‘ಜಿಮ್’ ಒಪ್ಪಂದ; ಮುಂದಿನ 5 ವರ್ಷದೊಳಗೆ ಶೇ.75ರಷ್ಟು ಅನುಷ್ಠಾನ: ಸಚಿವ ಮುರುಗೇಶ್ ನಿರಾಣಿ

''10 ವರ್ಷಗಳಲ್ಲಿ ಡೀಸೆಲ್-ಇಂಜಿನ್ ಸಂಪೂರ್ಣ ನಿಷೇಧ''

Update: 2022-12-06 16:59 GMT

ಬೆಂಗಳೂರು, ಡಿ. 6: ನವೆಂಬರ್ ತಿಂಗಳಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಒಪ್ಪಂದಗಳು ಮುಂದಿನ 5 ವರ್ಷಗಳಲ್ಲಿ ಶೇ.75ರಷ್ಟು ಅನುಷ್ಠಾನಕ್ಕೆ ಬರಲಿದ್ದು, ಯಾವುದೇ ರೀತಿಯ ಅನುಮಾನ ಬೇಡ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದ್ದಾರೆ.

ಮಂಗಳವಾರ ಬೆಂಗಳೂರು ಪ್ರೆಸ್ ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸುಮಾರು 9.81 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆಯಾಗಿದೆ. ಉದ್ದಿಮೆಗಳಿಗೆ ಬೇಕಾದ ನೀರು, ಭೂಮಿ, ವಿದ್ಯುತ್, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಈಗಾಗಲೇ ಸಂಬಂಧಪಟ್ಟ ಇಲಾಖೆಗಳ ಜೊತೆ ಸಮನ್ವಯ ಸಮಿತಿಯನ್ನು ರಚಿಸಿದ್ದೇವೆ. ಇದು ನಮ್ಮ ನಿರೀಕ್ಷೆಗೂ ಮೀರಿ ಅನುಷ್ಠಾನವಾಗುತ್ತದೆ ಎಂದರು.

ರಾಜ್ಯದಲ್ಲಿ 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಮುಂದೆ ಬಂದಿದ್ದರೂ ನಾವು ಅವರ ಜೊತೆ ಎಂಒಯು ಮಾಡಿಕೊಂಡಿಲ್ಲ. ಈಗಾಗಲೇ ಮಾಡಿಕೊಂಡಿರುವ ತಿಳುವಳಿಕೆ ಒಪ್ಪಂದ ಪತ್ರಕ್ಕೆ (ಎಂಒಯು) ಆದ್ಯತೆ ಕೊಡುತ್ತೇವೆ. ಕೇವಲ ಅಂಕಿ-ಸಂಖ್ಯೆಗಳನ್ನು ಹೆಚ್ಚಿಸಲು ಒಪ್ಪಂದ ಮಾಡಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಮಾಣ ಪತ್ರ ಆಧಾರಿತ ತಿಳುವಳಿ ಮಾಡಿಕೊಂಡಿರುವವರ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ.  ಯಾರು ನಮ್ಮ ರಾಜ್ಯದಲ್ಲಿ ಖಚಿತವಾಗಿ ಹೂಡಿಕೆ ಮಾಡಿ ಉದ್ಯಮಗಳನ್ನು ಆರಂಭಿಸುತ್ತಾರೋ ಅಂತಹವರಿಗೆ ಮಾತ್ರ ಆದ್ಯತೆ ಕೊಟ್ಟಿದ್ದೇವೆ.  ಹಿಂದಿನ ಸರಕಾರಗಳ ಕೆಲವು ತಪ್ಪುಗಳಿಂದಾಗಿ ಯೋಜನೆಗಳು ಅನುಷ್ಠಾನವಾಗಲಿಲ್ಲ ಎಂದು ಮುರುಗೇಶ್ ನಿರಾಣಿ ಬೇಸರ ವ್ಯಕ್ತಪಡಿಸಿದರು.

ಶೇ.90ರಷ್ಟು ಟಯರ್-2 ಮತ್ತು 3 ನಗರಗಳಲ್ಲಿ ಹೂಡಿಕೆಯಾಗಿವೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಗಮನಹರಿಸಿದ್ದೇವೆ. ಕೈಗಾರಿಕಾ ಉದ್ದೇಶಗಳಿಗೆ ರೈತರಿಂದ ಬಲವಂತವಾಗಿ ಜಮೀನು ಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ಸ್ವಯಂಪ್ರೇರಿತರಾಗಿ ಯಾರು ಜಮೀನು ಕೊಡಲು ಬರುತ್ತಾರೋ ಅಂತಹವರಿಂದ ಮಾತ್ರ ಪಡೆಯುತ್ತೇವೆ. ಕೃಷಿ ಯೋಗ್ಯ ಜಮೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಉದ್ಯೋಗ ಸೃಷ್ಟಿ:ಇಂದು ಕರ್ನಾಟಕ ಉದ್ಯೋಗ ಮಿತ್ರದಲ್ಲಿ ನಡೆದ 136ನೇ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ 59 ಯೋಜನೆಗಳಿಂದ 20627.88 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದ್ದು, ಇದರಿಂದ 80,764 ಜನರಿಗೆ ಉದ್ಯೋಗಾವಕಾಶ ಲಭಿಸಲಿವೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ಎಥನಾಲ್ ಬಳಕೆಗೆ  ಹೆಚ್ಚು ಒತ್ತು: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೊರೆಯನ್ನು ತಗ್ಗಿಸಿ ಎಥನಾಲ್ ಬಳಕೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಈಗಾಗಲೇ ಡೀಸೆಲ್ ಇಂಜಿನ್ ವಾಹನಗಳ ಆಮದನ್ನು ಬಂದ್ ಮಾಡಲಾಗಿದೆ. ವಾಹನಗಳನ್ನು ಬಯೋ ಫ್ಯೂಲ್ ಅಂದರೆ ಸ್ಥಳೀಯವಾಗಿ ದೊರೆಯುವ ಎಥನಾಲ್ ತೈಲದಿಂದ ಚಾಲನೆ ಮಾಡಲು ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.

10 ವರ್ಷಗಳಲ್ಲಿ ಡೀಸೆಲ್-ಇಂಜಿನ್ ಸಂಪೂರ್ಣ ನಿಷೇಧ:  ಮುಂದಿನ ಹತ್ತು ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಡಿಸೇಲ್-ಪೆಟ್ರೋಲ್ ಇಂಜಿನ್ ಸಂಪೂರ್ಣ ನಿಷೇಧಿಸಲಾಗುವುದು ಎಂದು ತಿಳಿಸಿದರು.

ಎಲ್ಲರಿಗೂ ಮೀಸಲಾತಿ ಸಿಗಲಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ ಸರಕಾರ ಸಕಾರಾತ್ಮಕವಾದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ನೀಡುವ ವರದಿ ಮೇಲೆ ಮುಂದಿನ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ಪಂಚಮಸಾಲಿ ಸಮುದಾಯದ ಜೊತೆಗೆ  ವೀರಶೈವ, ಲಿಂಗಾಯತ ಸಮುದಾಯದಲ್ಲಿರುವ ಸಣ್ಣ ಸಣ್ಣ ಸಮುದಾಯಕ್ಕೂ ಮೀಸಲಾತಿ ಸಿಗಬೇಕೆಂಬುದು ನಮ್ಮ ಆಶಯ. ಈಗಲೂ  ನಮ್ಮ ಸಮುದಾಯದಲ್ಲಿ ಕೆಲವರಿಗೆ ಸೂಕ್ತವಾದ ಸಂವಿಧಾನ ಬದ್ಧ ಸ್ಥಾನಮಾನಗಳು ಸಿಕ್ಕಿಲ್ಲ. ನನ್ನ ಪ್ರಕಾರ ಸಮಸ್ತ ವೀರಶೈವ ಸಮುದಾಯಕ್ಕೆ ಮೀಸಲಾತಿ ಅಗತ್ಯ. ಹಿಂದುಳಿದ ವರ್ಗಗಳ ಆಯೋಗ ವರದಿ ಕೊಟ್ಟ ತಕ್ಷಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಮಾಧ್ಯಮ ಸಂವಾದದಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಖಜಾಂಚಿ ಮೋಹನ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಹಾಜರಿದ್ದರು.

Similar News