆ ಮತ್ತು 2020ರಲ್ಲಿ ಈ ಸಂಖ್ಯೆ 50,291ಕ್ಕೆ ಏರಿದೆ. ಒಂದು ದಶಕದಲ್ಲಿನ ತೀವ್ರ ಏರಿಕೆ ಇದು. ಅದರಲ್ಲಿ ಸುಮಾರು ಶೇ.74ರಷ್ಟು ಪ್ರಕರಣಗಳು ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ನಡೆದವುಗಳಾಗಿವೆ. ಕಾಂಗ್ರೆಸ್ ಅವಧಿಯಲ್ಲಿಯೂ ಇಂಥ ಪ್ರಕರಣಗಳು ಕಡಿಮೆಯೇನಿರಲಿಲ್ಲ. ಆದರೆ ಈಗಿನ ಸರಕಾರದ ಅವಧಿಯಲ್ಲಿ ಅದು ದ್ವಿಗುಣಗೊಂಡಿದೆ.

ಪ್ರತೀ 16 ನಿಮಿಷಕ್ಕೊಮ್ಮೆ ದಲಿತರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿವೆ. ಪ್ರತಿನಿತ್ಯ 6 ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳಾಗುತ್ತಿವೆ.

ಕಳೆದ ದಶಕದಲ್ಲಿ ಅತಿ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶ (95,751), ಬಿಹಾರ (63,116), ರಾಜಸ್ಥಾನ (58,945), ಮಧ್ಯಪ್ರದೇಶ (44,469) ಮತ್ತು ಆಂಧ್ರಪ್ರದೇಶ (26,881) ರಾಜ್ಯಗಳಿಂದ ವರದಿಯಾಗಿವೆ. ದಲಿತರ ಕೊಲೆ ಮತ್ತು ದಲಿತ ಮಹಿಳೆಯರು, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು ಹೆಚ್ಚಿವೆ. ಅಷ್ಟಕ್ಕೂ ಇದು ದಾಖಲಾದ ಪ್ರಕರಣಗಳ ಸಂಖ್ಯೆ ಮಾತ್ರ. ಅಂದರೆ ವಾಸ್ತವವಾಗಿ ನಡೆದ ಪ್ರಕರಣಗಳು ಇನ್ನೂ ಹೆಚ್ಚು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕರ್ನಾಟಕದಲ್ಲೂ ಕಡಿಮೆಯಿಲ್ಲ

ದಲಿತರ ವಿರುದ್ಧದ ಅಪರಾಧ ಪ್ರಕರಣಗಳು ಉತ್ತರ ಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ಎಂದು ಎನ್‌ಸಿಆರ್‌ಬಿ ವರದಿ ಉಲ್ಲೇಖಿಸುತ್ತದಾದರೂ, ದಲಿತರ ವಿರುದ್ಧದ ಮೇಲ್ಜಾತಿ ಅಟ್ಟಹಾಸ ಇಲ್ಲಿಯೂ ತೀವ್ರವಾಗಿಯೇ ಇದೆ.

2020ರ ಎಪ್ರಿಲ್ 1ರಿಂದ 2021ರ ಮಾರ್ಚ್ 31ರವರೆಗೆ ದಾಖಲಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ಕೊಲೆ, ಶೋಷಣೆ ಮತ್ತಿತರ ಪ್ರಕರಣಗಳು 2,327. ಇದು ಹಿಂದಿನ ವರ್ಷ ದಾಖಲಾದ ಪ್ರಕರಣಗಳಿಗಿಂತ ಶೇ.54ರಷ್ಟು ಹೆಚ್ಚು ಎನ್ನುವುದು ಆತಂಕ ಮೂಡಿಸುವ ಸಂಗತಿ. ಹಿಂದಿನ ವರ್ಷ ಇಂಥ 1,504 ಪ್ರಕರಣಗಳು ದಾಖಲಾಗಿದ್ದವು.

ಆದರೆ ಇದಿಷ್ಟೂ ಪ್ರಕರಣಗಳಲ್ಲಿ ಖುಲಾಸೆಯಾಗಿರುವ ಪ್ರಕರಣಗಳ ಸಂಖ್ಯೆಯೇ ಶೇ.99.8ರಷ್ಟಿದೆ. ದಲಿತರ ನ್ಯಾಯದಾನ ವಿಚಾರದಲ್ಲಿ ರಾಜ್ಯವು ಕೊನೆಯ ಸ್ಥಾನದಲ್ಲಿದೆ ಎನ್ನುತ್ತವೆ ಅಂಕಿಅಂಶಗಳು. ಕರ್ನಾಟಕಕ್ಕೆ ಹೋಲಿಸಿದರೆ ಬೇರೆ ರಾಜ್ಯಗಳಲ್ಲಿ ಇಂಥ ಪ್ರಕರಣಗಳಲ್ಲಿನ ಶಿಕ್ಷೆಯ ಪ್ರಮಾಣ ಶೇ.36ರಷ್ಟಿದೆ. ಆದರೆ ಕರ್ನಾಟದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿನ ಶಿಕ್ಷೆಯ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ.

ಕರಾಳ ಹಿಂಸೆ

ಉತ್ತರ ಮತ್ತು ದಕ್ಷಿಣ ಭಾರತದಾದ್ಯಂತ ಪ್ರಬಲ ಜಾತಿಯವರು ಹೇಳಿದಂತೆ ಕೇಳಬೇಕಾದ ಸ್ಥಿತಿಯಲ್ಲಿದ್ದಾರೆ ದಲಿತರು. ಸಾಮಾನ್ಯವಾಗಿ ಪ್ರಾದೇಶಿಕ ಜಾತಿ ಶ್ರೇಣಿಯಲ್ಲಿ ಉನ್ನತ ಜಾತಿಯವರು ಪ್ರಬಲರಾಗಿರುತ್ತಾರೆ. ದಲಿತರಿಗೆ ಮೀಸಲಾತಿ ಸೌಲಭ್ಯವಿರುವುದರಿಂದ ಎಲ್ಲಿ ಅವರು ತಮ್ಮ ಸ್ಥಾನವನ್ನು ಕಿತ್ತುಕೊಳ್ಳುತ್ತಾರೋ ಎಂಬ ಭಯ ಸವರ್ಣೀಯರಿಗೆ. ಗ್ರಾಮೀಣ ಮೇಲ್ಜಾತಿಗಳು ಆರ್ಥಿಕವಾಗಿ ತುಳಿತಕ್ಕೊಳಗಾಗಿದ್ದರೂ ಕೆಳಜಾತಿಗಳನ್ನು ತುಳಿಯುವವರೇ. ನಗರ ದಲಿತರು ನಗರ ಸವರ್ಣೀಯರಿಂದ ಎದುರಿಸುವ ಸೂಕ್ಷ್ಮ ಹಿಂಸೆಗಿಂತ ಗ್ರಾಮೀಣ ದಲಿತರು ಅನುಭವಿಸುವ ಹಿಂಸೆ ಕರಾಳವಾಗಿರುತ್ತದೆ.

-ಕ್ರಿಸ್ಟೋಫ್ ಜಾಫ್ರೆಲಾಟ್, ರಾಜಕೀಯ ವಿಜ್ಞಾನಿ

ಬೌದ್ಧದಮ್ಮಕ್ಕೆ ಕರ್ನಾಟಕದ 450 ದಲಿತರು

ಸಮಾಜ ಮತ್ತು ಅದರ ರಾಜಕೀಯ ಪ್ರತಿನಿಧಿಗಳು ಮೂಲಭೂತವಾಗಿ ಬದಲಾಗುವವರೆಗೆ ಸಾಂವಿಧಾನಿಕ ಆದರ್ಶಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. 

-ಡಾ. ಬಿ.ಆರ್. ಅಂಬೇಡ್ಕರ್

ಕರ್ನಾಟಕ ಯಾದಗಿರಿ ಜಿಲ್ಲೆಯ ಶೊರಾಪುರದಲ್ಲಿ ನವೆಂಬರ್ ಕೊನೆಯಲ್ಲಿ 450ಕ್ಕೂ ಹೆಚ್ಚು ದಲಿತರು ಬೌದ್ಧದಮ್ಮಕ್ಕೆ ಸೇರ್ಪಡೆಯಾದರು. ಇವರೆಲ್ಲರೂ ಹಿಂದೂಧರ್ಮ ತ್ಯಜಿಸಿದ್ದು ಅಸ್ಪೃಶ್ಯರು ಎಂಬ ತಾರತಮ್ಯದಿಂದ ಬಿಡಿಸಿಕೊಳ್ಳುವುದಕ್ಕಾಗಿ. ಪ್ರತಿಭಟನೆಯ ಸಂಕೇತವಾಗಿ ಇಂಥದೊಂದು ಹೆಜ್ಜೆಯನ್ನು ಅವರು ತೆಗೆದುಕೊಂಡರು.

ಬೌದ್ಧದಮ್ಮ ಸ್ವೀಕಾರದ ಮೂಲಕ ತಾವು, ಜಾತಿ ವ್ಯವಸ್ಥೆ ಮತ್ತು ಅಸಮಾನತೆಯನ್ನು ಉತ್ತೇಜಿಸುತ್ತಿರುವ ಹಿಂದೂ ಧರ್ಮವನ್ನು ತಿರಸ್ಕರಿಸುತ್ತಿರುವುದು ಮಾತ್ರವಲ್ಲ, ಅಂಬೇಡ್ಕರರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಬೌದ್ಧದಮ್ಮ ಸ್ವೀಕರಿಸಿದವರ ಮಾತು.

1956ರಲ್ಲಿ ಅಂಬೇಡ್ಕರರು ಬೌದ್ಧದರ್ಮ ಸೇರಿದ ದಿನದಂದು ನಡೆದ 66ನೇ ಧಮ್ಮಚಕ್ರ ಪ್ರವರ್ತನದ ದಿನ ಕಾರ್ಯಕ್ರಮದಲ್ಲಿ ಅಂಬೇಡ್ಕರರು ಅಂದು ತೆಗೆದುಕೊಂಡಿದ್ದ 22 ಶಪಥಗಳನ್ನು ತೆಗೆದುಕೊಳ್ಳುವುದರೊಂದಿಗೆ ದಲಿತರು ಬೌದ್ಧದಮ್ಮಕ್ಕೆ ಸೇರಿದರು.

Similar News