ಕಳಪೆ ಕಾಮಗಾರಿ ಪ್ರಶ್ನಿಸಿದ ಪರಿಶಿಷ್ಟ ವ್ಯಕ್ತಿಯ ಕುಟುಂಬದ ಮೇಲೆ ಹಲ್ಲೆ: ಆರೋಪ

Update: 2022-12-09 16:41 GMT

ಬೆಂಗಳೂರು, ಡಿ. 9: ನಗರದ ಹೊರ ವಲಯದ ರಾಜಾನುಕುಂಟೆ ಪಂಚಾಯಿತಿ ವ್ಯಾಪ್ತಿಗೆ ಶ್ರೀರಾಮನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ ಪರಿಶಿಷ್ಟ ಜಾತಿ ವ್ಯಕ್ತಿಯ ಕುಟುಂಬದ ಮೇಲೆ ಗ್ರಾ.ಪಂ. ಸದಸ್ಯ ಮತ್ತವರ ಬೆಂಬಲಿಗರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. 

ಶ್ರೀರಾಮನಹಳ್ಳಿ ಮಾದಿಗ ಸಮುದಾಯದ ಸತೀಶ್ ಎಂಬುವವರು ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದರಿಂದ ಆಕ್ರೋಶಿತರಾದ ಗ್ರಾ.ಪಂ. ಸದಸ್ಯ ಬಾಲಾಜಿ ತನ್ನ ಬೆಂಬಲಿಗರೊಂದಿಗೆ ಸತೀಶ್ ನಿವಾಸಕ್ಕೆ ನುಗ್ಗಿದ್ದಾರೆಂದು ಆರೋಪಿಸಲಾಗಿದೆ.

ಈ ವೇಳೆ ಮನೆಯಲ್ಲಿ ಸತೀಶ್ ಪತ್ನಿ ಶಿಕ್ಷಕಿ ಪವಿತ್ರಾ ಹಾಗೂ ಮಕ್ಕಳು ಮಾತ್ರ ಇದ್ದರು. ಈ ಸಂದರ್ಭದಲ್ಲಿ ಬಾಲಾಜಿ ಮತ್ತವರ ಬೆಂಬಲಿಗರು ಪವಿತ್ರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ, ಗೂಂಡಾ ವರ್ತನೆ ಪ್ರದರ್ಶಿಸಿದ್ದಾರೆ. ಜಾತಿ ನಿಂಧನೆ ಮಾಡಿದ್ದು, ಕೊಲೆ ಬೆದರಿಕೆವೊಡ್ಡಿದ್ದಾರೆಂದು ದೂರು ನೀಡಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಾನಕುಂಟೆ ಠಾಣಾ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Similar News