ಮತದಾರರಿಗೇ ಆಪರೇಷನ್?

Update: 2022-12-08 05:57 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಚುನಾವಣೆ ಘೋಷಣೆಗೆ ಮುನ್ನವೇ ರಾಜ್ಯದಲ್ಲಿ ಚುನಾವಣಾ ಅಕ್ರಮ ಸುದ್ದಿಯಲ್ಲಿದೆ. ಬಿಜೆಪಿ ತನ್ನ ಅಧಿಕಾರವನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರನ್ನೇ ಅಳಿಸಿ ಹಾಕಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸುತ್ತಿದ್ದಾರೆ. ಈಗಾಗಲೇ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಅವರು ಮಾಧ್ಯಮಗಳ ಮುಂದಿಟ್ಟಿದ್ದಾರೆ. ಆದರೆ ರಾಜ್ಯ ಸರಕಾರ ಈ ಆರೋಪಗಳನ್ನು ತಿರಸ್ಕರಿಸಿದೆ. ಮತದಾರರ ಪರಿಷ್ಕರಣೆ ಒಂದು ಸಹಜ ಪ್ರಕ್ರಿಯೆ. ಈ ಸಂದರ್ಭದಲ್ಲಿ ಕೆಲವೊಮ್ಮೆ ಅರ್ಹ ಮತದಾರರ ಹೆಸರುಗಳು ಆಕಸ್ಮಿಕವಾಗಿ ಹೊರಬೀಳುವ ಸಾಧ್ಯತೆಗಳಿವೆ. ಆದರೆ ತಪ್ಪುಗಳನ್ನು ಸರಿಪಡಿಸುವ ಅವಕಾಶವಿದೆ ಎಂದು ಅದು ಸ್ಪಷ್ಟೀಕರಣ ನೀಡಿದೆ. ಆದರೆ ಬೆಂಗಳೂರಿನಲ್ಲಿ ಚಿಲುಮೆ ಎನ್ನುವ ಸರಕಾರೇತರ ಸಂಸ್ಥೆಯ ಮೂಲಕ ನಡೆದ ಮತದಾರರ ಸಮೀಕ್ಷೆ ಮತ್ತು ಆ ಬಳಿಕ ಕೇಳಿ ಬಂದ ಆರೋಪಗಳನ್ನು ಗಮನಿಸಿದರೆ, ಸರಕಾರ ಹೇಳಿದಷ್ಟು ವಿಷಯ ಸರಳವಿಲ್ಲ. ಚಿಲುಮೆ ಸಂಸ್ಥೆಯ ಹಿಂದಿರುವ ಶಕ್ತಿಗಳು ಯಾವುವು? ಅವರಿಂದ ಮತದಾರರ ಮಾಹಿತಿಗಳ ಸಂಗ್ರಹ ಯಾಕೆ ನಡೆಯಿತು? ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವನ್ನು ನೀಡದೆ, ಸರಕಾರ ವಿರೋಧಪಕ್ಷಗಳ ಆರೋಪಗಳಿಂದ ಪೂರ್ಣ ಪ್ರಮಾಣದಲ್ಲಿ ಮುಕ್ತವಾಗಲು ಸಾಧ್ಯವಿಲ್ಲ.

ಮತಪತ್ರಗಳ ಮೂಲಕ ಚುನಾವಣೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ, ಮತಗಟ್ಟೆಗಳನ್ನು ಹೈಜಾಕ್ ಮಾಡುವ ಪ್ರಯತ್ನಗಳು ನಡೆಯುತ್ತಿದ್ದವು. ಮತಪೆಟ್ಟಿಗೆಗಳನ್ನು ಅಪಹರಿಸಿ ಅಲ್ಲಿ ಬೇರೆ ಮತಪೆಟ್ಟಿಗೆಗಳನ್ನು ಸ್ಥಾಪಿಸಿ ಇಡೀ ಚುನಾವಣೆಯ ಉದ್ದೇಶವನ್ನು ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿತ್ತು. ಚುನಾವಣೆಗಳು ಹೆಚ್ಚು ಪಾರದರ್ಶಕವಾಗಬೇಕು, ವೆಚ್ಚ ಕಡಿಮೆಯಾಗಬೇಕು ಹಾಗೂ ಶೀಘ್ರ ಫಲಿತಾಂಶ ಹೊರ ಬೀಳಬೇಕು ಎನ್ನುವ ಕಾರಣವನ್ನು ಮುಂದೊಡ್ಡಿ ಮತಯಂತ್ರವನ್ನು ಸರಕಾರ ಬಳಸಿಕೊಂಡಿತು. ಮತಯಂತ್ರ ಬಳಕೆಯ ಬಳಿಕ ಚುನಾವಣೆಯಲ್ಲಿ ಸುಧಾರಣೆಗಳಾಗಿವೆಯೆ? ಅಕ್ರಮಗಳು ಕಡಿಮೆಯಾಗಿವೆಯೇ? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ನೀಡುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ. ಮತಯಂತ್ರದ ಬಳಕೆಯ ಬಳಿಕ ಚುನಾವಣೆಯಲ್ಲಾದ ಒಂದೇ ಒಂದು ಸುಧಾರಣೆಯೆಂದರೆ, ಮತ ಎಣಿಕೆ ಸುಲಭವಾಯಿತು. ಮಾಧ್ಯಮಗಳು ಮತ್ತು ಜನರು ಫಲಿತಾಂಶಕ್ಕಾಗಿ ಎರಡು ಅಥವಾ ಮೂರು ದಿನಗಳು ಕಾಯುವಂತಹ ಸನ್ನಿವೇಶ ಈಗ ಇಲ್ಲ. ಆದರೆ ಇದರಿಂದಾಗಿ ಈ ದೇಶದ ಪ್ರಜಾಸತ್ತೆಗೆ ಯಾವ ರೀತಿಯಲ್ಲಿ ಲಾಭವಾಯಿತು?

ಮತಯಂತ್ರಗಳು ಬಳಕೆಯಾದ ದಿನಗಳಿಂದ, ಇವಿಎಂ ಹ್ಯಾಕ್ ಮಾಡಲಾಗುತ್ತದೆ ಎನ್ನುವ ಆರೋಪಗಳನ್ನು ವಿರೋಧಪಕ್ಷಗಳು ಮಾಡುತ್ತಿವೆ. ಹಲವು ಪ್ರಮುಖ ವಿರೋಧ ಪಕ್ಷಗಳು ಒಂದಾಗಿ ಇವಿಎಂ ಬಗ್ಗೆ ತಮ್ಮ ಅನುಮಾನಗಳನ್ನು ಚುನಾವಣಾ ಆಯೋಗದ ಮುಂದಿಟ್ಟಿವೆ. ಆದರೆ ಎಲ್ಲ ಆರೋಪಗಳನ್ನು ಆಯೋಗ ಸಾರಾಸಗಟಾಗಿ ತಿರಸ್ಕರಿಸಿದೆ. ಅಷ್ಟೇ ಅಲ್ಲ, ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸುವುದೇ ದೇಶದ್ರೋಹದ ಭಾಗ ಎಂದು ಆಯೋಗ ಸಂಶಯಿಸಿದೆ. ಮತಪೆಟ್ಟಿಗೆಗಳನ್ನು ಹೈಜಾಕ್ ಮಾಡಿದಂತೆಯೇ ಮತಯಂತ್ರಗಳನ್ನೇ ಅಪಹರಿಸಿದ ಹಲವು ಉದಾಹರಣೆಗಳಿವೆ. ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇದರ ಜೊತೆ ಜೊತೆಗೇ ಮತಯಂತ್ರಗಳನ್ನು ಹ್ಯಾಕ್ ಮಾಡಲು ಸಾಧ್ಯ ಎನ್ನುವ ಸಂಶಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಮತಯಂತ್ರಗಳನ್ನು ದುರ್ಬಳಕೆ ಮಾಡಲಾಗಿತ್ತು ಎಂದು ಬಿಜೆಪಿಯ ನಾಯಕರಾಗಿದ್ದ ಎಲ್. ಕೆ. ಅಡ್ವಾಣಿಯವರೇ ಆರೋಪಿಸಿದ್ದರು. ೨೦೧೪ರ ಬಳಿಕ ದೇಶದಲ್ಲಿ ನಡೆದ ಚುನಾವಣೆಗಳಲ್ಲಿ ಇವಿಎಂ ಹ್ಯಾಕ್ ಸುದ್ದಿ ಸಾಮಾನ್ಯ ಎಂದಾಗಿ ಬಿಟ್ಟಿದೆ. ತಂತ್ರಜ್ಞಾನಗಳಲ್ಲಿ ಮುಂದಿರುವ ದೇಶಗಳು ಮತಯಂತ್ರ ಬಳಕೆಯಿಂದ ಹಿಂದೆ ಸರಿದಿವೆ. ಹೀಗಿರುವಾಗ ಭಾರತದಲ್ಲಿ ಮತಯಂತ್ರದ ಬಳಕೆ ಸರಿಯೆ? ಎನ್ನುವ ಪ್ರಶ್ನೆಯನ್ನೂ ಹಲವರು ಕೇಳುತ್ತಿದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರವನ್ನು ನೀಡಲು ಸರಕಾರ ಮತ್ತು ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದೆ.

ಮತಯಂತ್ರದ ಮೂಲಕ ಚುನಾವಣೆಯ ಫಲಿತಾಂಶವನ್ನೇ ಬದಲಿಸಲಾಗುತ್ತದೆ ಎನ್ನುವ ಆರೋಪಗಳನ್ನು ಮೂಲೆಗುಂಪು ಮಾಡುವಂತೆ ‘ಆಪರೇಷನ್ ಕಮಲ’ಕ್ಕೆ ಕರ್ನಾಟಕ ಸಾಕ್ಷಿಯಾಯಿತು. ಫಲಿತಾಂಶ ಹೊರ ಬಂದು, ಬಹುಮತ ಪಡೆದ ಪಕ್ಷವನ್ನೇ ಹೈಜಾಕ್ ಮಾಡುವಂತಹ ಕೆಟ್ಟ ಬೆಳವಣಿಗೆಗಳು ಕರ್ನಾಟಕದಲ್ಲಿ ನಡೆದವು. ಈಗ ಅಸ್ತಿತ್ವದಲ್ಲಿರುವ ಸರಕಾರವೂ ಆಪರೇಷನ್ ಕಮಲದ ಕೂಸಾಗಿದೆ. ಕುದುರೆ ವ್ಯಾಪಾರವೆಂದು ನಿಂದನೆಗೆ ಒಳಗಾಗಿದ್ದ ಚುನಾವಣಾ ಅಕ್ರಮ, ಕರ್ನಾಟಕದಲ್ಲಿ ಆಪರೇಷನ್ ಕಮಲ ಎಂದು ಕರೆಸಿಕೊಂಡು, ರಾಜಕೀಯ ಪಕ್ಷಗಳ ‘ಚಾಣಕ್ಯ ತಂತ್ರ’ದ ಭಾಗವಾಗಿ ಪರಿಗಣಿಸಲ್ಪಟ್ಟಿತ್ತು. ಜನರಿಂದ ಅಕ್ರಮದಾರಿಯಿಂದಲೋ, ಸಕ್ರಮ ದಾರಿಯಿಂದಲೋ ಆಯ್ಕೆಯಾದ ಜನಪ್ರತಿನಿಧಿಗಳು ಮತ್ತೆ ಬಹಿರಂಗವಾಗಿ ತಮ್ಮನ್ನು ತಾವು ಹರಾಜಿಗಿಟ್ಟು, ಪ್ರಜಾಸತ್ತೆಯನ್ನು ಹಾಡಹಗಲೇ ಬಲಿಹಾಕುತ್ತಿದ್ದಾರೆ.

ಇದೀಗ ನೋಡಿದರೆ ಕರ್ನಾಟಕದಲ್ಲಿ ಚುನಾವಣೆ ಘೋಷಣೆಗೆ ಮುನ್ನವೇ ಅಕ್ರಮಗಳ ಹೆದ್ದಾರಿ ತೆರೆದುಕೊಂಡಿದೆ. ಚುನಾವಣೆಗೆ ಮುನ್ನ ಮತದಾರರನ್ನು ಪಟ್ಟಿಯಿಂದಲೇ ಅಳಿಸಿ ಹಾಕಿ, ಮತದಾನದ ಹೊತ್ತಿಗೆ ಈ ದೇಶದ ಪೌರರ ಮತಹಾಕುವ ಹಕ್ಕನ್ನೇ ಕಿತ್ತುಕೊಳ್ಳುವ ಸಂಚು ಇದೀಗ ಸುದ್ದಿಯಲ್ಲಿದೆ. ಮತದಾರರ ಹಕ್ಕನ್ನೇ ಕಿತ್ತುಕೊಂಡು, ಬಳಿಕ ನಡೆಸುವ ಚುನಾವಣೆ ಎಷ್ಟರಮಟ್ಟಿಗೆ ನ್ಯಾಯಸಮ್ಮತ? ವಿರೋಧ ಪಕ್ಷಗಳ ಆರೋಪಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಚುನಾವಣೆಯ ಆನಂತರ ನಡೆಯುವ ಆಪರೇಷನ್ ಕಮಲಗಳಿಂದ ಈಗಾಗಲೇ ಪ್ರಜಾಸತ್ತೆ ಅವನತಿಯ ಅಂಚಿನಲ್ಲಿದೆ. ಇದೀಗ ಚುನಾವಣೆಗೆ ಮುನ್ನವೇ ಕೆಲವು ಹಿತಾಸಕ್ತಿಗಳು ನೇರವಾಗಿ ಮತದಾರರಿಗೇ ಆಪರೇಷನ್ ನಡೆಸಲು ಮುಂದಾಗಿದೆ. ತಕ್ಷಣ ಆಪರೇಷನನ್ನು ತಡೆದು ಚುನಾವಣೆಯ ಸಹಜ ಹೆರಿಗೆಗೆ ಆಯೋಗ ದಾರಿಯನ್ನು ಸುಗಮ ಮಾಡಿಕೊಡಬೇಕಾಗಿದೆ.

Similar News