ಅಬಕಾರಿ ಇಲಾಖೆಯ ಮಾಹಿತಿ ನಿರ್ವಹಣೆ ಖಾಸಗಿ ಕಂಪೆನಿಗೆ?

Update: 2022-12-10 03:13 GMT

ಬೆಂಗಳೂರು: ಕರ್ನಾಟಕ ರಾಜ್ಯ ಪಾನೀಯ ನಿಗಮ ಮಂಡಳಿಯ (ಕೆಎಸ್‌ಬಿಸಿಎಲ್) ನಿಯಂತ್ರಣದಲ್ಲಿರುವ ಚಿಲ್ಲರೆ ಮದ್ಯ ಮಾರಾಟಗಾರರ ಪರವಾನಿಗೆ, ಮಾಹಿತಿ ಮತ್ತು ಅದರ ವಿವರ, ಅಬಕಾರಿ ಇಲಾಖೆಯ ಅಬಕಾರಿ ರಿಜಿಸ್ಟರ್ ನಿರ್ವಹಣೆಯನ್ನೂ  ಇದೀಗ ಖಾಸಗಿ ಕಂಪೆನಿ ಪ್ಯಾಟ್ರನ್ ಎಫೆಕ್ಟ್ ಲ್ಯಾಬ್ಸ್ ಪ್ರೈವೆಟ್ ಲಿಮಿಟೆಡ್‌ಗೆ ಆನ್ಲೈನ್ ಮೂಲಕ ಒದಗಿಸಲು ಅಬಕಾರಿ ಇಲಾಖೆಯು ಸರಕಾರದ ಅನುಮೋದನೆ ಕೋರಿರುವುದು ಇದೀಗ ಬಹಿರಂಗವಾಗಿದೆ.

ಬೆಂಗಳೂರಿನ ಕೋರಮಂಗಲ ದಲ್ಲಿರುವ ಪ್ಯಾಟ್ರನ್ ಎಫೆಕ್ಟ್ ಲ್ಯಾಬ್ಸ್ ಪ್ರೈವೆಟ್ ಲಿಮಿಟೆಡ್  ಅಭಿವೃದ್ಧಿ ಪಡಿಸಿರುವ ಡಿಜಿಟಲ್ ಎಕ್ಸೈಸ್ ಫ್ಲಾಟ್ಫಾರ್ಮ್ ತಂತ್ರಜ್ಞಾನವನ್ನು ಚಿಲ್ಲರೆ ಮದ್ಯ ಮಾರಾಟ ಮಳಿಗೆಯಲ್ಲಿ ಅಳವಡಿಸಿಕೊಳ್ಳುವ ಪ್ರಸ್ತಾವ ಇದಾಗಿದೆ.

ಹೊಸ ಮದ್ಯ ಮಾರಾಟ ಮಳಿಗೆ ಆರಂಭಿಸಲು ಅಬಕಾರಿ ನೀತಿಗೆ ತಿದ್ದುಪಡಿ  ತರಲು ಹೊರಟಿರುವ ಬೆನ್ನಲ್ಲೇ ರಾಜ್ಯದ ಎಲ್ಲ ಚಿಲ್ಲರೆ ಮದ್ಯ ಮಾರಾಟ ಮಳಿಗೆಗಳು ಮತ್ತು  ಅಬಕಾರಿ ರಿಜಿಸ್ಟರ್‌ಗಳ ನಿರ್ವಹಣೆಯನ್ನು ಖಾಸಗಿ ಕಂಪೆನಿಯು ಅಭಿವೃದ್ಧಿಪಡಿಸಿರುವ ತಂತ್ರಾಂಶದಲ್ಲಿ ಅಳವಡಿಸಲು ಅನುಮೋದನೆ ಕೋರಿ ಅಬಕಾರಿ ಇಲಾಖೆಯು ಸಲ್ಲಿಸಿರುವ ಪ್ರಸ್ತಾವ ಮುನ್ನೆಲೆಗೆ ಬಂದಿದೆ.

ವ್ಯಾಪಾರ ವಹಿವಾಟಿನ ಮಾಹಿತಿಯನ್ನೂ ಇದೇ ತಂತ್ರಾಂಶದ ಮೂಲಕ ಡಿಜಿಟಲ್ ರೂಪದಲ್ಲಿ ಕಾರ್ಯನಿರ್ವಹಿಸಲು ಲೈಸೆನ್ಸ್ ದಾರರಿಗೆ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಮದ್ಯ ದಾಸ್ತಾನು ವಹಿವಾಟಿನ ಮಾಹಿತಿ ಸಂಗ್ರಹಿಸಿ ಪಡೆಯಲು ಸುಲಭವಾಗುತ್ತದೆ ಎಂದು ಅಬಕಾರಿ ಇಲಾಖೆಯ ಆಯುಕ್ತರು 2022ರ ನವೆಂಬರ್ 10ರಂದು ಸಲ್ಲಿಸಿರುವ ಪ್ರಸ್ತಾವದಲ್ಲಿ ವಿವರಿಸಿದ್ದಾರೆ. ಈ ಸಂಬಂಧ ''the-file.in''ಗೆ ಕೆಲ ದಾಖಲೆಗಳು ಲಭ್ಯವಾಗಿವೆ.

ಮತದಾರರ ಸಮೀಕ್ಷೆ ನಡೆಸುವ ಸಂಬಂಧ ಅನುಮತಿ ಪಡೆದುಕೊಂಡಿದ್ದ ಖಾಸಗಿ ಸಂಸ್ಥೆಯು ದುರ್ಬಳಕೆ ಮಾಡಿಕೊಂಡಿರುವ ಬೆನ್ನಲ್ಲೇ ಚಿಲ್ಲರೆ ಮದ್ಯ ಮಾರಾಟಗಾರರ ಆದಾಯ, ಪರವಾನಿಗೆ, ಮಾಹಿತಿ, ಅಬಕಾರಿ ಇಲಾಖೆಯ ಅಬಕಾರಿ ರಿಜಿಸ್ಟರ್‌ಗಳ ನಿರ್ವಹಣೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಅಳವಡಿಸುವ ಷರತ್ತನ್ನೂ ವಿಧಿಸಿರುವುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.

ಬೆಂಗಳೂರು ನಗರ ಜಿಲ್ಲೆ-01ರ ವ್ಯಾಪ್ತಿಗೊಳಪಟ್ಟಿರುವ ಸಿಎಲ್-2 ಸನ್ನದಿನಲ್ಲಿ ಈ ತಂತ್ರಜ್ಞಾನವನ್ನು ಇದೇ ಕಂಪೆನಿ ಈಗಾಗಲೇ ಪ್ರಾಯೋಗಿಕವಾಗಿ ಅಳವಡಿಸಿದೆ. ಒಂದು ತಿಂಗಳಿಗೆ ಮಾತ್ರ ಸರಕಾರವು ಅನುಮತಿ (ಪತ್ರ ಸಂಖ್ಯೆ: ಆಇ 30 ಇಎಫ್‌ಎಲ್ 20221 ದಿನಾಂಕ 03-02-2022)  ನೀಡಿತ್ತು. ಫೆಡರೇಷನ್ ಆಫ್ ವೈನ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಕೂಡ ಇದಕ್ಕೆ ಒಪ್ಪಿಗೆ ನೀಡಿತ್ತು ಎಂದು ಗೊತ್ತಾಗಿದೆ.

ಈಗ ಸನ್ನದು ಮಳಿಗೆಯಲ್ಲಿ ನಿರ್ವಹಿಸಲಾಗುವ ಅಬಕಾರಿ ರಿಜಿಸ್ಟರ್‌ಗಳ ನಿರ್ವಹಣೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಅಳವಡಿಸಲು ಕೆಲವು ಷರತ್ತಿಗೊಳಪಟ್ಟು ಇಡೀ ರಾಜ್ಯಾದ್ಯಂತ ಪ್ಯಾಟ್ರನ್ ಎಫೆಕ್ಟ್ ಲ್ಯಾಬ್ಸ್ ಪ್ರೈ.ಲಿ. ಸಂಸ್ಥೆಗೆ ಮಾತ್ರ ಅನುಮೋದನೆ ನೀಡಬೇಕು ಎಂದು ಸರಕಾರವನ್ನು ಕೋರಿರುವುದು ತಿಳಿದು ಬಂದಿದೆ.

‘ಮದ್ಯ ಮಾರಾಟ ಪರವಾನಿಗೆ, ವಹಿವಾಟು ಮತ್ತು ಇನ್ವಾಯ್ಸ್

ಗಳ ಈಗಾಗಲೇ ಕರ್ನಾಟಕ ರಾಜ್ಯ ಪಾನೀಯ ನಿಗಮ ಮಂಡಳಿಯ (ಕೆಎಸ್‌ಬಿಸಿಎಲ್) ನಿಯಂತ್ರಣದಲ್ಲಿವೆ. ಇದನ್ನು ಕೆಎಸ್‌ಬಿಸಿಎಲ್ ಸಂಸ್ಥೆಯವರೇ ಪ್ಯಾಟ್ರನ್ ಎಫೆಕ್ಟ್ ಲ್ಯಾಬ್ಸ್ ಪ್ರೈ.ಲಿ. ಅವರಿಗೆ ಆನ್‌ಲೈನ್ ಮುಖಾಂತರ ಒದಗಿಸಬೇಕಾಗಿದೆ. ಅಲ್ಲದೆ ಮಾಹಿತಿ ಮತ್ತು ವಿವರಗಳನ್ನು ಅಬಕಾರಿ ಇಲಾಖೆಯು ಒಪ್ಪಿದಲ್ಲಿ ಮಾತ್ರವೇ ಪ್ಯಾಟ್ರನ್ ಎಫೆಕ್ಟ್ ಲ್ಯಾಬ್ಸ್ ಪ್ರೈ.ಲಿ. ಅವರಿಗೆ ಕೋರಿರುವ ಮಾಹಿತಿ ಒದಗಿಸಬಹುದಾಗಿದೆ’ ಎಂದು ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.

ಹೀಗಾಗಿ ಸನ್ನದು ಮಳಿಗೆಗಳಲ್ಲಿ ನಿರ್ವಹಿಸಲಾಗುವ ಅಬಕಾರಿ ರಿಜಿಸ್ಟರ್‌ಗಳ ನಿರ್ವಹಣೆಯಲ್ಲಿ ಮಾಹಿತಿ, ತಂತ್ರಜ್ಞಾನವನ್ನು ಅಳವಡಿಸುವ ಸಂಬಂಧ ಕೆಲ ಷರತ್ತುಗಳನ್ನು ವಿಧಿಸಿ ಅನುಮೋದನೆ ನೀಡಬಹುದು ಎಂದು ಸರಕಾರಕ್ಕೆ ಅಬಕಾರಿ ಆಯುಕ್ತರು ಪ್ರಸ್ತಾವದಲ್ಲಿ ವಿವರಿಸಿದ್ದಾರೆ.

Similar News