ಎಲ್ಲರಿಗೂ ಆಹಾರ: ಕ್ರಮಿಸಬೇಕಾದ ದಾರಿ ಇನ್ನೂ ದೂರ

Update: 2022-12-08 08:25 GMT

ಕರ್ನಾಟಕವೂ ಹಿಂದಕ್ಕೆ

ಆಹಾರ ಭದ್ರತೆ, ಸುರಕ್ಷತೆ ಸೂಚ್ಯಂಕದಲ್ಲಿ ಕರ್ನಾಟಕ ಕೂಡ ಕುಸಿತ ಕಂಡಿದೆ. ಕೇಂದ್ರ ಸರಕಾರದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬಿಡುಗಡೆ ಮಾಡಿರುವ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ, ಕರ್ನಾಟಕ ಈ ಸಲ 10ನೇ ಸ್ಥಾನಕ್ಕೆ ಕುಸಿದಿದೆ. ಈ ಮೊದಲು ಕರ್ನಾಟಕ ಈ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿತ್ತು.

 ಕೈಗೆಟಕುವ ದರದಲ್ಲಿ ಆಹಾರ ಲಭ್ಯತೆ, ಗುಣಮಟ್ಟ, ಸುರಕ್ಷತೆ, ಗ್ರಾಹಕರ ಸಬಲೀಕರಣ, ಆಹಾರದ ತರಬೇತಿ ಮತ್ತು ಸಾಮರ್ಥ್ಯದ ಮಾನದಂಡಗಳ ಆಧಾರದಲ್ಲಿ ರಾಜ್ಯಗಳಿಗೆ ಅಂಕ ನೀಡಲಾಗಿದೆ. ಇಪ್ಪತ್ತು ದೊಡ್ಡ ರಾಜ್ಯಗಳ ಪೈಕಿ ಕರ್ನಾಟಕ ಹತ್ತನೇ ಸ್ಥಾನಕ್ಕೆ ಕುಸಿದಿದೆ. ಇದು ಭವಿಷ್ಯತ್ತಿನಲ್ಲಿ ರಾಜ್ಯದಲ್ಲಿ ಆಹಾರದ ಕೊರತೆ ತಲೆದೋರಲಿದೆ ಎಂಬುದರ ಎಚ್ಚರಿಕೆಯೂ ಆಗಿದೆ.

‘‘ದೇಶದಲ್ಲಿ ಯಾರೂ ಖಾಲಿ ಹೊಟ್ಟೆಯಲ್ಲಿ ಮಲಗುವಂತಾಗ ಬಾರದು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (ಎನ್‌ಎಫ್‌ಎಸ್‌ಎ) ಅನುಸಾರವಾಗಿ ದೇಶದ ಕಟ್ಟಕಡೆಯ ವ್ಯಕ್ತಿಗೂ ಆಹಾರಧಾನ್ಯ ತಲುಪುವಂತಾಗುವುದು ಸರಕಾರದ ಕರ್ತವ್ಯ’’ ಎಂದು ಸುಪ್ರೀಂ ಕೋರ್ಟ್ ಮಂಗಳವಾರವಷ್ಟೆ ಹೇಳಿದೆ. ಈ ಮೂಲಕ ಅದು, 2011ರ ಜನಗಣತಿಯಲ್ಲಿ ಗುರುತಿಸಲ್ಪಟ್ಟ ವರಿಗಷ್ಟೆ ಆಹಾರ ಭದ್ರತೆ ಕಾಯ್ದೆಯ ಪ್ರಯೋಜನ ಸೀಮಿತವಾಗದೆ, ಅಗತ್ಯವಿರುವ ಇನ್ನಷ್ಟು ಮಂದಿಗೆ ಸಿಗುವಂತಾಗಬೇಕು ಎಂಬುದನ್ನು ಸೂಚಿಸಿದೆ. ಸಂವಿಧಾನದ 21ನೇ ವಿಧಿಯ ಅಡಿ ನೀಡಲಾಗಿರುವ ಆಹಾರದ ಹಕ್ಕಿನಿಂದ ಯಾರೂ ವಂಚಿತರಾಗಕೂಡದು ಎಂಬುದು ನ್ಯಾಯಾಲಯದ ಕಳಕಳಿ.

ಈಚಿನ ವರ್ಷಗಳಲ್ಲಿ ಕಣ್ಣಿಗೆ ಹೊಡೆದಂತೆ ಕಾಣಿಸುತ್ತಿರುವುದು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕುಸಿತ ಕಾಣುತ್ತಲೇ ಇದೆಯೆಂಬ ವಿಚಾರ. ಹಾಗೆಯೇ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣ ಕೂಡ ಲಕ್ಷಗಟ್ಟಲೆ ಲೆಕ್ಕದಲ್ಲಿದೆ. ಒಂದು ಅಂದಾಜಿನ ಪ್ರಕಾರ ಇದು ವಿಶ್ವದಲ್ಲಿ ಆಹಾರ ಕೊರತೆಯಿಂದ ಬಳಲುತ್ತಿರುವ ಒಟ್ಟು ಜನಸಂಖ್ಯೆಯ ಶೇ.23ರಷ್ಟು.

ಸರಕಾರ ಹೇಳುವುದು ಆಹಾರ ಭದ್ರತೆ ಕಾಯ್ದೆಯನ್ನು ಕಡ್ಡಾಯ ವಾಗಿ ಜಾರಿಗೊಳಿಸದೇ ಇದ್ದಲ್ಲಿ ಅರ್ಹ ಮತ್ತು ಅಗತ್ಯವುಳ್ಳ ಸಾಕಷ್ಟು ಫಲಾನುಭವಿಗಳು ಇದರ ಪ್ರಯೋಜನದಿಂದ ವಂಚಿತರಾಗುತ್ತಾರೆ ಎಂಬುದು ಸಾಮಾಜಿಕ ಕಾರ್ಯಕರ್ತರು ವ್ಯಕ್ತಪಡಿಸುವ ಆತಂಕ. ಸರಕಾರ ಹೇಳುತ್ತಿರುವುದು, 91 ಕೋಟಿಯಷ್ಟು ಜನರು ಎನ್‌ಎಫ್‌ಎಸ್‌ಎ ವ್ಯಾಪ್ತಿಗೆ ಒಳಪಡುತ್ತಿದ್ದು. ಈ ಪಟ್ಟಿಗೆ ಮತ್ತಷ್ಟು ಮಂದಿಯನ್ನು ಸೇರ್ಪಡೆ ಮಾಡಲಾಗುತ್ತಲೇ ಇದೆ ಎಂದು.

ಕಳೆದ ಜುಲೈನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಆಹಾರ ಭದ್ರತೆಗೆ ಭಾರತದ ಕೊಡುಗೆಗಳನ್ನು ವಿವರಿಸಿದ ಕಾರ್ಯದರ್ಶಿ ಸ್ನೇಹಾ ದುಬೆ ಕೂಡ, ಕೋವಿಡ್ ಸಮಯದಲ್ಲಿ 80 ಕೋಟಿ ಜನರಿಗೆ ಆಹಾರದ ನೆರವು ಮತ್ತು 40 ಕೋಟಿ ಜನರಿಗೆ ನಗದು ವರ್ಗಾವಣೆ ಮಾಡಲಾಯಿತು ಎಂಬ ಮಾಹಿತಿಯನ್ನು ಕೊಟ್ಟರು. ಮಹಿಳೆಯರು, ಮಕ್ಕಳು ಸೇರಿದಂತೆ ದುರ್ಬಲ ವರ್ಗದ ಗುಂಪುಗಳಿಗೆ ಪೌಷ್ಟಿಕಾಂಶದ ಅಭಿಯಾನವನ್ನೂ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಇದಾವುದೂ ಅವಾಸ್ತವ ಚಿತ್ರವೇನೂ ಅಲ್ಲ. ಆದರೆ ಪರಿಣಿತರ ಪ್ರಕಾರ ಭಾರತದ ಆಹಾರ ಭದ್ರತೆ ಸಾಧ್ಯವಾಗಬೇಕಾದರೆ ಎರಡು ಅಂಶಗಳತ್ತ ಗಮನ ಕೊಡಲೇಬೇಕು. ಮೊದಲನೆಯದು, ಆಹಾರೋತ್ಪನ್ನಗಳಿಗೆ ಸೂಕ್ತವಾದ ಬೆಲೆ ಸಿಗುವಂತೆ ಸರಕಾರ ನೋಡಿಕೊಳ್ಳಬೇಕು. ಇದಕ್ಕಾಗಿ ಗರಿಷ್ಠ ಮಟ್ಟದಲ್ಲಿ ಗರಿಷ್ಠ ಸಂಖ್ಯೆಯ ಆಹಾರೋತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ದೊರಕುವಂತಾಗಬೇಕು. ಎರಡನೆಯದಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಮುಕ್ತ ಬೆಳೆ ಖರೀದಿ ವ್ಯವಸ್ಥೆಯನ್ನು ಉತ್ತಮಪಡಿಸುವುದು ತೀರಾ ಅವಶ್ಯಕ.

ಆಹಾರ ಭದ್ರತೆ ಸೂಚ್ಯಂಕದಲ್ಲಿ ಭಾರತವು ಕುಸಿತ ಕಾಣುತ್ತಿದೆ. ಕೈಗೆಟಕುವ ದರದಲ್ಲಿ ಆಹಾರ ಸಿಗುವ ವಿಚಾರದಲ್ಲಿ ಭಾರತವು ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕಿಂತ ಹಿಂದಿದೆ ಎಂಬ ವರದಿಗಳಿವೆ. ಕೈಗೆಟಕುವ ದರದಲ್ಲಿ ಆಹಾರ ಸಿಗುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 50.2 ಅಂಕವಿದ್ದು, ಪಾಕಿಸ್ತಾನ 52.6 ಅಂಕವನ್ನೂ, ಶ್ರೀಲಂಕಾ 62.9 ಅಂಕವನ್ನೂ ಪಡೆದಿರುವುದು ಎಕನಾಮಿಸ್ಟ್ ಇಂಪ್ಯಾಕ್ಟ್ ಮತ್ತು ಕಾರ್ಟವಾ ಅರಿಸೈನ್ಸ್ ಸಂಸ್ಥೆಗಳು ಸಿದ್ಧಪಡಿಸಿದ ವರದಿಯಿಂದ ಗೊತ್ತಾಗುತ್ತದೆ. ಆಹಾರ ಭದ್ರತೆಯನ್ನು ಸೂಚಿಸುವ 58 ಅಂಶಗಳನ್ನು ಪರಿಗಣಿಸಿ ಸಿದ್ಧಪಡಿಸಿರುವ ವರದಿಯಿದು.

ಆಹಾರ ಸಮರ್ಪಕತೆ ಗುರಿ ಮುಟ್ಟುವಲ್ಲಿ ಭಾರತ ಬಹುದೂರ ಬಂದಿರುವುದು ನಿಜವೇ ಆದರೂ, ಆಹಾರ ಸಮತೋಲನದ ಗುರಿಯಲ್ಲಿ ಆರೋಗ್ಯಕರ ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳುವುದು ಈಗಿನ ಅಗತ್ಯ. ಉತ್ತಮ ಗುಣಮಟ್ಟದ ಆಹಾರ ಉತ್ಪಾದನೆಗೆ ಅನುಸರಿಸಬೇಕಾದ ದಾರಿ ಕ್ರಿಮಿನಾಶಕ ಬಳಕೆ ಯಿಂದ ಮುಕ್ತವಾದದ್ದಾಗಿರಬೇಕಾದುದು ಕೂಡ ಅಗತ್ಯ. ಹವಾಮಾನ ವೈಪರೀತ್ಯ ಹಾಗೂ ಸಾಂಕ್ರಾಮಿಕ ರೀತಿಯ ಸವಾಲುಗಳ ಹಿನ್ನೆಲೆಯಲ್ಲಿ ಭಾರತಕ್ಕೆ ಹೆಚ್ಚು ಸುಭದ್ರ, ಸುಸ್ಥಿರ ಹಾಗೂ ನ್ಯಾಯೋಚಿತ ಆಹಾರ ವ್ಯವಸ್ಥೆಯ ಅಗತ್ಯವಿದೆ. ವಿಜ್ಞಾನ, ತಂತ್ರಜ್ಞಾನದಲ್ಲಿಂದು ಕ್ರಾಂತಿಯನ್ನು ಅಳವಡಿಸಿ ಹೊಸ ಸಾಧ್ಯತೆಯನ್ನು ಕಂಡುಕೊಳ್ಳುವ ಬಗ್ಗೆಯೂ ಪರಿಣಿತರು ಒತ್ತು ನೀಡುತ್ತಾರೆ.

ಒಂದು ಸಮುದಾಯ, ಉದ್ಯಮ ಹಾಗೂ ಸರಕಾರವಾಗಿ ಒಟ್ಟು ಸೇರಿ ಕೈಗೆಟಕುವ ದರದಲ್ಲಿ ರುಚಿಕರ ಆಹಾರದ ಸೃಷ್ಟಿಗೆ ಆಹಾರ ವಿಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಇದು ಬಳಕೆದಾರರಿಗೆ ಸೂಕ್ತ ಆಹಾರದ ಆಯ್ಕೆಯನ್ನು ನಿತ್ಯ ಜೀವನದಲ್ಲಿ ಮಾಡಿಕೊಳ್ಳುವ ಹಕ್ಕನ್ನು ಒದಗಿಸುತ್ತದೆ. ಆಹಾರ ವಿಜ್ಞಾನದ ಬಳಕೆ ಹಲವು ಭರವಸೆಗಳನ್ನು ಹೊಂದಿದೆ. ಸಾರ್ವಜನಿಕ ಹಿತ ಹಾಗೂ ಭೂಮಿಯ ಒಳಿತಿಗಾಗಿ ಇದನ್ನು ಅರ್ಥಮಾಡಿಕೊಳ್ಳುವುದು ಅಗತ್ಯವೆನ್ನುತ್ತಾರೆ ಪರಿಣಿತರು.

ತರಕಾರಿಯಂತಹ ತಾಜಾ ಉತ್ಪನ್ನ, ಉಗ್ರಾಣಗಳಲ್ಲಿ ಸೂಕ್ತವಾಗಿ ದಾಸ್ತಾನು ಮಾಡದೆ ಅಥವಾ ಸಾಗಣೆ ವೇಳೆ ಸೂಕ್ತ ರಕ್ಷಣೆ ಒದಗಿಸದ ಕಾರಣ ನಾಶವಾಗುತ್ತವೆ. ಸೂಕ್ತವಾಗಿ ದಾಸ್ತಾನು ಮಾಡದ ಕಾರಣ ಟನ್‌ಗಟ್ಟಲೆ ಆಹಾರ ಹಾಳಾಗುತ್ತದೆ. ವೈಜ್ಞಾನಿಕ ತಂತ್ರಗಳನ್ನು ಆಹಾರ ದಾಸ್ತಾನು ಸಂಸ್ಕರಣೆ ಹಾಗೂ ವಿತರಣೆಯಲ್ಲಿ ಬಳಸಿದರೆ ಆಹಾರ ಭದ್ರತೆ ಗಣನೀಯವಾಗಿ ಸುಧಾರಿಸಲಿದೆ

ನಮ್ಮ ಆಹಾರದ ಪ್ರಮಾಣ ಹಾಗೂ ಗುಣಮಟ್ಟ ಹೆಚ್ಚಿಸಲು ನಾವು ಸಾಂಪ್ರದಾಯಿಕ ವಿಧಾನಗಳನ್ನು ಬಳಸುತ್ತಿದ್ದು, ಈ ದಿನಗಳಲ್ಲಿ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಜಿನೋಮ್ ಎಡಿಟಿಂಗ್ ಅಂದರೆ ಆನುವಂಶಿಕ ವಿನ್ಯಾಸ ವಿಧಾನ ಜಗತ್ತಿನಲ್ಲಿ ಪ್ರಚಲಿತವಾಗಿದೆ. ಕೀಟಗಳ ನಿರ್ವಹಣೆಯಲ್ಲದೆ, ಆಹಾರ ವಿಜ್ಞಾನದಲ್ಲಿ ಸಾರವರ್ಧಿತ ಮತ್ತು ಪೌಷ್ಟಿಕ ಪ್ರೊಟೀನ್ ಯುಕ್ತ ಆಹಾರ ಒದಗಿಸಲು ಹಲವು ಆಯ್ಕೆಗಳಿವೆ. ಭಾರತದ ಪೌಷ್ಟಿಕ ಭದ್ರತೆ ಪಯಣದಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸಲಿದೆ.

ಆಹಾರ ಉತ್ಪಾದನೆಗೆ ಬೀಜ ಮೂಲಭೂತ ವಸ್ತುವಾಗಿದೆ. ಕಡಿಮೆ ಕೃಷಿ ರಾಸಾಯನಿಕ, ಕಡಿಮೆ ಭೂಮಿ, ನೀರು ಹಾಗೂ ರಸಗೊಬ್ಬರ ಬಳಸಿ ಉತ್ಕೃಷ್ಟ ಉತ್ಪನ್ನ ನೀಡಲು ಬೀಜವನ್ನು ಸುಧಾರಿಸಲು ತಳಿವಿನ್ಯಾಸ ತಂತ್ರಜ್ಞಾನಕ್ಕೆ ಸಾಮರ್ಥ್ಯವಿದೆ. ಸದ್ಯದ ಭವಿಷ್ಯದಲ್ಲಿ ಭಾರತ 300 ಮಿಲಿಯನ್ ಟನ್‌ಗಿಂತ ಹೆಚ್ಚಿನ ಆಹಾರ ಧಾನ್ಯ ಉತ್ಪಾದನೆಯನ್ನು ಸುಸ್ಥಿರವಾಗಿ ಮಾಡಬೇಕಿದ್ದರೆ ಪರೀಕ್ಷಿಸಿದ ರುಜುವಾತದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅಗತ್ಯ. ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಗುತ್ತಿರುವ ಭಾರೀ ಆವಿಷ್ಕಾರಗಳು ಭಾರತ ಪೌಷ್ಟಿಕ ಹಾಗೂ ಆಹಾರ ಭದ್ರತೆಯತ್ತ ದಾಪುಗಾಲು ಹಾಕಲು ನೆರವಾಗಲಿವೆ ಎಂಬುದು ಪರಿಣಿತರ ಅಭಿಪ್ರಾಯ.

Similar News