ರಾಜಕೀಯ ಬಿಟ್ಟು ಕೂಲಿ ಮಾಡಿಕೊಂಡು ಬೇಕಾದ್ರೆ ಇರುತ್ತೇನೆ, ಮತ್ತೆ ಕಾಂಗ್ರೆಸ್ ಸೇರಲ್ಲ: ಸಚಿವ ಮುನಿರತ್ನ

''ಮತದಾರರ ಹೆಸರು ಡಿಲೀಟ್ ಮಾಡುವಷ್ಟು ಕೀಳುಮಟ್ಟ ನನ್ನದಲ್ಲ...''

Update: 2022-12-07 13:59 GMT

ಬೆಂಗಳೂರು, ಡಿ.7: 'ರಾಜಕೀಯ ಬಿಟ್ಟು ಕೂಲಿ ಮಾಡಿಕೊಂಡು ಇರುತ್ತೇನೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ವಾಪಸ್ ಹೋಗುವುದಿಲ್ಲ' ಎಂದು ಸಚಿವ ಮುನಿರತ್ನ ಸ್ಪಷ್ಟಪಡಿಸಿದ್ದಾರೆ. 

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಿಮ್ಮ ಇಂತಹ ಮಾತುಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬಂದಿರೋದು. 17 ಜನ ಒಟ್ಟಿಗೆ ಪಕ್ಷ ಬಿಟ್ಟಿದ್ದು. ನಿಮ್ಮ ಸಹವಾಸ ಬಿಟ್ಟಿದ್ದಕ್ಕೆ ನಾವು ನೆಮ್ಮದಿಯಿಂದ ಇದ್ದೇವೆ ಎಂದ ಅವರು, ಬೆಂಗಳೂರು ನಗರಕ್ಕೆ ನಿಮ್ಮ ಕೊಡುಗೆ ಏನು? ರಾಜರಾಜೇಶ್ವರಿ ನಗರಕ್ಕೆ ನಿಮ್ಮ ಕೊಡುಗೆ ಏನು?' ಎಂದು ಪ್ರಶ್ನಿಸಿದರು.

'ಮತದಾರರ ಪಟ್ಟಿಯಿಂದ ಹೆಸರುಗಳನ್ನು ಡಿಲೀಟ್ ಮಾಡುವಷ್ಟು ಕೀಳು ಮಟ್ಟ ನನ್ನದಲ್ಲ. ನನ್ನ ತೇಜೋವಧೆ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆಂದು ಅಂದುಕೊಂಡಿದ್ದರೆ ಆ ಆಲೋಚನೆಯನ್ನೆ ಬಿಟ್ಟು ಬಿಡಿ' ಎಂದು ಸಂಸದ ಡಿ.ಕೆ.ಸುರೇಶ್‍ಗೆ ತಿರುಗೇಟು ನೀಡಿದರು.

ಎಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲಾಗಿ, ಎಲ್ಲಿ ಸೇರಿಸಲಾಗಿದೆ ಎಂಬುದರ ಬಗ್ಗೆ ಡಿ.ಕೆ.ಸುರೇಶ್ ಅವರೆ ಸರಿಯಾದ ಮಾಹಿತಿ ತೆಗೆದುಕೊಂಡು ಬನ್ನಿ. ನಾನು ನಿಮ್ಮ ಜೊತೆ ಇದ್ದಾಗ ಯಾವ ಹೆಸರುಗಳು ಸೇರ್ಪಡೆಯಾಗಿರಲಿಲ್ಲ, ಕೈ ಬಿಡಲಾಗಿರಲಿಲ್ಲ. ಆಗ ಬಹಳ ಪವಿತ್ರವಾಗಿದ್ದೆ. ಈಗ ಬಿಜೆಪಿ ಸೇರುತ್ತಿದ್ದಂತೆ ನನ್ನ ಪಾವಿತ್ರ್ಯತೆ ಹೋಗಿದೆ ಅಲ್ಲವೇ ಎಂದು ಪ್ರಶ್ನಿಸಿದರು.

ನೀವು ನಿಮ್ಮ ಸ್ಥಾನಕ್ಕೆ ಘನತೆ ತರುವಂತಹ ಹೇಳಿಕೆಗಳನ್ನು ನೀಡಿ. ಮತದಾರರ ಹೆಸರುಗಳನ್ನು ಡಿಲೀಟ್ ಮಾಡುವಷ್ಟು ಕೀಳು ಮಟ್ಟದ ರಾಜಕಾರಣ ನಾನು ಎಂದು ಮಾಡಿಲ್ಲ. ನಿಮಗೆ ಅಂತಹ ಅಭ್ಯಾಸಗಳಿರಬಹುದು. ಮಲ್ಲೇಶ್ವರಂನಲ್ಲಿ ನನ್ನದು ಐದನೇ ತಲೆಮಾರು, ನಿಮಗೆ ಗೊತ್ತಿರದಿದ್ದರೆ ನಿಮ್ಮ ಅಣ್ಣನನ್ನು ಕೇಳಿ ಎಂದು ಮುನಿರತ್ನ ಹೇಳಿದರು. 

ನಾನು ಮಲ್ಲೇಶ್ವರದಲ್ಲೇ ಹುಟ್ಟಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸಿ ನಾನು ಕ್ಷೇತ್ರದಲ್ಲಿ ಓಡಾಡಲ್ಲ, ಮತಯಾಚನೆ ಮಾಡಲ್ಲ, ನೀವು ಅದೇ ರೀತಿ ಮಾಡಿ, ಮುಂದಿನದ್ದು ಜನರ ತೀರ್ಮಾನಕ್ಕೆ ಬಿಡೋಣ ಎಂದು ಮುನಿರತ್ನ ಸವಾಲು ಹಾಕಿದರು.

Similar News