ಕರ್ನಾಟಕವನ್ನು ಯುಪಿ, ಗುಜರಾತ್ ಮಾಡಲು ಬಿಡುವುದಿಲ್ಲ: ಸಿ.ಬಸವಲಿಂಗಯ್ಯ ಎಚ್ಚರಿಕೆ

Update: 2022-12-06 16:41 GMT

ಬೆಂಗಳೂರು, ಡಿ. 6: ‘ಇದು ಭಗವಾನ್ ಬುದ್ದ ಜನಿಸಿದ ನಾಡು, ಆದರೆ, ಇಲ್ಲಿ ಬುದ್ಧನೇ ಪರಕೀಯನಾಗಿದ್ದಾನೆ. ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ನಾವು ಕರ್ನಾಟಕವನ್ನು ಎಂದಿಗೂ ಯುಪಿ, ಗುಜರಾತ್, ಬಿಹಾರ ಮಾಡಲು ಬಿಡುವುದಿಲ್ಲ’ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಎಚ್ಚರಿಕೆ ನೀಡಿದ್ದಾರೆ

ಮಂಗಳವಾರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡ ‘ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ’ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನಾವೆಲ್ಲವರೂ ವಿಶ್ವಮಾನವರು, ನಾವೆಲ್ಲ ಒಂದೇ. ಮೂಲನಿವಾಸಿಗಳ ಮೇಲಿನ ದಮನ ದೌರ್ಜನ್ಯವನ್ನು ಒಟ್ಟಾಗಿ ಎದುರಿಸುತ್ತೇವೆ. ಇದು ಪೇಶ್ವೆ ಭಾರತವಲ್ಲ, ಇದು ಸಂವಿಧಾನ ಭಾರತ. ದೌರ್ಜನ್ಯ ನಡೆಸುವವರ ಡಿಎನ್‍ಎ ಪರಿಶೀಲಿಸಿದರೆ ನಮಗೆ ಸತ್ಯ ತಿಳಿಯುತ್ತದೆ’ ಎಂದರು.

‘ದಲಿತರ ತಮಟೆಯನ್ನು ಜನ ಕೀಳೆಂದು ತಿಳಿದಿದ್ದರು. ಅದನ್ನೆ ನಮ್ಮ ಹೋರಾಟದ ಅಸ್ತ್ರ ಮಾಡಿಕೊಂಡಿದ್ದೇವೆ. ಜಂಬೆ ಎನ್ನುವುದು ಆಫ್ರಿಕದಲ್ಲಿ ಹುಟ್ಟಿತು. ಅದಕ್ಕೂ ನಮಗೂ ಡಿಎನ್‍ಎ ಸಂಬಂಧವಿದೆ ಮತ್ತು ಜಂಬೆ ಇಂದು ವಿಶ್ವವ್ಯಾಪಿಯಾಗಿದೆ. ಈ ಸಾಂಸ್ಕೃತಿಕ ಆಯುಧಗಳ ಮೂಲಕ ಹೊಸ ಪ್ರತಿರೋಧ ಚಳವಳಿ ಕಟ್ಟುತ್ತೇವೆ. ಏಕೆಂದರೆ ಡಿಎಸ್‍ಎಸ್ ಎಂಬುದು ಒಂದು ಪಕ್ಷವಲ್ಲ, ಬದಲಿಗೆ ದಲಿತರ ಶಕ್ತಿ ಎಂದು ಅವರು ನುಡಿದರು.

‘ದೇಶದಲ್ಲಿ ದಲಿತರು ಯಾರನ್ನು ಕೊಂದಿಲ್ಲ, ಮೋಸ ಮಾಡಿಲ್ಲ. ಎಂದ ಅವರು, ಈ ಹಿಂದೆ ಸಿದ್ದಲಿಂಗಯ್ಯನವರ ‘ಇಕ್ಕುರ್ಲ ಹೊದಿರ್ಲ ಆ ನನ್ ಮಕ್ಕಳ ಚರ್ಮ ಎಬ್ಬುರ್ಲ’ ಎಂದು ಹಾಡಿದ್ದೇವೆ ಹೌದು. ಜೊತೆಗೆ ನಾವು ಕಟ್ಟುತ್ತೇವೆ, ನಾವು ಕಟ್ಟುತ್ತೇವೆ  ಹಾಡನ್ನು ಹಾಡುತ್ತೇವೆ. ನಮ್ಮದು ಸಾಂಸ್ಕೃತಿಕ ಪ್ರತಿರೋಧ’ ಎಂದು ಅವರು ಪ್ರಕಟಿಸಿದರು.

ಹಿರಿಯ ಪತ್ರಕರ್ತರ ಹಾಗೂ ಮುಖಂಡ ಇಂದೂಧರ ಹೊನ್ನಾಪುರ ಮಾತನಾಡಿ, ಎಪ್ಪತ್ತರ ದಶಕದಲ್ಲಿ ಆರಂಭವಾದ ದಲಿತ ಚಳುವಳಿ ದೇಶದಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಬ್ಬಿಸಿದೆ. ದಲಿತರೆಂದರೆ ಕೇವಲ ಅಸ್ಪೃಶ್ಯರಲ್ಲ, ಕೆಳ ಸಮುದಾಯದವರಲ್ಲ. ನಾಡಿನ ಎಲ್ಲ ಸಮುದಾಯಗಳ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದೆ. ನಾಡಿನ ಬದುಕನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಚಳುವಳಿ ಕೆಲಸ ಮಾಡಿದೆ. ದಲಿತ ಚಳುವಳಿ ಬೀದಿಯಲ್ಲಿ ಕೂಗುತ್ತಿದ್ದ ಘೋಷಣೆಗಳು ಸರಕಾರದ ಇಂದಿನ ಕಾರ್ಯಕ್ರಮಗಳಾಗಿವೆ ಎಂದು ತಿಳಿಸಿದರು.

ದಲಿತ ಮಕ್ಕಳ ವಿದ್ಯಾರ್ಥಿವೇತನವನ್ನು ನಿಲ್ಲಿಸಿ ಕಾರ್ಪೊರೇಟ್ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ದಲಿತ ಸಬ್ಸಿಡಿಗಳನ್ನು, ಸಂಶೋಧನಾ ಕೇಂದ್ರಗಳನ್ನು ಮುಚ್ಚಲಾಗಿದೆ. ಮನುವಾದವನ್ನು ತಳಸಮುದಾಯಕ್ಕೆ ಹೇರುವ ಕೆಲಸವಾಗುತ್ತಿದೆ. ಸಂವಿಧಾನವೆಂಬ ಭಾರತ ಸಮಾಜದ ಆತ್ಮವನ್ನು ಸುಡುವ ಕೆಲಸವಾಗುತ್ತಿದೆ. ಈ ನಿಟ್ಟಿನಲ್ಲಿ ದಲಿತರು ಐಕ್ಯತಾ ಹೋರಾಟವನ್ನು ನಡೆಸಿ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾಗಿರುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಸಂವಿಧಾನದ ಮೀಸಲಾತಿಯನ್ನೇ ಬುಡಮೇಲು ಮಾಡಲು ಬಿಜೆಪಿ ಸರಕಾರ ಹೊರಡಿದೆ. ತೆರಿಗೆಗಳನ್ನು ವಿಧಿಸಿ ಜನ ಹೈರಾಣಾಗಿದ್ದಾರೆ. ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಲೂಟಿಕೋರರನ್ನು ದೇಶದಿಂದ ಹೊರ ಹಾಕಬೇಕಾಗಿದೆ. ವಂಚಕರನ್ನು ಚುನಾವಣೆಯಿಂದ ಕಿತ್ತುಹಾಕಬೇಕಿದೆ. ಅಂಬೇಡ್ಕರ್ ಕೊಟ್ಟ ಒನ್ ಮ್ಯಾನ್ ಒನ್ ಓಟಿನಿಂದ ನಮ್ಮ ಶಕ್ತಿಯನ್ನು ತೋರಿಸಬೇಕಿದೆ. ಆದ್ದರಿಂದ ಸಮಾನ ಮನಸ್ಕ, ಸಿದ್ದಾಂತಬದ್ಧ ದಲಿತ ಸಂಘಟನೆಗಳು ಒಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಮರಿಸ್ವಾಮಿ ಮಾತನಾಡಿ, ಬಿಜೆಪಿ ಸರಕಾರ ಈ ಜನರು ಪೆದ್ದರು, ಏನು ಮಾಡಲ್ಲ, ನಮ್ಮನ್ನೇ ಆಯ್ಕೆ ಮಾಡುತ್ತಾರೆಂದು ಭಾವಿಸಿದೆ. ಎಲ್ಲವನ್ನೂ ತಮಗೆ ಬೇಕಾದಂತೆ ನಡೆಸಿಕೊಳ್ಳುತ್ತಿದ್ದೆ. ಆದರೆ ಜನ ಪ್ರಜ್ಞಾವಂತರಾಗಿ ಮುಂದಿನ ಚುನಾವನೆಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸದಿದ್ದರೆ ಉಳಿಗಾಲವಿಲ್ಲದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮಾವೇಶದಲ್ಲಿ ಸಂವಿಧಾನ ತಜ್ಞ ಹಾಗೂ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ದಸಂಸ ನಾಯಕರಾದ ಎನ್.ವೆಂಕಟೇಶ್, ಡಿ.ಜಿ.ಸಾಗರ್, ಅಣ್ಣಯ್ಯ, ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ಎನ್.ಮುನಿಸ್ವಾಮಿ, ಲಕ್ಷ್ಮಿ ನಾರಾಯಣ ನಾಗವಾರ, ಬಡಗಪುರ ನಾಗೇಂದ್ರ, ಕೆ.ದೊರೈರಾಜು, ಕೆ.ಗಂಗಮ್ಮ,  ಸೇರಿದಂತೆ ಇನ್ನಿತರ ಮುಖಂಡರು ವೇದಿಕೆಯಲ್ಲಿದ್ದರು.

ಇದನ್ನೂ ಓದಿ: ಬಿಜೆಪಿ ಸೇರಿದ 36 ರೌಡಿ ಶೀಟರ್ ಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ !

Similar News