×
Ad

ತೆಲಂಗಾಣ: ಉಪವಾಸದ ವೇಳೆ ಹದಗೆಟ್ಟ ವೈ.ಎಸ್. ಶರ್ಮಿಳಾ ಆರೋಗ್ಯ, ಆಸ್ಪತ್ರೆಗೆ ಶಿಫ್ಟ್ ಮಾಡಿದ ಪೊಲೀಸರು

Update: 2022-12-11 10:22 IST

ಹೈದರಾಬಾದ್: ರಾಜ್ಯಾದ್ಯಂತ  ತನ್ನ  ಪಾದಯಾತ್ರೆಗೆ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅನಿರ್ದಿಷ್ಟಾವಧಿ ಉಪವಾಸ  ನಡೆಸುತ್ತಿದ್ದ ವೇಳೆ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಪೊಲೀಸರು ಇಲ್ಲಿನ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ಶರ್ಮಿಳಾ   ಶುಕ್ರವಾರ ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.

ಮಾಧ್ಯಮ ಸಿಬ್ಬಂದಿ, ಪಕ್ಷದ ಮುಖಂಡರು ಹಾಗೂ  ಕಾರ್ಯಕರ್ತರನ್ನು ಸ್ಥಳದಿಂದ ದೂರ ಸರಿಯುವಂತೆ ತಿಳಿಸಿದ ಪೊಲೀಸರು ಶರ್ಮಿಳಾ  ಅವರ ಉಪವಾಸವನ್ನು ವಿಫಲಗೊಳಿಸಿದರು. ಇಂದು ಮುಂಜಾನೆ 1.00 ಗಂಟೆಯ ಸುಮಾರಿಗೆ ಅವರನ್ನು "ಬಲವಂತವಾಗಿ" ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪಕ್ಷ ತಿಳಿಸಿದೆ.

ಶರ್ಮಿಳಾ ಅವರು ನೀರನ್ನು ಸಹ ಸೇವಿಸದ ಕಾರಣ ಅವರ ಆರೋಗ್ಯ ಸ್ಥಿತಿ ಶೀಘ್ರವಾಗಿ ಹದಗೆಡುತ್ತಿದೆ ಎಂದು ಅದು ಹೇಳಿದೆ.

ಶರ್ಮಿಳಾ ಅವರ ಆರೋಗ್ಯದ ಮೇಲೆ ನಿಗಾ ಇರಿಸಿರುವ ವೈದ್ಯರು, ಶರ್ಮಿಳಾ ಅವರ ರಕ್ತದೊತ್ತಡ ಮತ್ತು ಗ್ಲೂಕೋಸ್ ಮಟ್ಟವು ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ ಎಂದು ಹೇಳಿದ್ದಾರೆ. ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗುವ ನಿರ್ಜಲೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಇದು ಅವರ ಮೂತ್ರಪಿಂಡಗಳಿಗೆ ಅಪಾಯ ವನ್ನುಂಟುಮಾಡುವಷ್ಟು ಪ್ರಬಲವಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

Similar News