ಸಾಹಿತ್ಯ ಶಾಶ್ವತತೆ ನೀಡುವ ಅದ್ಭುತ ಯೋಜನೆ: ಎಚ್.ಎಸ್.ವೆಂಕಟೇಶ್ ಮೂರ್ತಿ
ಬೆಂಗಳೂರು, ಡಿ.10: ಸಾಹಿತ್ಯ ಕಲೆಯೂ ಶಾಶ್ವತತೆಯನ್ನು ನೀಡುವ ಅದ್ಭುತ ಯೋಜನೆಯಾಗಿದ್ದು, ಪ್ರೇಮ ಕವಿಯೆಂದೇ ಹೆಸರಾಗಿರುವ ಪ್ರೊ.ಕೆ.ಎಸ್.ನರಸಿಂಹಸ್ವಾಮಿ ಅವರ ಕಾವ್ಯದ ಸಾಲುಗಳು ಜೀವನದ ಪ್ರತಿ ಸಂದರ್ಭಕ್ಕೂ ಸಂಬಂಧಿಸುತ್ತವೆ ಎಂದು ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಸಿ.ಎಂ.ಎಸ್. ಬಿಸಿನೆಸ್ ಸ್ಕೂಲ್‍ನ ಸಭಾಂಗಣದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ನಡೆದ 2020-21 ಮತ್ತು 2021-22ನೆ ಸಾಲಿನ ಕೆ.ಎಸ್.ನರಸಿಂಹಸ್ವಾಮಿ ಅವರ ಧರ್ಮಪತ್ನಿ ವೆಂಕಮ್ಮನವರ ನೆನಪಿನ ‘ನಿನ್ನೊಲುಮೆಯಿಂದಲೇ’ ಕವಿಪತ್ನಿ ಗೌರವ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕವಿತೆಗಳು ವಾಸ್ತವ ಜಗತ್ತಿನ ದನಿಗಳಾಗುತ್ತವೆ. ಕವಿತೆಗಳು ಕವಿವರ್ಯರಿಗೆ ಚಿರಯೌವ್ವನವನ್ನು ದಯಾ ಪಾಲಿಸುತ್ತವೆ. ಹಾಗೆಯೇ ಕೆ.ಎಸ್.ನ ಅವರ ಕವಿತೆಗಳ ನಾಯಕ-ನಾಯಕಿಯರಿಗೆ ಯಾವತ್ತೂ ವಯಸ್ಸಾಗಲಿಲ್ಲ. ದ.ರಾ.ಬೇಂದ್ರೆ, ಕುವೆಂಪು, ಪು.ತಿ.ನ ಸೇರಿದಂತೆ ಆ ಕಾಲದ ಎಲ್ಲಾ ಕವಿಗಳಿಂತ ಭಿನ್ನವಾಗಿ ಕವಿತೆಗಳನ್ನು ರಚಿಸುತ್ತಿದ್ದರು. ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಪದಗಳನ್ನು ಬಳಸಿ, ನೇರ ಮನ ಮುಟ್ಟುವಂತೆ ಜನರಿಗೆ ಬೇಕಾದುದ್ದನ್ನು ಬರೆಯುತ್ತಿದ್ದರು ಎಂದು ವಿವರಿಸಿದರು.
ಕೆ.ಎಸ್.ನ. ಅವರ ಕಾವ್ಯದ ವಸ್ತು ಕುಟುಂಬವಾದ್ದರಿಂದ ಜಿ.ಎಸ್.ಶಿವರುದ್ರಪ್ಪನವರು ಕುಟುಂಬ ಕಲ್ಯಾಣ ಕಾಳಜಿಯ ಕವಿ ಎಂದು ಕರೆದರು. ಹೆಂಡತಿಯನ್ನು ಆಧಾರವಾಗಿಟ್ಟುಕೊಂಡು ದಾಂಪತ್ಯ ಗೀತೆಗಳನ್ನು ರಚಿಸುತ್ತಿದ್ದರು. ಆದುದರಿಂದ ಅವರ ಹೆಸರಿನ ಟ್ರಸ್ಟ್ ರಾಜ್ಯದ ಯಾವೊಂದು ಸಂಸ್ಥೆಯು ನೀಡದ ಕವಿಪತ್ನಿಯ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 2020-21ನೆ ಸಾಲಿನ ಪ್ರಶಸ್ತಿಯನ್ನು ಕವಿ ಸತ್ಯಾನಂದ ಪಾತ್ರೋಟ ಅವರ ಪತ್ನಿ ಸಮತಾ ಸತ್ಯಾನಂದ ಪಾತ್ರೋಟ ಹಾಗೂ 2021-22 ನೇ ಸಾಲಿನ ಪ್ರಶಸ್ತಿಯನ್ನು ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಪತ್ನಿ ಗಿರಿಜಾ ಲಕ್ಷ್ಮಣರಾವ್ ಅವರಿಗೆ ನೀಡಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ವಹಿಸಿದ್ದರು. ಸಹಾಯಕ ನಿರ್ದೇಶಕ ಎನ್.ಉದಯಕುಮಾರ್, ಕವಿಗಳಾದ ಬಿ.ಆರ್.ಲಕ್ಷ್ಮಣರಾವ್, ಸತ್ಯಾನಂದ ಪಾತ್ರೋಟ, ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ, ಸಂಚಾಲಕಿ ಡಾ.ಮೇಲಖಾ ವೆಂಕಟೇಶ್ ಉಪಸ್ಥಿತರಿದ್ದರು.