ಬೆಂಗಳೂರು: ರೈಲಿನ ಬೋಗಿಯಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ಅಪರಿಚಿತ ಮೃತದೇಹ ಪತ್ತೆ!

Update: 2022-12-09 18:11 GMT

ಬೆಂಗಳೂರು, ಡಿ.9: ಬಂಗಾರಪೇಟೆ-ಎಸ್‍ಎಂವಿಟಿ ಬೆಂಗಳೂರು ಎಕ್ಸ್‍ಪ್ರೆಸ್ ರೈಲಿನ ಸೀಟೊಂದರ ಕೆಳಗೆ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲವೊಂದರಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಕೆಜಿಎಫ್‍ನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ರೈಲಿನಲ್ಲಿ ಘಟನೆ ಕಂಡು ಬಂದಿದ್ದು, ಬೆಡ್‍ಶೀಟ್ ಹೊದಿಸಿದ ಮೃತದೇಹಕ್ಕೆ ಅನುಮಾನ ಬಾರದಿರಲೆಂದು ಬಟ್ಟೆಗಳ ನಡುವೆ ತುರುಕಿ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲದೊಳಗೆ ಹಾಕಿ ಯಾರಿಗೂ ತಿಳಿಯದಂತೆ ರೈಲಿನ ಸೀಟಿನೊಳಗಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಗುರುವಾರ ರಾತ್ರಿ 11ರ ಸುಮಾರಿಗೆ ರೈಲು ಬೆಂಗಳೂರಿನ ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್‍ಗೆ ಬಂದಾಗ ರೈಲ್ವೆ ಹವಾ ನಿಯಂತ್ರಣ ಘಟಕದ ನಿರ್ವಾಹಕರೊಬ್ಬರು ಶವವನ್ನು ಪತ್ತೆ ಹಚ್ಚಿದ್ದಾರೆ. ರೈಲಿನಿಂದ ಪ್ರಯಾಣಿಕರು ಇಳಿದರೂ ಸೀಟೊಂದರ ಕೆಳಬದಿಯಲ್ಲಿದ್ದ ಚೀಲವನ್ನು ಮಾತ್ರ ಯಾರೂ ತೆಗೆದುಕೊಂಡು ಹೋಗಿರಲಿಲ್ಲ.

ಹೀಗಾಗಿ ಅನುಮಾನ ಮೂಡಿ, ರೈಲ್ವೆ ಪೊಲೀಸರಿಗೆ ವಿಷಯ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ವಿಷಯ ತಿಳಿದು ಬಂದಿದೆ. ಇನ್ನು ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಮೃತ ಮಹಿಳೆಯ ಗುರುತು ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಸುಮಾರು 35 ವರ್ಷ ವಯಸ್ಸಿನ ಮಹಿಳೆ ಎಂದು ಅಂದಾಜಿಸಲಾಗಿದ್ದು, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬುದಾಗಿ ಶಂಕಿಸಲಾಗಿದೆ. ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರು ಬಂಗಾರಪೇಟೆ-ಬೆಂಗಳೂರು ಮಾರ್ಗದ ರೈಲು ನಿಲ್ದಾಣಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆಗೆ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ.

Similar News