ಹುಬ್ಬಳ್ಳಿ ವಿದ್ಯಾರ್ಥಿನಿ ಹತ್ಯೆ: ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಲಿ

Update: 2024-04-20 07:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಹುಬ್ಬಳ್ಳಿಯ ಕಾಲೇಜೊಂದರ ಆವರಣದಲ್ಲೇ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹಪಾಠಿಯೊಬ್ಬ ಬರ್ಬರವಾಗಿ ಹತ್ಯೆಗೈದಿದ್ದಾನೆ. ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಈಗಾಗಲೇ ಬಂಧಿಸಿದ್ದಾರೆ. ಈ ಕೃತ್ಯಕ್ಕೆ ‘ಪ್ರೇಮ ವೈಫಲ್ಯ’ವನ್ನು ಕಾರಣವಾಗಿ ನೀಡಲಾಗಿದೆ. ಪ್ರೀತಿಯನ್ನು ವಿದ್ಯಾರ್ಥಿನಿ ತಿರಸ್ಕರಿಸಿರುವುದೇ ಈ ಹೀನ ಕೃತ್ಯ ಎಸಗಲು ಕಾರಣ ಎನ್ನುವುದನ್ನು ಪೊಲೀಸರು ಪ್ರಾಥಮಿಕ ತನಿಖೆಯ ಬಳಿಕ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಪ್ರೀತಿಯನ್ನು ತಿರಸ್ಕರಿಸಿದ್ದಾಳೆ ಎನ್ನುವ ಕಾರಣಕ್ಕಾಗಿ ಯುವಕರು ತರುಣಿಯರ ಮೇಲೆ ನಡೆಸುತ್ತಿರುವ ದಾಳಿಗಳು ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರಲ್ಲಿ ಪ್ರೀತಿಯ ಕಾರಣಕ್ಕಾಗಿ ಯುವಕನೊಬ್ಬ ಆ್ಯಸಿಡ್ ದಾಳಿ ನಡೆಸಿರುವುದು ಪತ್ರಿಕೆಗಳಲ್ಲಿ ಮುಖಪುಟದಲ್ಲಿ ವರದಿಯಾಗಿತ್ತು. ಉಡುಪಿಯ ನೇಜಾರಿನಲ್ಲಿ ಪ್ರವೀಣ್ ಚೌಗುಳೆ ಎನ್ನುವ ಸೈಕೋಪಾತ್ ಪ್ರೀತಿ ಹೆಸರಿನಲ್ಲಿ ನಡೆಸಿದ ಹತ್ಯಾಕಾಂಡಕ್ಕೆ ದೇಶವೇ ಬೆಚ್ಚಿ ಬಿದ್ದಿತ್ತು. ವಿವಾಹಿತನಾಗಿದ್ದು ಒಂದು ಮಗು ಇದ್ದರೂ, ಈತ ತನ್ನ ಸಹೋದ್ಯೋಗಿಯನ್ನು ಪ್ರೀತಿಗಾಗಿ ಪೀಡಿಸುತ್ತಿದ್ದ. ಅದನ್ನು ವಿರೋಧಿಸಿದ ಕಾರಣಕ್ಕಾಗಿ ಇಡೀ ಕುಟುಂಬವನ್ನೇ ಈತ ಕೊಂದು ಹಾಕಿದ. ಕೆಲವು ದಿನಗಳ ಹಿಂದೆ ತುಮಕೂರಿನಲ್ಲೂ ಪ್ರೀತಿಯ ಹೆಸರಿನಲ್ಲಿ ಬರ್ಬರ ಕೊಲೆಯೊಂದು ನಡೆದಿತ್ತು. ರುಕ್ಸಾನ ಎನ್ನುವ ತರುಣಿಯನ್ನು ಕೊಲೆಗಾರ ಪ್ರೀತಿಸುತ್ತಿದ್ದ. ಆಕೆಗೆ ಒಂದು ಮಗುವೂ ಇತ್ತು. ಆಕೆ ಯಾವತ್ತು ಮದುವೆಯಾಗಲು ಒತ್ತಡ ಹಾಕಲಾರಂಭಿಸಿದಳೋ, ಆಗ ಆಕೆಯನ್ನು ಕೊಂದು ಸುಟ್ಟು ಹಾಕಿದ್ದ. ಆಕೆಯ ಮಗುವನ್ನು ಬೆಂಗಳೂರಿನಲ್ಲಿ ಬೀದಿ ಬದಿಯಲ್ಲಿ ಅನಾಥವಾಗಿ ಬಿಟ್ಟು ಹೋಗಿದ್ದ. ಇದೀಗ ಆರೋಪಿಯ ಬಂಧನವಾಗಿದೆ.

ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ಕೊಲೆಗಳು ಈ ದೇಶಕ್ಕೆ, ನಾಡಿಗೆ ಹೊಸತೇನೂ ಅಲ್ಲ. ವಿಷಾದನೀಯ ಸಂಗತಿಯೆಂದರೆ, ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳು ಇಲ್ಲಿ ‘ಅಪರಾಧವಾಗಿ ಪರಿಗಣಿತ ವಾಗಬೇಕಾದರೆ’ ಅದಕ್ಕೆ ಕೆಲವು ಮಾನದಂಡಗಳಿವೆ. ಅತ್ಯಾಚಾರ, ಕೊಲೆಗೀಡಾದ ಹೆಣ್ಣು ಮೇಲ್ಜಾತಿಗೆ, ಮೇಲ್ವರ್ಗಕ್ಕೆ ಸೇರಿದವಳಾಗಿದ್ದು, ಕೊಲೆಗಾರ ಕೆಳ ಜಾತಿ, ಕೆಳವರ್ಗಕ್ಕೆ ಸೇರಿದವನಾಗಿದ್ದರೆ ಪೊಲೀಸರು ನಿಂತಲ್ಲೇ ಸಂತ್ರಸ್ತೆಗೆ ನ್ಯಾಯ ನೀಡುತ್ತಾರೆ. ಆರೋಪಿಗಳನ್ನು ಬಂಧಿಸಿದ ಬೆನ್ನಿಗೇ ಯಾವ ವಿಚಾರಣೆಯೂ ಇಲ್ಲದೆ ಸ್ಥಳದಲ್ಲೇ ಎನ್ಕೌಂಟರ್ ಮಾಡಿದ ಉದಾಹರಣೆಗಳೂ ಇವೆ. ಇದೇ ಸಂದರ್ಭದಲ್ಲಿ ಸಂತ್ರಸ್ತೆ ಶೋಷಿತ ಸಮುದಾಯಕ್ಕೆ ಸೇರಿದವಳಾಗಿದ್ದರೆ ನ್ಯಾಯ ಕೇಳುವುದೇ ಕೆಲವೊಮ್ಮೆ ಅಪರಾಧವಾಗಿ ಬಿಡುತ್ತದೆ. ಹಾಥರಸ್ನಲ್ಲಿ ದಲಿತ ಮಹಿಳೆಯ ಮೇಲೆ ನಡೆದ ಅತ್ಯಾಚಾರ, ಕೊಲೆ, ಕಥುವಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಗುವೊಂದರ ಮೇಲೆ ದೇವಸ್ಥಾನದ ಆವರಣದಲ್ಲೇ ನಡೆದ ಅತ್ಯಾಚಾರ ಮತ್ತು ಕೊಲೆಯಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಲೇ ಇಲ್ಲ. ಹಾಥರಸ್ ಪ್ರಕರಣದಲ್ಲಿ ನ್ಯಾಯ ಕೇಳಿದವರನ್ನೇ ಬಂಧಿಸಲಾಯಿತು. ವರದಿ ಮಾಡಲು ಹೋದ ಪತ್ರಕರ್ತನನ್ನು ಬಂಧಿಸಿ ಎರಡು ವರ್ಷಗಳ ಕಾಲ ಜೈಲಿನಲ್ಲಿಡಲಾಯಿತು. ಕಥುವಾದಲ್ಲಿ ಮಗುವಿನ ಮೇಲೆ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಬೀದಿಯಲ್ಲಿ ಪ್ರತಿಭಟನೆ ನಡೆಯಿತು. ಗುಜರಾತ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲೂ ಇದೇ ನಡೆಯಿತು. ಬಿಡುಗಡೆಗೊಂಡ ಆರೋಪಿಗಳನ್ನು ಆರತಿ ಎತ್ತಿ ಸ್ವಾಗತಿಸಲಾಯಿತು.

ರಾಜಕೀಯ ಕಾರಣಗಳಿಗಾಗಿ ಈ ದೇಶದಲ್ಲಿ ಅತ್ಯಾಚಾರಗಳನ್ನು, ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಗಳನ್ನು ಅನೇಕ ಬಾರಿ ಸಂಭ್ರಮಿಸಲಾಗುತ್ತದೆ. ಸಾಮಾಜಿಕ ಕಾರಣಗಳಿಗಾಗಿ ಕೆಲವೊಮ್ಮೆ ಈ ಅತ್ಯಾಚಾರ, ಕೊಲೆಗಳು ಮಾನ್ಯವಾಗುತ್ತವೆ. ಅಪರೂಪಕ್ಕೊಮ್ಮೆ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯಗಳನ್ನು ಯಾರಾದರೂ ಖಂಡಿಸಿದರೆ ಒಂದೋ ಅದಕ್ಕೆ ಅದರದೇ ಆದ ರಾಜಕೀಯ ಕಾರಣಗಳಿರುತ್ತವೆ. ಹುಬ್ಬಳ್ಳಿಯಲ್ಲಿ ನಡೆದ ಕೃತ್ಯವನ್ನು ಎಲ್ಲರೂ ಜಾತಿ, ಪಕ್ಷ ಭೇದಗಳನ್ನು ಮರೆತು ಖಂಡಿಸಬೇಕಾಗಿದೆ ಮಾತ್ರವಲ್ಲ, ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಎಲ್ಲರೂ ಜಾತಿ, ಮತ, ಧರ್ಮಗಳನ್ನು ಮೀರಿ ಒತ್ತಾಯಿಸಬೇಕು. ಒತ್ತಾಯಿಸಿದ್ದಾರೆ ಕೂಡ. ಆದರೆ ಕೆಲವು ಶಕ್ತಿಗಳಿಗೆ ಈ ಪ್ರಕರಣದಲ್ಲಿ ಸಂತ್ರಸ್ತ ಹೆಣ್ಣಿಗೆ ನ್ಯಾಯ ನೀಡುವುದಕ್ಕಿಂತ, ಆಕೆಯ ಮೃತದೇಹದ ಮೇಲೆ ತಮ್ಮ ರಾಜಕೀಯ ಬೇಳೆ ಬೇಯಿಸುವುದು ಮುಖ್ಯವಾಗಿದೆ. ಅವರು ಸಂತ್ರಸ್ತೆ ಮತ್ತು ಅರೋಪಿಯ ಜಾತಿಗಳನ್ನು ಹಿಡಿದು ನೇತಾಡುತ್ತಿದ್ದಾರೆ. ಅವರಿಗೆ ಬೇಕಾಗಿರುವುದು ಸಂತ್ರಸ್ತೆಗೆ ನ್ಯಾಯವಲ್ಲ, ಸಂತ್ರಸ್ತೆಯ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಮತಗಳನ್ನು ಜೋಳಿಗೆಗೆ ಹಾಕಿಕೊಳ್ಳುವುದು. ಒಬ್ಬ ಹೆಣ್ಣಿನ ಸಾವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುವ ಇವರೂ ಪರೋಕ್ಷವಾಗಿ ಕ್ರಿಮಿನಲ್ಗಳೇ ಆಗಿದ್ದಾರೆ. ಗುಜರಾತ್ನ ಬಿಲ್ಕಿಸ್ ಬಾನು, ಕಾಶ್ಮೀರದ ಆಸಿಫಾ ಮೇಲೆ ನಡೆದ ಬರ್ಬರ ಅತ್ಯಾಚಾರ, ಕೊಲೆಗಳನ್ನು ಸಂಭ್ರಮಿಸುವ ಇವರು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಇನ್ನೊಂದು ಸಮುದಾಯಕ್ಕೆ ಸೇರಿದ ಆರೋಪಿಯ ಕೈಯಲ್ಲಿ ಕೊಲೆಯಾಗಿದ್ದಾಳೆ ಎನ್ನುವ ಒಂದೇ ಕಾರಣಕ್ಕಾಗಿ ಬೀದಿಗಿಳಿದು ಹೋರಾಟದ ಪ್ರಹಸನವನ್ನು ನಡೆಸುತ್ತಾರೆ. ಆಳದಲ್ಲಿ ಇವರು ಹುಬ್ಬಳ್ಳಿಯ ತರುಣಿಯ ಸಾವನ್ನು ಕೂಡ ಸಂಭ್ರಮಿಸುತ್ತಿದ್ದಾರೆ.

ನೇಜಾರಿನಲ್ಲಿ ಪ್ರೇಮದ ಹೆಸರಿನಲ್ಲಿ ಪ್ರವೀಣ್ ಚೌಗುಳೆ ಎಂಬಾತ ಎಳೆ ಮಗುವಿನ ಸಹಿತ ಒಂದು ಇಡೀ ಕುಟುಂಬವನ್ನೇ ಕೊಂದಾಗ ಇವರು ಮೌನವಾಗಿದ್ದರು. ಕನಿಷ್ಠ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡುವ ಮನುಷ್ಯತ್ವವನ್ನೂ ಪ್ರದರ್ಶಿಸಲಿಲ್ಲ. ಒಂದು ವೇಳೆ ನೇಜಾರಿನ ಪ್ರಕರಣದಲ್ಲಿ ಸಂತ್ರಸ್ತರು ಮತ್ತು ಆರೋಪಿಯ ಧರ್ಮಗಳು ಅದಲು ಬದಲಾಗಿದ್ದರೆ ಇವರ ಸಂಭ್ರಮಾಚರಣೆಗಳು ಹೇಗಿರುತ್ತಿತ್ತು ಮತ್ತು ಅದರ ಹೆಸರಿನಲ್ಲಿ ನಾಡಿನ ಅದೆಷ್ಟು ಅಮಾಯಕರ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದರು ಎನ್ನುವುದನ್ನು ಕಲ್ಪಿಸಿದರೇ ಎದೆ ನಡುಗುತ್ತದೆ. ಹೆಣ್ಣಿ ನ ಮೇಲೆ ಅತ್ಯಾಚಾರ ಅಥವಾ ಯಾವುದೇ ದೌರ್ಜನ್ಯಗಳು ನಡೆದಾಗ ಜಾತಿ, ಧರ್ಮ, ಅಂತಸ್ತು ನೋಡದೆ ಒಂದಾಗಿ ಬೀದಿಗಿಳಿದಾಗ ಮಾತ್ರ ನಾವು ಇಂತಹ ಕೃತ್ಯಗಳು ಮರುಕಳಿಸುವುದನ್ನು ತಡೆಯಬಹುದು. ಯಾಕೆಂದರೆ ಕೊಲೆಗಾರರು ಜಾತಿ, ಧರ್ಮಗಳನ್ನು ಗುರಿ ಮಾಡಿ ಕೊಲೆ ಮಾಡುವುದಿಲ್ಲ. ರಾಜಕೀಯ ಪ್ರೇರಿತವಾದ ಹತ್ಯಾಕಾಂಡಗಳಲ್ಲಿ ಮಾತ್ರ ಇದು ಜರುಗುತ್ತವೆ. ಗುಜರಾತ್, ಮಣಿಪುರದಂತಹ ಸಾಮೂಹಿಕ ಹತ್ಯಾಕಾಂಡದಲ್ಲಿ ಧರ್ಮ, ಜಾತಿ ನೋಡಿ ಹೆಣ್ಣಿನ ಮೇಲೆ ಅತ್ಯಾಚಾರಗಳು ನಡೆದಿವೆ.

ನೇಜಾರಿನಲ್ಲಿ ನಡೆದಿರುವ ಬರ್ಬರ ಹತ್ಯಾಕಾಂಡದಲ್ಲಿ ಯಾರೂ ಆರೋಪಿಯ ಜಾತಿ, ಧರ್ಮವನ್ನು ಗುರಿ ಮಾಡಿಲ್ಲ ಎನ್ನುವಾಗ ಹುಬ್ಬಳ್ಳಿಯಲ್ಲಿ ನಡೆದ ಹತ್ಯೆಯನ್ನು ಮಾತ್ರ ಯಾಕೆ ಕೆಲವರು ಜಾತಿ, ಧರ್ಮದ ಆಧಾರದಲ್ಲಿ ಗುರುತಿಸಲು ಯತ್ನಿಸುತ್ತಿದ್ದಾರೆ? ಯಾಕೆಂದರೆ ಅವರಿಗೆ ಬೇಕಾಗಿರುವುದು ಸಂತ್ರಸ್ತೆಗೆ ನ್ಯಾಯವಲ್ಲ, ಆರೋಪಿಯ ಧರ್ಮವನ್ನು ತೋರಿಸಿ ರಾಜಕೀಯ ನಡೆಸುವುದು. ಇಂತಹ ಪ್ರಕರಣಗಳು ಹೆಚ್ಚು ಹೆಚ್ಚು ನಡೆದಾಗ ಮಾತ್ರ ಇವರಿಗೆ ರಾಜಕೀಯವಾಗಿ ಬೆಳೆಯಲು ಸಾಧ್ಯ. ಆದುದರಿಂದ ಇವರು ಇಂತಹ ಕ್ರಿಮಿನಲ್ ಕೃತ್ಯಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಾರೆ.

ಪ್ರೀತಿಯ ಹೆಸರಿನಲ್ಲಿ ಯಾರೂ ಯಾರನ್ನು ಕೊಲ್ಲಲು ಸಾಧ್ಯವಿಲ್ಲ. ಆರೋಪಿ ನಿಜವಾಗಿಯೂ ತರುಣಿಯನ್ನು ಪ್ರೀತಿಸಿದ್ದೇ ಆಗಿದ್ದರೆ, ತಾನು ಪ್ರೀತಿಸಿದ ಜೀವವನ್ನು ಅಷ್ಟು ಬರ್ಬರವಾಗಿ ಕೊಂದು ಹಾಕಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಈ ಕೊಲೆಯೇ ಆತ ಪ್ರೀತಿಗೆ ಅರ್ಹನಾದ ಯುವಕನಲ್ಲ ಎನ್ನುವುದನ್ನು ಹೇಳುತ್ತದೆ. ಪ್ರೀತಿಯನ್ನು ತಿರಸ್ಕರಿಸಿದ ಕಾರಣಕ್ಕಾಗಿ ಹೆಣ್ಣನ್ನು ಕೊಲೆ ಮಾಡುವ, ಆಕೆಯ ಮೇಲೆ ಆ್ಯಸಿಡ್ ಎರಚುವ ಇಂತಹ ಕೃತ್ಯಕ್ಕೆ ಹೆಣ್ಣಿನ ಕುರಿತಂತೆ ಪುರುಷ ಹೊಂದಿರುವ ಮಾನಸಿಕತೆಯೇ ಕಾರಣ. ಹುಬ್ಬಳ್ಳಿಯಲ್ಲಿ ಕೊಲೆ ಮಾಡಿದವ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದ್ದರೆ ಉಡುಪಿಯಲ್ಲಿ ಕೊಲೆ ಮಾಡಿದವನು ಇನ್ನೊಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವನು. ದಕ್ಷಿಣ ಕನ್ನಡದ ಕಡಬದಲ್ಲಿ ಆ್ಯಸಿಡ್ ಎರಚಿದಾತ ಮಗದೊಂದು ಧರ್ಮಕ್ಕೆ ಸೇರಿದವನು. ಆದರೆ ಈ ಮೂರೂ ಪ್ರಕರಣದಲ್ಲಿ ಸಂತ್ರಸ್ತಳಾದ ಹೆಣ್ಣು ಮಾತ್ರ ಒಂದೇ ಜಾತಿಗೆ ಸೇರಿದವಳು. ಅದು ಹೆಣ್ಣು ಜಾತಿ. ಇಂದಿನ ಯುವಕರು ಇಂತಹದೊಂದು ಸೈಕೋಪಾತ್ ಮನಸ್ಥಿತಿಗೆ ಯಾಕೆ ತಳ್ಳಲ್ಪಡುತ್ತಿದ್ದಾರೆ ಮತ್ತು ಅದಕ್ಕೆ ಕಾರಣವಾಗುವ ಅಂಶಗಳು ಯಾವುವು ಎನ್ನುವುದನ್ನು ನಾವು ಗಂಭೀರವಾಗಿ ಚರ್ಚಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಧರ್ಮ, ದೇವರು, ದೇವಸ್ಥಾನ, ಮಸೀದಿಗಳು ಹಿಂದೆಂದಿಗಿಂತ ಮಹತ್ವವನ್ನು ಪಡೆಯುತ್ತಿವೆ. ಆದರೆ ಅದು ಯುವಜನತೆಯಲ್ಲಿ ನೈತಿಕತೆಯನ್ನು , ಸದ್ಭಾವವನ್ನು ಬಿತ್ತಲು ಸಂಪೂರ್ಣ ವಿಫಲವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಪ್ರತಿ ಮನೆಯಲ್ಲೂ ಪೋಷಕರು ತಮ್ಮ ತಮ್ಮ ಗಂಡು ಮಕ್ಕಳಿಗೆ ಪ್ರತ್ಯೇಕ ಕೌನ್ಸಿಲಿಂಗ್ ನಡೆಸುವುದು ಇಂದಿನ ಅಗತ್ಯವಾಗಿದೆ. ಮಹಿಳೆಯರು ಇಂತಹ ಯುವಕರ ಮಾನಸಿಕತೆ ಬಗ್ಗೆ ಮುನ್ನೆಚ್ಚರಿಕೆ ಇಟ್ಟುಕೊಳ್ಳುವುದು ಕೂಡ ಅಗತ್ಯ. ಇದೇ ಸಂದರ್ಭದಲ್ಲಿ ಶಾಲಾ ಕಾಲೇಜುಗಳಲ್ಲಿ ಇಂತಹ ಕೃತ್ಯಗಳು ನಡೆದರೆ ಆ ಶಾಲೆಯ ಮುಖ್ಯಸ್ಥರನ್ನೂ ಕಟಕಟೆಯಲ್ಲಿ ನಿಲ್ಲಿಸುವ ಅಗತ್ಯವಿದೆ. ಇವೆಲ್ಲದರ ಜೊತೆಗೆ ಇಂತಹ ಕೃತ್ಯವೆಸಗಿದ ಆರೋಪಿಯನ್ನು ಅತ್ಯಂತ ಕಠಿಣ ಶಿಕ್ಷೆಗೆ ಒಳಪಡಿಸಿ, ಆ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯವನ್ನು ನೀಡಬೇಕಾಗಿದೆ. ಯುವ ಸಮುದಾಯದ ಎದೆಯಲ್ಲಿ ಈ ಬಗ್ಗೆ ಜಾಗೃತಿಯನ್ನೂ ಬಿತ್ತಿ ಇಂತಹ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News