ಬೇಡಿಕೆ ಈಡೇರದಿದ್ದರೆ ಬೀದಿಗೆ ಬರದೆ ದಾರಿಯಿಲ್ಲ: ಚೇತನ್ ಬೆಂಗ್ರೆ

ಮೀನುಗಾರರ ಸಮಸ್ಯೆ ಬಗೆಹರಿಸಲು ಬೆಂಗಳೂರಿಗೆ ನಿಯೋಗ

Update: 2022-12-09 13:44 GMT

ಮಂಗಳೂರು, ಡಿ.9: ದ.ಕ. ಜಿಲ್ಲೆಯ ಮೀನುಗಾರರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿಯೋಗ ವೊಂದು ಬೆಂಗಳೂರಿಗೆ ತೆರಳಲಿದೆ. ಅಲ್ಲಿ ಮುಖ್ಯಮಂತ್ರಿ ಸೇರಿದಂತೆ ಇತರ ಸಚಿವರನ್ನು ಭೇಟಿಯಾಗಿ ಬೇಡಿಕೆ ಈಡೇರಿಸಲು ಒತ್ತಾಯಿಸಲಾಗುವುದು. ಬೇಡಿಕೆ ಈಡೇರದಿದ್ದರೆ ಮೀನುಗಾರರು ಬೀದಿಗಿಳಿಯುವುದು ಅನಿವಾರ್ಯವಾಗಲಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಮೀನುಗಾರರ ವಿಭಾಗದ ಅಧ್ಯಕ್ಷ ಚೇತನ್ ಬೆಂಗ್ರೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಜಾರಿಯಲ್ಲಿದ್ದ ಹಲವಾರು ಯೋಜನೆಗಳು ರದ್ದುಗೊಂಡಿವೆ ಎಂದು ಆರೋಪಿಸಿದರು.

ಮೀನುಗಾರಿಕಾ ದೋಣಿಗಳಿಗೆ ಸೀಮೆಎಣ್ಣೆ, ಡೀಸೆಲ್ ಸಿಗುತ್ತಿಲ್ಲ. ಮಂಗಳೂರು ಧಕ್ಕೆ ವಿಸ್ತರಣಾ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಪ್ರಸ್ತುತ ಮೀನುಗಾರಿಕಾ ಬೋಟುಗಳಿಗೆ 9000 ಲೀಟರ್ ಮಾಸಿಕ ನೀಡಲಾಗುತ್ತಿದೆ. ಇದನ್ನು ದಿನಕ್ಕೆ 500 ಲೀಟರ್‌ನಂತೆ ಮಾಸಿಕ 15000ಕ್ಕೆ ಏರಿಸಬೇಕು. ನಾಡದೋಣಿಗಳಿಗೆ ಸೀಮೆಎಣ್ಣೆ  ಕಳೆದ ಮೂರ್ನಾಲ್ಕು ತಿಂಗಳಿಂದ ದೊರಕಿಲ್ಲ. ಈ ಎಲ್ಲಾ ವಿಚಾರಗಳನ್ನು ಬೆಂಗಳೂರಿಗೆ ತೆರಳಲಿರುವ ನಿಯೋಗ ಸಂಬಂಧಪಟ್ಟವರಿಗೆ ಮನವರಿಕೆ ಮಾಡಲಿದೆ. ಅಲ್ಲಿ ನೀಡಲಾಗುವ ಭರವಸೆಯನ್ನು ನೋಡಿಕೊಂಡು ಸಭೆ ಮಾಡಿ ಮುಂದಿನ ಹೋರಾಟದ ನಿರ್ಧಾರ ಮಾಡಲಾಗುವುದು ಎಂದು ಚೇತನ್ ಬೆಂಗ್ರೆ ಹೇಳಿದರು. 

Similar News