‘ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ನಿಮ್ಮನ್ನು ಸೋಲಿಸುತ್ತೇವೆ’: ಸಿಎಂ ಬೊಮ್ಮಾಯಿಗೆ ದಲಿತ ಮುಖಂಡರ ಎಚ್ಚರಿಕೆ

Update: 2022-12-06 15:10 GMT

ಬೆಂಗಳೂರು, ಡಿ. 6: ‘ಪರಿಶಿಷ್ಟರಿಗೆ ಒಳ ಮೀಸಲಾತಿ ಕಲ್ಪಿಸುವ ವಿಚಾರ ಸಂಬಂಧದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಕುರಿತು ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಶಿಗ್ಗಾಂವ್ ಕ್ಷೇತ್ರದಲ್ಲೇ ನಿಮ್ಮನ್ನು ಸೋಲಿಸುವುದು ನಿಶ್ಚಿತ’ ಎಂದು ದಲಿತ ಮುಖಂಡರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಆಗಮಿಸಿದ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತ ಮುಖಂಡರಾದ ಹೆಣ್ಣೂರು ಶ್ರೀನಿವಾಸ್, ಮಂಜು ಹಾಗೂ ಚಂದ್ರಪ್ಪ ಸೇರಿದಂತೆ ಇನ್ನಿತರರು, ‘ಒಳಮೀಸಲಾತಿ ಅನುಷ್ಟಾನಗೊಳಿಸುವ ಸಂಬಂಧ ಕೇಂದ್ರಕ್ಕೆ ಕೂಡಲೇ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ಪಿಟಿಸಿಎಲ್ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಬೇಕು. ಜೊತೆಗೆ ಪೌರ ಕಾರ್ಮಿಕರ ನೇಮಕಾತಿಯಲ್ಲಿ ಲೋಡರ್ಸ್ ಮತ್ತು ಚಾಲಕರನ್ನು ಹೊರತುಪಡಿಸಿದ್ದು, ಸುಮಾರು 18 ಸಾವಿರಕ್ಕೂ ಅಧಿಕ ಮಂದಿ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಆ ಎಲ್ಲರನ್ನು ಕೂಡಲೇ ಖಾಯಂ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಹೆಣ್ಣೂರು ಶ್ರೀನಿವಾಸ್, ‘ಬೆಂ.ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ದಲಿತ ಭೂಮಿಯನ್ನು ಮೇಲ್ಜಾತಿಯವರು ಖರೀದಿ ಮಾಡಿದ್ದಾರೆ. ಹೀಗಾಗಿಯೇ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಮೀನಾಮೇಷ ಏಣಿಸುತ್ತಿದೆ. ಒಳಮೀಸಲಾತಿ ಜಾರಿ, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಹಾಗೂ ಎಲ್ಲ ಪೌರಕಾರ್ಮಿಕರ ನೇಮಕ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಶೋಷಿತರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

Similar News