ಮೆಟ್ರೋ ಮಾರ್ಗದ ಕಾಮಗಾರಿಗೆ 466 ಮರಗಳನ್ನು ಕಡಿಯಲು ಅನುಮತಿ ನೀಡಿದ ಹೈಕೋರ್ಟ್

Update: 2022-12-08 13:07 GMT

ಬೆಂಗಳೂರು, ಡಿ.8: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೊ ಮಾರ್ಗದ ಕಾಮಗಾರಿಗೆ ಅಡ್ಡಿಯಾಗಿರುವ 466 ಮರಗಳನ್ನು ಕಡಿಯಲು ಹೈಕೋರ್ಟ್,(high court of karnataka) ಬಿಎಂಆರ್‍ಸಿಎಲ್‍ಗೆ ಅನುಮತಿ ನೀಡಿದೆ.

ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ದತ್ತಾತ್ರೇಯ ದೇವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಮೆಟ್ರೋ  ಯೋಜನೆಯನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕಾಗಿದೆ. ತಾಂತ್ರಿಕ ಸಲಹಾ ಸಮಿತಿ ನೀಡಿರುವ ಮಾರ್ಗಸೂಚಿಗಳಂತೆ, ಟ್ರೀ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಮರಗಳನ್ನು ಕಡಿಯುವುದು, ಗಿಡಗಳನ್ನು ನೆಡುವುದು ಮತ್ತು ಸ್ಥಳಾಂತರ ಮಾಡುವ ಕಾರ್ಯವನ್ನು ಮುಂದುವರೆಸಬಹುದು ಎಂದು ತಿಳಿಸಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೆಂಪಾಪುರದಿಂದ ಶೆಟ್ಟಿಗೆರೆವರೆಗಿನ ಮೆಟ್ರೋ ಎರಡನೇ ಹಂತದಲ್ಲಿ 466 ಮರಗಳನ್ನು ಕಡಿಯುವುದು, 21 ಮರಗಳನ್ನು ಸ್ಥಳಾಂತರಿಸುವುದು ಮತ್ತು 4 ಮರಗಳನ್ನು ಉಳಿಸಿಕೊಳ್ಳುವುದಕ್ಕೆ ತಾಂತ್ರಿಕ ಸಲಹಾ ಸಮಿತಿ ಅನುಮೋದನೆ ಆಧಾರದಲ್ಲಿ ಟ್ರೀ ಅಧಿಕಾರಿ ನೀಡಿದ ಅನುಮತಿ ಕಾರ್ಯಗತಗೊಳಿಸಬಹುದು ಎಂದು ಬಿಎಂಆರ್‍ಸಿಎಲ್‍ಗೆ ಹೈಕೋರ್ಟ್ ಅನುಮತಿ ನೀಡಿದೆ.

ಅಂತೆಯೇ ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ 112 ಮರಗಳನ್ನು ಕಡಿಯುವುದು, 12 ಮರಗಳನ್ನು ಸ್ಥಳಾಂತರ ಮಾಡುವುದು ಮತ್ತು 3 ಮರಗಳನ್ನು ಉಳಿಸಿಕೊಳ್ಳುವುದಕ್ಕೆ ಅನುಮತಿ ನೀಡಿದೆ. ಅಲ್ಲದೇ, ಮರಗಳನ್ನು ಕಡಿಯುವುದು ಮತ್ತು ಸ್ಥಳಾಂತರ ಮಾಡುವ ಕುರಿತಾಗಿ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಲು ಬಿಎಂಆರ್‍ಸಿಎಲ್‍ಗೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು 2023ರ ಜನವರಿ 10ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಮೆಟ್ರೋ ಕಾಮಗಾರಿಗಾಗಿ ಬೃಹತ್ ಮರಗಳನ್ನು ಕಡಿಯಲಾಗುತ್ತಿದೆ. ಆದರೆ, ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಈ ಅಂಶ ತಳ್ಳಿಹಾಕಿದ ನ್ಯಾಯಪೀಠ ಯೋಜನೆಗಾಗಿ ಅಗತ್ಯವಿರುವ ಮರಗಳನ್ನು ಮಾರ್ಗಸೂಚಿಗಳ ಪ್ರಕಾರ ಕಡಿಯಲು ಅನುಮತಿ ನೀಡಿತು.   

Similar News