ಸಾಮೂಹಿಕ ಮತಾಂತರ ವಿರೋಧಿ ಕಾನೂನು ದಲಿತರನ್ನು ಗುರಿಯಾಗಿಸಿದೆಯೆ?

Update: 2022-12-12 04:52 GMT

ಹೆಚ್ಚುತ್ತಿರುವ ಸಾಮೂಹಿಕ ಮತಾಂತರಗಳು ಬಿಜೆಪಿಯನ್ನೂ ಸಂಘ ಪರಿವಾರವನ್ನೂ ಭಯಗೊಳಿಸುತ್ತಿವೆಯೆ? ಸಾಮೂಹಿಕಮತಾಂತರದ ವಿರುದ್ಧದ ಕಠಿಣ ಕಾನೂನುಗಳನ್ನು ಬಿಜೆಪಿ ಆಡಳಿತ ವಿರುವ ರಾಜ್ಯಗಳು ಜಾರಿಗೆ ತರುತ್ತಿರುವುದರ ಹಿಂದೆ ಇಂತಹ ಭಯವೇ ಪ್ರೇರಕ ವಾಗಿದೆಯೆ? ಈ ಕಾನೂನುಗಳು ದಲಿತ ಮುಖಂಡರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಸುತ್ತವೆಯೆ? ಮುಖ್ಯವಾಗಿ, ದಲಿತರು ಬೌದ್ಧಧರ್ಮಕ್ಕೆ ಮತಾಂತರಗೊಳ್ಳುವ ದೀರ್ಘಕಾಲದ ಸಂಪ್ರದಾಯವನ್ನು ನಿಗ್ರಹಿಸುವ ಉದ್ದೇಶವಾಗಿವೆಯೆ?

ಮತಾಂತರಗಳಾಗುತ್ತಿದ್ದಂತೆ ಬಲವಂತದ ಮತಾಂತರ ಎಂದು ಆರೋಪಿಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವ ಹಿಂದೂಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಹಿಂದುತ್ವ ಬೆಂಬಲಿಗರ ಪ್ರತಿಪಾದನೆ. ಬಲವಂತದ ಮತಾಂತರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲದಿದ್ದರೂ, ಇತ್ತೀಚಿನ ತಿಂಗಳುಗಳಲ್ಲಿ ಬಲವಂತದ ಮತಾಂತರವನ್ನು ಅಪರಾಧವೆಂದು ಪರಿಗಣಿಸುವ ಕಾನೂನುಗಳನ್ನು ಹಲವಾರು ರಾಜ್ಯಗಳು ಜಾರಿಗೆ ತಂದಿವೆ.

ಆದರೆ ಈ ಹೊಸ ಕಾನೂನುಗಳು ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡಿಲ್ಲ. ಬದಲಾಗಿ, ಜಾತಿ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಲು ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವುದನ್ನು ಹತ್ತಿಕ್ಕುವ ಪ್ರಯತ್ನವಾಗಿ ಸಾಮೂಹಿಕ ಮತಾಂತರ ನಿಷೇಧ ಕಾನೂನು ಗಳನ್ನು ತರಲಾಗುತ್ತಿದೆ ಎಂಬ ಅಭಿಪ್ರಾಯವನ್ನು ಅಂಬೇಡ್ಕರ್‌ವಾದಿಗಳು ವ್ಯಕ್ತಪಡಿಸುತ್ತಿದ್ದಾರೆ. ಹಿಂದೂಗಳು ಸಾಮೂಹಿಕವಾಗಿ ಇಸ್ಲಾಮ್ ಅಥವಾ ಇತರ ಧರ್ಮಗಳಿಗೆ ಮತಾಂತರಗೊಳ್ಳುವುದಿಲ್ಲ. ಆದರೆ ದಲಿತರು ಮಾತ್ರ ಸಾಮೂಹಿಕವಾಗಿ ಹಿಂದೂ ಧರ್ಮವನ್ನು ತೊರೆಯಲು ಒಲವು ತೋರುತ್ತಾರೆ ಮತ್ತು ಅದನ್ನು ಬಹಿರಂಗವಾಗಿಯೇ ಘೋಷಿಸುತ್ತಾರೆ. ಹಾಗಾಗಿ, ಈ ಕಾನೂನುಗಳು ದಲಿತರನ್ನು ಹಿಂದೂ ಧರ್ಮದಿಂದ ಮತಾಂತರಗೊಳ್ಳದಂತೆ ಹೆದರಿಸುವ ಮತ್ತು ವಿರೋಧಿಸುವ ಪ್ರಯತ್ನ ಗಳಾಗಿವೆ ಎನ್ನುತ್ತಾರೆ ದಲಿತ ಹಕ್ಕುಗಳ ಕಾರ್ಯಕರ್ತರು.

ಒಡಿಶಾ, ಮಧ್ಯಪ್ರದೇಶ, ಛತ್ತೀಸ್‌ಗಡ, ಗುಜರಾತ್, ಜಾರ್ಖಂಡ್ ಮತ್ತು ರಾಜಸ್ಥಾನಗಳಲ್ಲಿ ಮತಾಂತರ ವಿರೋಧಿ ಕಾನೂನುಗಳು ಬಹಳ ಹಿಂದಿನಿಂದಲೂ ಇವೆ. ಉತ್ತರ ಪ್ರದೇಶವು 2020ರಲ್ಲಿ ಕಾನೂನು ಬಾಹಿರ ಮತಾಂತರ ನಿಷೇಧ ಸುಗ್ರೀವಾಜ್ಞೆಯನ್ನು ಜಾರಿಗೆ ತಂದ ನಂತರ ಇನ್ನೂ ಹೆಚ್ಚಿನ ರಾಜ್ಯಗಳು ಲವ್ ಜಿಹಾದ್ ತಡೆಗಟ್ಟುವುದಕ್ಕಾಗಿ ಎಂದು ಹೇಳುತ್ತ ಇದೇ ರೀತಿಯ ಕಾನೂನುಗಳನ್ನು ತಂದವು ಅಥವಾ ಇರುವ ಕಾನೂನುಗಳನ್ನು ತಿದ್ದುಪಡಿ ಮಾಡಿದವು. ಲವ್ ಜಿಹಾದ್ ಎಂಬುದು ಹಿಂದುತ್ವವಾದಿಗಳು ಹರಡಿದ ಪಿತೂರಿ ಸಿದ್ಧಾಂತವಾಗಿದ್ದು, ಮುಸ್ಲಿಮ್ ಪುರುಷರು ಹಿಂದೂ ಮಹಿಳೆಯರನ್ನು ಇಸ್ಲಾಮ್‌ಗೆ ಮತಾಂತ ರಿಸುವುದಕ್ಕಾಗಿ ಮದುವೆಯಾಗುತ್ತಿದ್ದಾರೆ ಎಂದು ಆರೋಪಿಸಲಾಗುತ್ತದೆ.

ಈ ವರ್ಷ, ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಉತ್ತರಾಖಂಡ ಗಳು ಸಾಮೂಹಿಕ ಮತಾಂತರವನ್ನು ಅಪರಾಧವೆಂದು ಪರಿಗಣಿಸುವ ಮತಾಂತರ ವಿರೋಧಿ ಕಾನೂನುಗಳನ್ನು ಅಂಗೀಕರಿಸಿವೆ ಅಥವಾ ತಿದ್ದುಪಡಿ ಮಾಡಿವೆ. ಕಳೆದ ವರ್ಷ ಮಧ್ಯಪ್ರದೇಶವು ಇದೇ ರೀತಿಯ ಕಾನೂನನ್ನು ಜಾರಿಗೊಳಿಸಿತ್ತು.

ಮೊನ್ನೆಯಷ್ಟೇ ಉತ್ತರಾಖಂಡ ವಿಧಾನಸಭೆ ಕೂಡ ಮತಾಂತರ ವಿರೋಧಿ ಕಾನೂನನ್ನು ಹೆಚ್ಚು ಕಠಿಣಗೊಳಿಸಲು ತನ್ನ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2018ನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸಿತು. ಅದರ ಪ್ರಕಾರ, ಸಾಮೂಹಿಕ ಮತಾಂತರವು ಅಪರಾಧವಾಗಿದ್ದು, ಇದಕ್ಕಾಗಿ 50,000 ರೂ. ದಂಡದ ಜೊತೆಗೆ 3ರಿಂದ 10 ವರ್ಷಗಳ ಜೈಲು ಶಿಕ್ಷೆಯಾಗ ಬಹುದು. ಎರಡು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಒಟ್ಟಿಗೆ ಮತಾಂತ ರಿಸಿದರೆ ಅದನ್ನು ಸಾಮೂಹಿಕ ಮತಾಂತರ ಎಂದು ವ್ಯಾಖ್ಯಾನಿಸಲಾಗಿದೆ.

ಕರ್ನಾಟಕದಲ್ಲಿ ಸೆಪ್ಟಂಬರ್‌ನಲ್ಲಿ ಜಾರಿಗೆ ಬಂದಿರುವ ಹೊಸ ಕಾನೂನಿನ ಪ್ರಕಾರ, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಒಟ್ಟಿಗೆ ಮತಾಂತರಿಸಿದರೆ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ. ಮಧ್ಯಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2021ರ ಪ್ರಕಾರ, ಸಾಮೂಹಿಕ ಮತಾಂತರಕ್ಕೆ 5ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ. ಆರು ದಶಕಗಳಿಗೂ ಹೆಚ್ಚು ಕಾಲದಿಂದ ದಲಿತ ಸಮುದಾಯದ ಜನರು ಇತರ ಧರ್ಮಗಳಿಗೆ, ವಿಶೇಷವಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವ ಮಹಾರಾಷ್ಟ್ರದಲ್ಲಿಯೂ ಕೆಲವು ರಾಜಕಾರಣಿಗಳು ಮತ್ತು ಕಾರ್ಯಕರ್ತರು ಮತಾಂತರ ವಿರೋಧಿ ಕಾನೂನುಗಳಿಗೆ ಒತ್ತಾಯಿಸುತ್ತಿದ್ದಾರೆ.

ಇಂತಹ ಕಾನೂನುಗಳ ಹಿಂದೆ ಇರುವ ರಾಜಕೀಯ ಏನು? ಭಾರತೀಯ ಸಂವಿಧಾನದ ಶಿಲ್ಪಿ ಮತ್ತು ಜಾತಿ ವಿರೋಧಿ ನಾಯಕ ಬಿ.ಆರ್. ಅಂಬೇಡ್ಕರ್ ಅವರು 1956ರಲ್ಲಿ ಲಕ್ಷಾಂತರ ದಲಿತ ಅನುಯಾಯಿಗ ಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಜಾತಿ ದಬ್ಬಾಳಿಕೆ ಮತ್ತು ತಾರತಮ್ಯದ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಲು ದಲಿತರು ಈ ಮಾರ್ಗವನ್ನು ಅನುಸರಿಸುತ್ತಾರೆ.

ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವು ಸಾಮೂಹಿಕ ಮತಾಂತರವನ್ನು ವಿರೋಧಿಸುತ್ತದೆ.

ಅಕ್ಟೋಬರ್‌ನಲ್ಲಿ, ದಿಲ್ಲಿ ಸರಕಾರದ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಸಾಮೂಹಿಕ ಮತಾಂತರ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ನಂತರ ಆಮ್ ಆದ್ಮಿ ಪಕ್ಷವು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಬಿಜೆಪಿ ಆರೋಪಿಸಿತು. ಗೌತಮ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದರು, 10,000 ಬುದ್ಧಿಜೀವಿಗಳು ಬೌದ್ಧ ಧರ್ಮವನ್ನು ಸೇರುವ ಮೂಲಕ ಜಾತಿ ಮುಕ್ತ ಮತ್ತು ಅಸ್ಪೃಶ್ಯತೆ ಮುಕ್ತ ಭಾರತಕ್ಕಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಅವರು ಹೇಳಿದ್ದರು.

ಉತ್ತರ ಪ್ರದೇಶ ಸರಕಾರವು ಲವ್ ಜಿಹಾದ್ ನಿಗ್ರಹಿಸುವುದಕ್ಕಾಗಿ ಎಂದು ಹೇಳಿ ತಂದಿರುವ ಮತಾಂತರ ವಿರೋಧಿ ಸುಗ್ರೀವಾಜ್ಞೆಯು ಸಾಮೂಹಿಕ ಮತಾಂತರದ ವಿರುದ್ಧದ ನಿಬಂಧನೆಯನ್ನು ಸಹ ಹೊಂದಿದೆ. ಅಂಬೇಡ್ಕರ್‌ವಾದಿ ಮತ್ತು ದಲಿತ ಸಂಘಟನೆಗಳು ಈ ಕಾನೂನು ಪ್ರಾಥಮಿಕವಾಗಿ ರಾಜ್ಯದ ದಲಿತರಲ್ಲಿನ ಪ್ರತಿರೋಧವನ್ನು ದಮನಿಸಲು ಮತ್ತು ಬೌದ್ಧ ಮತಾಂತರ ಕಾರ್ಯಕ್ರಮಗಳನ್ನು ಸಂಘಟಿಸದಂತೆ ಮತ್ತದರಲ್ಲಿ ಭಾಗವಹಿಸದಂತೆ ತಡೆಯಲು ಉದ್ದೇಶಿಸಿದೆ ಎಂದು ಆರೋಪಿಸಿದ್ದವು. ಇತರ ಕಾನೂನುಬಾಹಿರ ವೈಯಕ್ತಿಕ ಮತಾಂತರ ಪ್ರಕರಣಗಳಿಗೆ ಹೋಲಿಸಿದರೆ, ಉತ್ತರ ಪ್ರದೇಶದ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ-2021, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಸಾಮೂಹಿಕ ಮತಾಂತರಕ್ಕೆ ಕಠಿಣ ಶಿಕ್ಷೆಯನ್ನು ಒಳಗೊಂಡಿದೆ ಎಂಬ ಅಂಶವನ್ನು ಅಂಬೇಡ್ಕರ್‌ವಾದಿ ಕಾರ್ಯಕರ್ತರು ಎತ್ತಿ ತೋರಿಸಿದ್ದಾರೆ.

ಸಾಮೂಹಿಕ ಮತಾಂತರಗಳ ಹಿಂದೆಯೂ ರಾಜಕೀಯವಿದೆ. ಆದು ಉತ್ತಮ ಜೀವನದ ಭರವಸೆ ಕೊಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ದಾರಿತಪ್ಪಿಸುತ್ತವೆ. ಇಂತಹ ರಾಜಕೀಯ ಪ್ರೇರಿತ ಮತಾಂತರಗಳಿಂದ ಜನರು ತೊಂದರೆಗೊಳಗಾಗುವುದನ್ನು ತಡೆಯವುದಕ್ಕೆ ಇಂತಹ ಕಾನೂನು ಅಗತ್ಯವೆಂಬುದು, ಮತಾಂತರ ನಿಷೇಧ ಕಾನೂನನ್ನು ಬೆಂಬಲಿಸುವವರ ವಾದ. ಆದರೆ, ಸಾಮೂಹಿಕ ಮತಾಂತರದ ವಿರುದ್ಧ ಇತ್ತೀಚಿನ ಕಾನೂನುಗಳನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ತರುತ್ತಿದೆ. ದಲಿತರು ಸಾಮೂಹಿಕವಾಗಿ ಹಿಂದೂ ಧರ್ಮವನ್ನು ತೊರೆಯಲು ಹೆಚ್ಚು ಒಲವು ತೋರುತ್ತಿದ್ದಾರೆ. ಬಿಜೆಪಿ ಇದನ್ನು ತಡೆಯುವ ಪ್ರಯತ್ನ ಮಾಡುತ್ತಿದೆ ಎಂಬುದು ದಲಿತ ನಾಯಕರ ಆರೋಪ.

ಈ ಹಿಂದೆ ಬಿಜೆಪಿಯು ಸಾಮೂಹಿಕ ಮತಾಂತರವನ್ನು ಅಪರಾಧ ವೆಂದು ಪರಿಗಣಿಸುವ ಕಾನೂನುಗಳನ್ನು ಏಕೆ ಜಾರಿಗೆ ತಂದಿರಲಿಲ್ಲ ಎಂಬುದಕ್ಕೂ ದಲಿತ ನಾಯಕರು ಕಾರಣಗಳನ್ನು ಕೊಡುತ್ತಾರೆ. ಈ ಮೊದಲು ಬಿಜೆಪಿ ದಲಿತರನ್ನು ನೇರವಾಗಿ ಬೆದರಿಸಲು ಬಯಸುತ್ತಿರಲಿಲ್ಲ. ಏಕೆಂದರೆ ದಲಿತ ಸಮುದಾಯವು ತಕ್ಷಣವೇ ರಾಜಕೀಯವಾಗಿ ಪ್ರತಿಕ್ರಿಯಿ ಸುತ್ತದೆ ಎಂಬ ಭಯ ಅದಕ್ಕಿತ್ತು. ಆದರೆ ಈಗ ಬಿಜೆಪಿ ಅಧಿಕಾರದಲ್ಲಿ ಸಂಪೂರ್ಣ ಪ್ರಾಬಲ್ಯ ಹೊಂದಿದೆ. ದಲಿತರನ್ನು ಎದುರುಹಾಕಿಕೊಂಡರೂ ಅದಕ್ಕೀಗ ಏನೂ ಹಾನಿಯಿಲ್ಲ ಎಂಬ ವಾದ ದಲಿತ ನಾಯಕರದು.

ಸಾಮೂಹಿಕ ಮತಾಂತರದ ವಿರುದ್ಧದ ಕಾನೂನುಗಳು ನಿರ್ದಿಷ್ಟ ಸಮುದಾಯಗಳನ್ನು ಬೆದರಿಸುವ ಗುರಿಯನ್ನು ಹೊಂದಿರುವುದಲ್ಲದೆ, ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಸರಕಾರದ ಪ್ರಯತ್ನವೂ ಇಲ್ಲಿ ಅಡಕವಾಗಿದೆ ಎಂದು ಆಕ್ಷೇಪಿಸುವ ದಲಿತ ನಾಯಕರು, ಮತಾಂತರವು ಮೂಲಭೂತ ಹಕ್ಕು. ಸರಕಾರಗಳ ಕಾನೂನುಗಳು ಈ ಮೂಲಭೂತ ಹಕ್ಕನ್ನೇ ಪ್ರಶ್ನಿಸುವಂತಿವೆ ಎನ್ನುತ್ತಾರೆ.

ಸಾಮೂಹಿಕ ಮತಾಂತರದ ವಿರುದ್ಧದ ಕಾನೂನುಗಳು ಬಿಜೆಪಿ ಮತ್ತು ಅದರ ಮಾತೃ ಸಂಸ್ಥೆಯಾದ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ನಿರ್ಮಾಣದ ಉದ್ದೇಶಕ್ಕೆ ಅನುಗುಣವಾಗಿವೆ ಎಂದೂ ದಲಿತ ನಾಯಕರು ಆರೋಪಿಸು ತ್ತಾರೆ. ತನ್ನ ಈ ಯತ್ನದಲ್ಲಿ ದಲಿತರು, ಮುಸ್ಲಿಮರು ಮತ್ತು ಸಿಖ್ಖರಂತಹ ಸಮಾಜದ ಇತರ ವರ್ಗಗಳು ಅಡ್ಡಿಯಾಗಿವೆ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಭಾವಿಸುತ್ತಿವೆ. ಸಾಮೂಹಿಕ ಮತಾಂತರಗಳಿಂದ ಅವು ಭಯ ಗೊಂಡಿವೆ ಎಂಬ ಅಭಿಪ್ರಾಯವನ್ನು ದಲಿತ ನಾಯಕರು ವ್ಯಕ್ತಪಡಿಸು ತ್ತಾರೆ. ದಲಿತ ಸಮುದಾಯವು ಮಾತ್ರ ಇಂತಹ ಕಾನೂನಿನಿಂದ ಎದೆ ಗುಂದುವುದಿಲ್ಲ ತನ್ನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಪಡೆಯಲು ಹೋರಾಟ ಮುಂದುವರಿಸುತ್ತದೆ ಎಂಬುದು ದಲಿತ ನಾಯಕರ ದೃಢ ನಿಲುವು.

ಆಧಾರ: scroll.in

Similar News