ದ.ಕ. ಮತದಾರರ ಪಟ್ಟಿ ಪರಿಷ್ಕರಣೆ | ಡಿ.7ರವರೆಗೆ 62,829 ಆಕ್ಷೇಪಣೆಗಳು ಸಲ್ಲಿಕೆ: ಜಿಲ್ಲಾಧಿಕಾರಿ ರವಿಕುಮಾರ್

Update: 2022-12-08 08:51 GMT

ಮಂಗಳೂರು, ಡಿ. 8: ದ.ಕ. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ 2022ರ ನವೆಂಬರ್ 9ರಿಂದ ಡಿಸೆಂಬರ್ 7ರವರೆಗೆ 62,829 ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದರಲ್ಲಿ ಈಗಾಗಲೇ 16,065 ಅರ್ಜಿಗಳ ಕ್ಷೇತ್ರ ಪರಿಶೀಲನೆಗೆ ವಹಿಸಲಾಗಿದ್ದು, 1449 ಅರ್ಜಿಗಳು ತಿರಸ್ಕೃತಗೊಂಡಿವೆ. 8,173 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಹೇಳಿದರು.

2022ರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2022ರ ಅಂತಿಮ ಮತದಾರರ ಪಟ್ಟಿಯ ನಂತರ 29410 ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದ್ದರೆ, ಆ ಅವಧಿಯಲ್ಲಿ 73,783 ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಲ್ಲಿ 21,537 ಹೆಸರುಗಳನ್ನು ಮರಣ ಹೊಂದಿದ ಕಾರಣಕ್ಕೆ ತೆಗೆದುಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದರು.

ಕಳೆದ ಹಲವಾರು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಮರಣ ಹೊಂದಿದವರ ಹೆಸರು ಕೂಡಾ ಮತದಾರರ ಪಟ್ಟಿಯಿಂದ ತೆಗೆಯದೆ ಹಾಗೆ ಉಳಿದಿತ್ತು. ಮರಣ ಪ್ರಮಾಣ ಪತ್ರ ದಾಖಲೆಗಳನ್ನು ನೀಡದ ಕಾರಣ ಮತದಾರರ ಪಟ್ಟಿಯಲ್ಲಿ ಉಳಿದಿದ್ದ ಅಂತಹ ಹೆಸರುಗಳನ್ನು ತೆಗೆದು ಹಾಕುವಂತೆ ರಾಜಕೀಯ ಪಕ್ಷಗಳ ಮೂಲಕವೂ ಒತ್ತಾಯ ಬಂದಿದ್ದು, ಅದಕ್ಕೆ ಕ್ರಮ ವಹಿಸಲಾಗಿದೆ.

ದ.ಕ. ಜಿಲ್ಲೆಯಲ್ಲಿ ಈ ಹಿಂದೆ ಪ್ರಕಟಿಸಲಾದ ಕರಡು ಮತದಾರರ ಪಟ್ಟಿ ಅನುಸಾರ 18ರಿಂದ 20 ವರ್ಷ ವಯಸ್ಸಿನ 9,925 ಹೊಸ ಮತದಾರರಿದ್ದು, ಪರಿಷ್ಕರಣೆಯ ಸಂದರ್ಭ 21,000 ಮಂದಿಯಿಂದ ಅರ್ಜಿ ಬಂದಿದೆ. ಅದನ್ನು ಪರಿಶೀಲನೆ ಮಾಡಲಾಗುತ್ತಿದೆ. ಎರಡು ಕ್ಷೇತ್ರಗಳಲ್ಲಿ ಮತದಾರರ ಚೀಟಿಯನ್ನು ಹೊಂದಿದ 27 ಪ್ರಕರಣಗಳನ್ನು ಗುರುತಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗದ ಮೂಲಕ ಬಂದಿರುವ ಮಾಹಿಯನ್ನು ಅನುಸರಿಸಿ ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುತ್ತಿದೆ. ಉಳಿದಂತೆ ದ.ಕ. ಜಿಲ್ಲೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗಿರುವ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಈಗಾಗಲೇ ರಾಜಕೀಯ ಪಕ್ಷಗಳಿದೆ ಕರಡು ಮತದಾರರ ಪಟ್ಟಿ ಪರಿಶೀಲಿಸಿ ಅರ್ಹ ಮತದಾರರು ಇರುವುದನ್ನು ಖಾತರಿಪಡಿಸಲು ಸೂಚಿಸಲಾಗಿದೆ. ಚುನಾವಣಾ ದಿನದಂದು ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದ ರೀತಿಯಲ್ಲಿ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

Similar News