ಮರ್ಹೂಂ ಎಸ್.ಎಂ. ಬಶೀರ್‌ರ ಯೋಜನೆಗಳನ್ನು ಕಾರ್ಯಗತಗೊಳಿಸೋಣ: ಸಂತಾಪ ಸೂಚಕ ಸಭೆಯಲ್ಲಿ ಗಣ್ಯರ ಅಭಿಮತ

Update: 2022-12-09 14:45 GMT

ಮಂಗಳೂರು, ಡಿ.9: ಸಮುದಾಯ ಮತ್ತು ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಎಸ್.ಎಂ. ಬಶೀರ್ ಅವರ ಯೋಜನೆಗಳನ್ನು ಕಾರ್ಯಗತಗೊಳಿಸೋಣ, ಅವರ ಕನಸುಗಳನ್ನು ನನಸಾಗಿಸೋಣ. ಅದುವೇ ಅವರಿಗೆ ನಾವು ಕೊಡುವ ಅತ್ಯಂತ ದೊಡ್ಡ ಗೌರವವಾಗಿದೆ. ಯೋಜನೆಯೊಂದಕ್ಕೆ ಅವರ ಹೆಸರನ್ನಿಡುವ ಮೂಲಕ ಅವರ ನೆನಪು ಸದಾ ನಮ್ಮೊಂದಿಗಿರುವಂತೆ ಮಾಡೋಣ.

ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್-ಇಂಡಿಯಾವು ನಗರದ ಮಸ್ಜಿದುಲ್ ಇಹ್ಸಾನ್‌ನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಸಿಸಿಐ ಯುಎಇ ಘಟಕದ ಅಧ್ಯಕ್ಷ, ಸಂಘಟಕ, ಮಾರ್ಗದರ್ಶಕ ಎಸ್.ಎಂ. ಬಶೀರ್ (ಬಿಗ್-ಬಿ) ಅವರ ಸಂತಾಪ ಸೂಚಕ ಸಭೆಯಲ್ಲಿ ಪ್ರಮುಖ ಗಣ್ಯರಿಂದ ವ್ಯಕ್ತವಾದ ಅಭಿಮತಗಳಿವು.

ಈ ಸಂದರ್ಭ ಎಸ್.ಎಂ.ಬಶೀರ್ ತನ್ನ ಜೀವಿತಾವಧಿಯಲ್ಲಿ ಕೈಗೊಂಡ ಯೋಜನೆ, ಸಮಾಜ ಸೇವೆಯ ವೀಡಿಯೊ ತುಣುಕುಗಳನ್ನು ಪ್ರದರ್ಶಿಸಲಾಯಿತು. ಮಸ್ಜಿದುಲ್ ಇಹ್ಸಾನ್‌ನ ಖತೀಬ್ ತಯ್ಯುಬ್ ದುಆಗೈದರು. ಸಭೆಯಲ್ಲಿ ಎಚ್‌ಐಎಫ್-ಇಂಡಿಯಾ ಅಧ್ಯಕ್ಷ ನಾಝಿಮ್ ಎ.ಕೆ., ಮರ್ಹೂಂ ಎಸ್.ಎಂ. ಬಶೀರ್‌ರ ಸಹೋದರ ಎಸ್.ಎಂ. ಫಾರೂಕ್, ಅಳಿಯ ಹಮ್ದದ್, ಪುತ್ರ ಶಹೀಮ್ ಮತ್ತಿತರರು ಪಾಲ್ಗೊಂಡಿದ್ದರು.

ಜಮಾಅತೆ ಇಸ್ಲಾಮೀ ಹಿಂದ್ ಮುಹಮ್ಮದ್ ಕುಂಞಿ, ಉಮರ್ ಯು.ಎಚ್. ಪೀಸ್ ಸ್ಕೂಲ್‌ನ ಟ್ರಸ್ಟಿ ಬಾಷಾ, ಬಿ.ಎಂ. ಮುಮ್ತಾಝ್ ಅಲಿ, ಅಬ್ದುಲ್ಲಾ ಮಾದುಮೂಲೆ, ಸೈಫ್ ಸುಲ್ತಾನ್ ಮಾತನಾಡಿದರು. ಎಚ್‌ಐಎಫ್ ಜೊತೆ ಕಾರ್ಯದರ್ಶಿ ಮುಹಮ್ಮದ್ ರಿಝ್ವಾನ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು.

"ಬಶೀರ್ ಅವರ ಅಗಲಿಕೆಯು ತುಂಬಾ ನೋವಿನ ಸಂಗತಿಯಾಗಿದೆ. ಅವರು ಮಾಡಿದ ಉತ್ತಮ ಕೆಲಸ ಕಾರ್ಯಗಳು ಸದಾ ಅಮರವಾಗಿದೆ. ಅವರ ಮರಣವು ನಮಗೆ ಚಿಂತಿಸುವಂತಹ ಸಂದೇಶವಾಗಿದೆ. ನಾನು ಆರೋಗ್ಯ ಸಚಿವನಾಗಿದ್ದಾಗ ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲು ಅವರೇ ಪ್ರೇರಣೆಯಾಗಿದ್ದರು. ಬದುಕಿನಲ್ಲಿ ಏನಾದರೊಂದು ಸಾಧಿಸುವ ಛಲಹೊಂದಿದ್ದರು. ಸದಾ ಆತ್ಮವಿಶ್ವಾಸ ದಿಂದಿದ್ದರು. ಅವರ ಸಾಮಾಜಿಕ ಯೋಜನೆಗಳನ್ನು ಮುಂದುವರಿಸೋಣ. ಕುಟುಂಬದ ಸರ್ವ ಸದಸ್ಯರ ಸಹಿತ ನಾವೆಲ್ಲಾ ಅವರ ಕನಸುಗಳನ್ನು ನನಸಾಗುವ ಜವಾಬ್ದಾರಿ ಹೊರೋಣ".

-ಯು.ಟಿ.ಖಾದರ್
ವಿಪಕ್ಷ ಉಪನಾಯಕರು, ರಾಜ್ಯ ವಿಧಾನಸಭೆ

 
"ಬಶೀರ್ ಅವರಿಗೆ ಸಮುದಾಯದ ಬಗ್ಗೆ ಅಪಾರ ಕಾಳಜಿ ಇತ್ತು. ಎಲ್ಲರ ಜೊತೆಯೂ ಆತ್ಮೀಯ ಸಂಬಂಧ ಹೊಂದಿದ್ದರು. ಒಮ್ಮೆ ಅವರ ಸ್ನೇಹ ಸಂಪಾದಿಸಿದರೆ ಅಗಲಿರಲಾರದಷ್ಟು ಹೊಂದಿಕೊಳ್ಳುತ್ತಿದ್ದರು".

-ಡಾ.ಯು.ಟಿ. ಇಫ್ತಿಕಾರ್

"ಬಿಗ್ ಬಿ. ಎಂದೇ ಕರೆಯಲ್ಪಡುತ್ತಿದ್ದ ಎಸ್.ಎಂ. ಬಶೀರ್ ತನ್ನ ಅತ್ಯಲ್ಪ ಅವಧಿಯ ಬದುಕಿನಲ್ಲಿ ಅನೇಕ ಮಹತ್ತರವಾದುದನ್ನು ಸಾಧಿಸಿ ತೋರಿಸಿದರು. ಸಮುದಾಯದ ಬಗ್ಗೆ ಮಾತ್ರವಲ್ಲ, ಸಮಾಜದ ಬಗ್ಗೆಯೂ ಅಪಾರ ಕಾಳಜಿ ಇತ್ತು. ಅನೇಕ ಮುಸ್ಲಿಮೇತರರ ಒಲವು ಗಳಿಸಿದ್ದರು. ಹಿರಿಯ, ಕಿರಿಯರಲ್ಲಿ ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಸಮಾಜಕ್ಕೆ ಸೇವೆ ಮಾಡಲು ನಮಗೆ ಸದಾ ಸ್ಫೂರ್ತಿಯಾಗಿದ್ದರು".

- ಸಾಜಿದ್ ಎ.ಕೆ. ಕಾರ್ಯಕಾರಿ ಸಮಿತಿ ಸದಸ್ಯ ಎಚ್‌ಐ‌ಎಫ್
 
"ಬಶೀರ್ ಅವರ ಬದುಕು ದಂತಕಥೆಯಂತಿತ್ತು. ಸಮುದಾಯದ ಮಾರ್ಗದರ್ಶಕರಾಗಿದ್ದ ಅವರು ಅಪ್ರತಿಮ ಸಂಘಟಕರಾಗಿದ್ದರು. ಅವರ ಗುಣಗಾನ ಮಾಡಿದಷ್ಟು ಸಾಲದು".

-ಮನ್ಸೂರ್ ಅಹ್ಮದ್ ಆಝಾದ್
ಅಧ್ಯಕ್ಷರು, ಹಿದಾಯ ಫೌಂಡೇಶನ್ ಮಂಗಳೂರು

 
"ಅವರು ನನ್ನ ಆತ್ಮೀಯ ಒಡನಾಡಿಯಾಗಿದ್ದರು. ಸರಳ ವ್ಯಕ್ತಿತ್ವದ ಅವರ ಸೇವೆಯನ್ನು ಗಮನಿಸಿದ್ದ ಅವರು ದುಡಿಯುತ್ತಿದ್ದ ಕಂಪನಿಯ ಹಿರಿಯ ಅಧಿಕಾರಿಗಳು ಸ್ವತಃ ಮಂಗಳೂರಿಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಸಲ್ಲಿಸಿದ್ದರು. ಅದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ".

-ಹಿದಾಯತ್ ಅಡ್ಡೂರು, ಉದ್ಯಮಿ, ದುಬೈ

Similar News