ಆರ್ ಆರ್ ನಗರದಲ್ಲಿ ಒಕ್ಕಲಿಗ ಮತದಾರರ ಹೆಸರು ಡಿಲೀಟ್: ಸಂಸದ ಡಿ.ಕೆ.ಸುರೇಶ್ ಆರೋಪ

''ಖಾಲಿ ನಿವೇಶದಲ್ಲಿ 46 ಮತದಾರರು..''

Update: 2022-12-07 11:53 GMT

ಬೆಂಗಳೂರು, ಡಿ.7: ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ರದ್ದು ಮಾಡಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಬುಧವಾರ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಮನೋಜ್ ಕುಮಾರ್ ಮೀನಾ ಅವರಿಗೆ ದೂರು ಸಲ್ಲಿಸದ ಬಳಿಕ ಅವರು ಮಾತನಾಡಿದರು.

ಮತದಾರರ ಪರಿಷ್ಕರಣೆಯಲ್ಲಿ ವ್ಯಾಪಾಕ ಅಕ್ರಮ ನಡೆದಿದೆ. ಈ ಸಂಬಂಧ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಲವು ಕಾನೂನು ಬಾಹಿರ ಚಟುವಟಿಕೆಗಳು ಬೆಳಕಿಗೆ ಬಂದಿವೆ. ಅದರಲ್ಲೂ, ಕಾಂಗ್ರೆಸ್ ಪಕ್ಷದ ಬೆಂಬಲಿತ ಮತದಾರರು, ಒಕ್ಕಲಿಗ ಸಮುದಾಯದವರನ್ನು ಗುರಿಯಾಗಿಸಿ ಕೊಂಡು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳಿದರು.

ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿಯೇ ಕಳೆದ ವಿಧಾನಸಭಾ ಚುನಾವಣೆಯಿಂದ ನ.9ರವರೆಗೆ ಅನಧಿಕೃತವಾಗಿ ಸುಮಾರು 1.30 ಲಕ್ಷ ಮತಗಳ ಸೇರ್ಪಡೆಯಾಗಿದ್ದು, 75 ಸಾವಿರ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದ ಅವರು, ಈ ಸಂಬಂಧ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. 

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಹಳಷ್ಟು ನಕಲಿ ಮತಗಳ ಸೇರ್ಪಡೆಯಾಗಿದ್ದು, ನಾವು ಸ್ಥಳ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಖಾಲಿ ನಿವೇಶನ ಹಾಗೂ ಖಾಲಿ ಮನೆಗಳಲ್ಲಿ ಸಾವಿರಾರು ಮತದಾರರ ಹೆಸರು ಸೇರ್ಪಡೆಯಾಗಿವೆ. ಚಿಲುಮೆ ಎಂಬ ಸಂಸ್ಥೆ ಮೂಲಕ ಬೆಂಗಳೂರಿನಲ್ಲಿ ಬಿಜೆಪಿ ನಾಯಕರು, ಮಂತ್ರಿಗಳು, ಶಾಸಕರು ಮತಪಟ್ಟಿ ಪರಿಷ್ಕರಣೆ ಹೆಸರಲ್ಲಿ ಭಾರಿ ಅಕ್ರಮ ಮಾಡಿದ್ದಾರೆ ಎಂದು ಆಪಾದಿಸಿದರು.

ಯಾವುದೇ ಮತದಾರ ತನ್ನ ಹೆಸರನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅಥವಾ ತೆಗೆಸಬೇಕಾದರೆ ಅವರು ಫಾರಂ 6 ಮತ್ತು 7 ಅನ್ನು ಕಡ್ಡಾಯವಾಗಿ ನೀಡಬೇಕು. ನಂತರ ಅದು ಪರಿಶೀಲನೆ ಆಗುತ್ತದೆ. ಆದರೆ ಈ ಕ್ಷೇತ್ರದ ಶಾಸಕರು ಹಾಗೂ ಮಂತ್ರಿಗಳ ನಿರ್ದೇಶನದ ಮೇರೆಗೆ ಫಾರಂ 6 ಮತ್ತು 7 ಇಲ್ಲದೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಆರ್‍ಆರ್ ನಗರದಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ಈ ಹಿಂದೆ ಸಾಕಷ್ಟು ಉದಾಹರಣೆಗಳಿದ್ದರೂ ಚುನಾವಣಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯಾಕೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಈಗಲಾದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿರಿಕೆ ಮಾಡಿಕೊಡಲಾಗಿದೆ ಎಂದು ಸುರೇಶ್ ಹೇಳಿದರು.

► ''ಖಾಲಿ ನಿವೇಶದಲ್ಲಿ 46 ಮತದಾರರು..''

ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 10 ದಿನಗಳಿಂದ ಬೂತ್ ಮಟ್ಟದಲ್ಲಿ ಮತಗಳ ಸಮೀಕ್ಷೆ ಮಾಡಿದ ಸಮಯದಲ್ಲಿ ಖಾಲಿ ನಿವೇಶನ ಒಂದರಲ್ಲಿಯೇ 46 ಮತಗಳ ಸೇರ್ಪಡೆ ಆಗಿದೆ. ಹಾಗೇ, ಪ್ರತಿ ಬೂತ್ ನಲ್ಲಿ 20ರಿಂದ 25 ಮತಗಳನ್ನು ಸೇರಿಸಲಾಗುತ್ತಿದೆ. ಬೇರೆ ರಾಜ್ಯಗಳಿಂದ ಬೋಗಸ್ ಮತದಾರರನ್ನು ಕರೆಸಲಾಗಿದೆ ಎಂದು ಡಿ.ಕೆ.ಸುರೇಶ್ ಆರೋಪಿಸಿದರು.

ಇದನ್ನೂ ಓದಿ: ಆರ್.ಆರ್.ನಗರದಲ್ಲಿ ಮತದಾರರ ಪಟ್ಟಿ ಅಕ್ರಮ ಆರೋಪ: ಕಾಂಗ್ರೆಸ್ ನಿಂದ ಚುನಾವಣಾ ಆಯೋಗಕ್ಕೆ ದೂರು

Similar News