ದ.ಕ ಜಿಲ್ಲೆ: ಅಕ್ರಮ ಮರಳುಗಾರಿಕೆ ಆರೋಪ; ಲೋಕಾಯುಕ್ತ ಪೊಲೀಸ್ ತಂಡದಿಂದ ಮೂರು ಕಡೆ ದಾಳಿ

Update: 2022-12-09 15:55 GMT

ಮಂಗಳೂರು, ಡಿ.9: ದ.ಕ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆಗಳಿಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ತಂಡ ಮರಳು ಸಹಿತ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದೆ.

ಲೋಕಾಯುಕ್ತ ಪೊಲೀಸ್‌ನ ಮೂರು ತಂಡಗಳು ಮುಲ್ಕಿ, ಬೆಳ್ತಂಗಡಿ, ಬಂಟ್ವಾಳ ಸಹಿತ ಹಲವೆಡೆ ದಾಳಿ ನಡೆಸಿ ಲಾರಿ, ಟಿಪ್ಪರ್, ಜೆಸಿಬಿ ಮತ್ತು ಮರಳು ಸಹಿತ 40 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆಯಾ ಪೊಲೀಸ್ ಠಾಣೆಗಳಿಗೆ ಹಸ್ತಾಂತರಿಸಿದೆ. ಈ ಬಗ್ಗೆ 3 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಗಣೇಶ್ ಕೆ. ಅವರ ಮಾರ್ಗದರ್ಶನದಂತೆ ಡಿವೈಎಸ್ಪಿಗಳಾದ ಕಲಾವತಿ, ಚೆಲುವರಾಜು ಬಿ, ಇನ್‌ಸ್ಪೆಕ್ಟರ್ ಅಮಾನುಲ್ಲಾ ನೇತೃತ್ವದ  3 ತಂಡಗಳು ದಾಳಿ ನಡೆಸಿದೆ. ಇನ್ನು ಕೆಲವು ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೋನ್-ಇನ್‌ನಲ್ಲಿ 25 ದೂರು

ಲೋಕಾಯುಕ್ತ ಮಂಗಳೂರು ವಿಭಾಗವು ದ.ಕ ಜಿಲ್ಲೆಗೆ ಸಂಬಂಧಿಸಿ ಶುಕ್ರವಾರ ನಡೆಸಿದ ‘ನೇರ ಫೋನ್-ಇನ್ ಕಾರ್ಯಕ್ರಮ’ದಲ್ಲಿ ಸಾರ್ವಜನಿಕರಿಂದ 25 ದೂರು ಕರೆಗಳು ಬಂದಿವೆ. ಇವುಗಳಲ್ಲಿ ಕಂದಾಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಮುಡಾಗೆ ಸಂಬಂಧಿಸಿದ ದೂರುಗಳಿವೆ. ಅವುಗಳ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮಿ ಗಣೇಶ್ ತಿಳಿಸಿದ್ದಾರೆ.

Similar News