ಪ್ರತಿನಿತ್ಯ ದಲಿತನ ಮೇಲೆ ಹಲ್ಲೆ ನಡೆಯುತ್ತಿದ್ದರೂ, ಯಾರೂ ಪ್ರಶ್ನಿಸುತ್ತಿಲ್ಲ: ನ್ಯಾ.ನಾಗಮೋಹನ್ ದಾಸ್

Update: 2022-12-06 16:00 GMT

ಬೆಂಗಳೂರು, ಡಿ. 6: ದೇಶದಲ್ಲಿ ಪ್ರತಿನಿತ್ಯ ಒಬ್ಬ ದಲಿತನ ಮೇಲೆ ಹಲ್ಲೆಯಾಗುತ್ತಿದೆ. ಆದರೆ ಅದನ್ನು ಯಾರು ಪ್ರಶ್ನಿಸುತ್ತಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರು  ಕಿಡಿಕಾರಿದರು.

ಮಂಗಳವಾರ ಇಲ್ಲಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಎಸ್ಟಿ-ಎಸ್ಸಿ ನೌಕರರ ಸಮನ್ವಯ ಸಮಿತಿಯು ಆಯೋಜಿಸಿದ್ದ ಡಾ.ಅಂಬೇಡ್ಕರ್ ಪರಿನಿಬ್ಬಾಣ ದಿಚಾರಣೆಯಲ್ಲಿ ಮಾತನಾಡಿದ ಅವರು, ಸರಕಾರವು ಎಸ್‍ಸಿಪಿ/ಟಿಎಸ್‍ಪಿ ಅನುದಾನವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿದೆ. ವಿದ್ರ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡಿಕೊಂಡಿದೆ. ಆದರೆ ಇದನ್ನು ಯಾರು ಪ್ರಶ್ನಿಸಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ನಾವು ಸರಕಾರವನ್ನು ಟೀಕೆ ಮಾಡಬೇಕು. ಆದರೆ ನಮ್ಮ ಜವಾಬ್ದಾರಿಯ ಬಗ್ಗೆ ನಮಗೆ ಅರಿವು ಇರಬೇಕು. ಡಿ.6ರಂದು ಅಂಬೇಡ್ಕರ್‍ಗೆ ಶ್ರದ್ಧಾಂಜಲಿ ಸಲ್ಲಿಸಿದರೆ ಸಾಲದು, ನಮಗೆ ಅಂಬೇಡ್ಕರ್ ಅವರ ಅರಿವು ಇರಬೇಕು ಎಂದ ಅವರು, ಪಾರ್ಲಿಮೆಂಟ್‍ನಲ್ಲಿ ನಮ್ಮ ಬದುಕಿನ ಬಗ್ಗೆ ಚರ್ಚೆ ಮಾಡದೆ, ಭಾವನಾತ್ಮಕತೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸಂವಿಧಾನದ ದಾರಿಯಲ್ಲಿ ಸಾಗಬೇಕು. ಆಗ ದೇಶ ಅಭಿವೃದ್ಧಿ ಅಗುತ್ತದೆ ಎಂದರು.  

ನಮ್ಮ ಘನತೆಯ ಬದುಕಿಗೆ ಸಂವಿಧಾನವೇ ಕಾರಣವಾಗಿದೆ. ಆದರೆ ಸಂವಿಧಾನಕ್ಕೆ ಧಕ್ಕೆ ಆಗುತ್ತಿದ್ದು, ದೇಶದಲ್ಲಿ ಸಂವಿಧಾನವನ್ನೇ ಸುಡುತ್ತಿದ್ದಾರೆ. ಸಂವಿಧಾನದ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬಂದವರು, ಸಂವಿಧಾನವನ್ನು ಬದಲಿಸುವಲ್ಲಿ ಕಾರ್ಯಪ್ರವೃತ್ತಾಗುತ್ತಿದ್ದಾರೆ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು. 

ಒಂದು ಅಟೆಂಡರ್ ಹುದ್ದೆಯನ್ನು ಪಡೆಯದ ಸಮುದಾಯಗಳು ನಮ್ಮ ಮುಂದೆ ಇವೆ. ಆದಿವಾಸಿ, ಕರ್ಮಚಾರಿ ಹಾಗೂ ಕೊಳಗೇರಿ ಪ್ರದೇಶದ ಜನರಿಗೆ ಮೀಸಲಾತಿ ಇನ್ನು ದೊರೆತಿಲ್ಲ. ಅವರಿಗೆ ಸಿಗದ ಮೀಸಲಾತಿಯು ಮೀಸಲಾತಿಯೇ ಅಲ್ಲ ಎಂದ ಅವರು, ಎಲ್ಲ ಸಮುದಾಯಗಳು ಪರಿಶಿಷ್ಟ ಸಮುದಾಯಗಳಿಗೆ ಸೇರುವ ಬಗ್ಗೆ ಎಲ್ಲ ದಿನಪತ್ರಿಕೆಗಳಲ್ಲಿ ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೆಪಿಎಸ್‍ಸಿಯ ಸದಸ್ಯ ಡಾ.ಚಂದ್ರಕಾಂತ ಡಿ.ಶಿವಕೇರಿ, ಐಎಎಸ್ ಅಧಿಕಾರಿ ಗಂಗೂಬಾಯಿ ರಮೇಶ್ ಮಾನಕರ್, ಡಾ. ಸುಜಾತ ರಾಥೋಡ್ ಬಿ.ಎಲ್., ಡಿ.ಶಿವಶಂಕರ್, ಡಾ. ವಿಜಯಕುಮಾರ್ ಸೇರಿದಂತೆ ಸಮನ್ವಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. 

Similar News