ಭೂ ವಿವಾದ: ಗಾಯಕ ಲಕ್ಕಿ ಅಲಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ರೋಹಿಣಿ ಸಿಂಧೂರಿ ಪತಿ ಸುಧೀರ್

Update: 2022-12-08 15:44 GMT

ಬೆಂಗಳೂರು, ಡಿ.8: ಭೂ ವಿವಾದ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸಿರುವ ಬಾಲಿವುಡ್ ಹಾಡುಗಾರ ಲಕ್ಕಿ ಅಲಿ ಸೇರಿ ಇತರೆ ಪ್ರತಿವಾದಿಗಳ ವಿರುದ್ಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್ ರೆಡ್ಡಿ ಅವರು ಬೆಂಗಳೂರಿನ 49ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ಕೋರ್ಟ್‍ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದಾರೆ. 

ಈ ಹಿಂದೆ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆಕ್ಷೇಪಿಸಿ ಉದ್ಯಮಿ ಜಿ.ಸುಧೀರ್‍ರೆಡ್ಡಿ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಾಧೀಶ ಯಶವಂತ್ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. 

ಪ್ರತಿವಾದಿಗಳು ಮಧ್ಯಂತರ ಆದೇಶಕ್ಕೆ ಅಗೌರವ ತೋರಿದ್ದಾರೆ ಎಂದು ಆಕ್ಷೇಪಿಸಿ ದೂರುದಾರ ಸುಧೀರ್‍ರೆಡ್ಡಿ ಅವರು ಸಲ್ಲಿಸಿರುವ ಅರ್ಜಿಯನ್ನು ಪ್ರತ್ಯೇಕ ಮಿಸಲೇನಿಯಸ್ ಕೇಸ್‍ನ್ನಾಗಿ ದಾಖಲಿಸಲು ಕಚೇರಿಗೆ ನಿರ್ದೇಶಿಸಲಾಗಿದೆ. ಪ್ರತಿವಾದಿ ಲಕ್ಕಿ ಅಲಿ ಅವರ ಪರ ವಕೀಲರು ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಮಧ್ಯಪ್ರವೇಶ ಕೋರಿರುವ 1,2 ಮತ್ತು 3ನೆ ಅರ್ಜಿಗಳ ವಿಚಾರಣೆಯನ್ನು ಡಿ.16ಕ್ಕೆ ನಡೆಸಲಾಗುವುದು ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.  

ಲಕ್ಕಿ ಅಲಿ ಅವರು ತಪ್ಪು ಹೇಳಿಕೆ ಮತ್ತು ನಿರ್ಲಕ್ಷ್ಯತನದಿಂದ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಅಲಿ ಅವರ ವಕೀಲರು ಮಾನಹಾನಿ ಹೇಳಿಕೆ ನೀಡಿದ್ದು, ತಮ್ಮ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಹೆಸರನ್ನೂ ಕೂಡ ಕೇಸ್‍ನಲ್ಲಿ ಎಳೆದು ತಂದಿದ್ದಾರೆ. ಈ ಪ್ರಕರಣದಲ್ಲಿ ಅವರ ಯಾವುದೇ ಪಾತ್ರವಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ವಾಸುದೇವಪುರ ಗ್ರಾಮದಲ್ಲಿ 3 ಎಕರೆ ಜಮೀನಿಗೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡದಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ. 

2015ರ ಜು.15ರಂದು ಮನ್ಸೂರ್ ಎಂ ಅಲಿ ಮತ್ತು ಅವರ ಪುತ್ರಿ ಸಬ್ರಿನಾ ಅವರಿಂದ ಆಸ್ತಿ ಖರೀದಿಸಿದ್ದು, ಅದರ ಸಂಪೂರ್ಣ ವಾರಸುದಾರ ಸುಧೀರ್ ರೆಡ್ಡಿ ಅವರಾಗಿದ್ದಾರೆ. ಆದರೆ, ಪ್ರತಿವಾದಿಗಳಾದ ಲಕ್ಕಿ ಅಲಿ ಸೇರಿ ಮೂವರು ತಮ್ಮ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಸುಧೀರ್ ಅವರ ಆಸ್ತಿಗೆ ಹೊಂದಿಕೊಂಡಂತೆ ಪ್ರತಿವಾದಿಗಳ ಆಸ್ತಿಯಿದ್ದು, ಇಲ್ಲಿ ಯಾವುದೇ ತೆರನಾದ ಬದಲಾವಣೆ ಮಾಡಿದರೆ ತಮಗೆ ಸಮಸ್ಯೆಯಾಗುತ್ತದೆ ಎಂದು ಸಕಾರಣರಹಿತವಾಗಿ ಅಡ್ಡಿ ಮಾಡಿದ್ದಾರೆ. 

ಈ ಕುರಿತು ಲಕ್ಕಿ ಅಲಿ ಅವರಿಗೆ ಮನವಿ ಮಾಡಿದ್ದು, ಅವರು ಅನೈತಿಕ ಮತ್ತು ಕಾನೂನುಬಾಹಿರ ಬೇಡಿಕೆಗಳನ್ನು ಇಟ್ಟಿದ್ದಾರೆ. ಒಂದೊಮ್ಮೆ ಬೇಡಿಕೆಗಳನ್ನು ಈಡೇರಿಸದಿದ್ದರೆ ತೊಂದರೆ ನೀಡುವುದಾಗಿ ಮತ್ತು ಕೆಲಸ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ಇತ್ತೀಚೆಗೆ ಲಕ್ಕಿ ಅಲಿ ಅವರು ದಾವೆಗಳನ್ನು ಹೂಡಿ, ಜನರಿಗೆ ಬೆದರಿಕೆ ಹಾಕಿ ಬದುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೂ ಮನವಿ ಮಾಡಲಾಗಿತ್ತು. ಆಸ್ತಿ ಪ್ರಕರಣವಾಗಿದ್ದರಿಂದ ಪೊಲೀಸರು ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಸೂಚಿಸಿದ್ದರಿಂದ ಪೀಠದ ಮುಂದೆ ಬಂದಿರುವುದಾಗಿ ಸುಧೀರ್ ರೆಡ್ಡಿ ಅರ್ಜಿಯಲ್ಲಿ ವಿವರಿಸಲಾಗಿದೆ. 

Similar News