ಅಂಬೇಡ್ಕರ್, ಮಹಾತ್ಮ ಫುಲೆ ಬಗ್ಗೆ ವಿವಾದಾತ್ಮಕ ಹೇಳಿಕೆ: ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಮೇಲೆ ಶಾಯಿ ಎಸೆತ

Update: 2022-12-11 05:47 GMT

ಪುಣೆ, ಡಿ.10: ಡಾ.ಬಿ.ಆರ್. ಅಂಬೇಡ್ಕರ್ ಹಾಗೂ  ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಅವರ ಕುರಿತು ನೀಡಿರುವ  ವಿವಾದಾತ್ಮಕ ಹೇಳಿಕೆಯನ್ನು ವಿರೋಧಿಸಿ ಮಹಾರಾಷ್ಟ್ರದ ಸಚಿವ ಹಾಗೂ ಬಿಜೆಪಿ ಮುಖಂಡ ಚಂದ್ರಕಾಂತ್ ಪಾಟೀಲ್ ಅವರ ಮೇಲೆ ಶನಿವಾರ ಇಲ್ಲಿಗೆ ಸಮೀಪದ ಪಿಂಪ್ರಿ ನಗರದಲ್ಲಿ ಶಾಯಿ ಎರಚಲಾಗಿದೆ.

ಪಾಟೀಲ್ ಮೇಲೆ ಶಾಯಿ ಎಸೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಿಂಪ್ರಿ-ಚಿಂಚ್‌ವಾಡ್ ಪೊಲೀಸ್ ಕಮಿಷನರ್ ಅಂಕುಶ್ ಶಿಂಧೆ ತಿಳಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಪಾಟೀಲ್ ಹೇಳಿಕೆಯನ್ನು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದರು.

ಘಟನೆಯ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಬಿಜೆಪಿಯ  ಹಿರಿಯ ನಾಯಕ ಪಾಟೀಲ್ ಕಟ್ಟಡದಿಂದ ಹೊರಬರುತ್ತಿದ್ದಂತೆ ಅವರ ಮೇಲೆ ಶಾಯಿ ಎಸೆದಿರುವುದು ಕಂಡುಬಂದಿದೆ. ಸಚಿವರ ಸುತ್ತ ಇದ್ದ ಭದ್ರತಾ ಸಿಬ್ಬಂದಿ ತಕ್ಷಣ ಆ ವ್ಯಕ್ತಿಯನ್ನು ಹಿಡಿದರು.

ಮಸಿ ಎರಚುವ ಘಟನೆಗೂ ಮುನ್ನ ಕೆಲವು ಪ್ರತಿಭಟನಾಕಾರರು ಪಿಂಪ್ರಿಯಲ್ಲಿ ಸಚಿವರ ಬೆಂಗಾವಲು ಪಡೆಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದರು.

ಶುಕ್ರವಾರ ಔರಂಗಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮರಾಠಿಯಲ್ಲಿ ಮಾತನಾಡಿದ ಉನ್ನತ ಹಾಗೂ  ತಾಂತ್ರಿಕ ಶಿಕ್ಷಣ ಸಚಿವ ಪಾಟೀಲ್, ಅಂಬೇಡ್ಕರ್ ಹಾಗೂ  ಫುಲೆ ಅವರು ಶಿಕ್ಷಣ ಸಂಸ್ಥೆಗಳಿಗೆ ಸರಕಾರದ ಅನುದಾನವನ್ನು ಕೇಳಲಿಲ್ಲ, ಅವರು ಶಾಲಾ-ಕಾಲೇಜುಗಳನ್ನು ಆರಂಭಿಸಲು ಹಣವನ್ನು ಸಂಗ್ರಹಿಸಲು ಜನರಲ್ಲಿ "ಭಿಕ್ಷೆ" ಬೇಡಿದ್ದರು ಎಂದಿದ್ದರು.

"ಭಿಕ್ಷೆ" ಎಂಬ ಪದದ ಬಳಕೆಯು ವಿವಾದವನ್ನು ಸೃಷ್ಟಿಸಿತ್ತು.

Similar News