ಸದನದಲ್ಲಿ ಯಾರದೇ ಧರ್ಮ, ಜಾತಿ ಉಲ್ಲೇಖಿಸಿದರೆ ಕ್ರಮ : ಸದಸ್ಯರಿಗೆ ಲೋಕಸಭಾ ಸ್ಪೀಕರ್ ಎಚ್ಚರಿಕೆ

Update: 2022-12-12 16:01 GMT

ಹೊಸದಿಲ್ಲಿ,ಡಿ.12: ಸದನದಲ್ಲಿ ಯಾರದೇ ಧರ್ಮ ಅಥವಾ ಜಾತಿಯನ್ನು ಉಲ್ಲೇಖಿಸದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla)ಅವರು ಸೋಮವಾರ ಸದಸ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ತಾನು ನಿರ್ದಿಷ್ಟ ಸಮುದಾಯವೊಂದಕ್ಕೆ ಸೇರಿರುವುದರಿಂದ ಹಿಂದಿಯಲ್ಲಿ ತನ್ನ ಪ್ರಾವೀಣ್ಯತೆಯ ಬಗ್ಗೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದರೋರ್ವರು ಆರೋಪಿಸಿದ ಬಳಿಕ ಸ್ಪೀಕರ್‌ರ ಈ ಎಚ್ಚರಿಕೆ ಹೊರಬಿದ್ದಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎ.ರೇವಂತ್ ರೆಡ್ಡಿ(A. Revanth Reddy)ಯವರು ತನ್ನ ಸ್ವಂತ ಸಾಮಾಜಿಕ ವರ್ಗವನ್ನು ಪ್ರಸ್ತಾಪಿಸಲು ಬಳಸಿದ ಪದಕ್ಕೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ ಸ್ಪೀಕರ್,ಜನರು ಲೋಕಸಭಾ ಸದಸ್ಯರನ್ನು ಅವರ ಜಾತಿ ಮತ್ತು ಧರ್ಮದ ಆಧಾರದಲ್ಲಿ ಆಯ್ಕೆ ಮಾಡಿಲ್ಲ ಎಂದು ಬೆಟ್ಟು ಮಾಡಿದರು.

ಇಲ್ಲಿರುವ ಯಾರೇ ಆದರೂ ಎಂದಿಗೂ ಇಂತಹ ಪದಗಳನ್ನು ಬಳಸಬಾರದು. ಅಂತಹ ಸದಸ್ಯರ ವಿರುದ್ಧ ತಾನು ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು. ತಾನು ಪ್ರಶ್ನೆ ಕೇಳುತ್ತಿರುವಾಗ ಮಧ್ಯ ಪ್ರವೇಶಿಸದಂತೆ ಸ್ಪೀಕರ್‌ಗೆ ಸೂಚಿಸಿದ್ದಕ್ಕಾಗಿ ರೆಡ್ಡಿ ವಿರುದ್ಧವೂ ಬಿರ್ಲಾ ಗಂಭೀರ ಆಕ್ಷೇಪವನ್ನು ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಸ್ಪೀಕರ್ ಕುರಿತು ಎಂದಿಗೂ ಇಂತಹ ಟೀಕೆಗಳನ್ನು ಮಾಡದಂತೆ ತನ್ನ ಪಕ್ಷದ ಸದಸ್ಯರಲ್ಲಿ ಅರಿವು ಮೂಡಿಸುವಂತೆ ಬಿರ್ಲಾ ಸದನದಲ್ಲಿ ಕಾಂಗ್ರೆಸ್ ನಾಯಕ ಆಧಿರ್ ರಂಜನ ಚೌಧುರಿ (Adhir Ranjan Chowdhury)ಅವರಿಗೆ ಸೂಚಿಸಿದರು.

ರೆಡ್ಡಿ ಡಾಲರ್‌ನೆದುರು ರೂಪಾಯಿ ಅಪಮೌಲ್ಯ ಕುರಿತು ಪ್ರಶ್ನೆ ಕೇಳಲು ಆರಂಭಿಸಿದಾಗ ವಿವಾದವು ತಲೆದೋರಿತ್ತು. ರೂಪಾಯಿ ಐಸಿಯುನಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಹೇಳಿಕೆಯನ್ನು ಅವರು ಪ್ರಸ್ತಾಪಿಸಿದ್ದರು.

ಇದಕ್ಕೆ ಆಕ್ಷೇಪಿಸಿದ ಸ್ಪೀಕರ್,ಪ್ರಶ್ನೆಯನ್ನು ಕೇಳುವುದಕ್ಕಷ್ಟೇ ಸೀಮಿತವಾಗಿರಿ ಎಂದು ಹೇಳಿದಾಗ,‘ನೀವು ಅಡ್ಡಿ ಮಾಡುವಂತಿಲ್ಲ’ ಎಂದು ರೆಡ್ಡಿ ಉತ್ತರಿಸಿದ್ದರು.

 ರೆಡ್ಡಿಯವರ ಪ್ರಶ್ನೆಗೆ ಉತ್ತರಿಸುತ್ತ ಸೀತಾರಾಮನ್,ಕಾಂಗ್ರೆಸ್ ಸದಸ್ಯರು ‘ದುರ್ಬಲ ಹಿಂದಿ’ಯಲ್ಲಿ ಪ್ರಶ್ನೆಯನ್ನು ಕೇಳಿರುವುದರಿಂದ ತಾನೂ ‘ದುರ್ಬಲ ಹಿಂದಿ’ಯಲ್ಲಿಯೇ ಉತ್ತರಿಸುವುದಾಗಿ ಹೇಳಿದ್ದರು.

ಕಾಂಗ್ರೆಸ್ ಸದಸ್ಯರು ಡಾಲರ್‌ನೆದುರು ರೂಪಾಯಿ ಮೌಲ್ಯದ ಕುರಿತು ಮೋದಿಯವರ ಹಿಂದಿನ ಹೇಳಿಕೆಯನ್ನು ಪ್ರಸ್ತಾಪಿಸುವಾಗ ಆ ಸಮಯದಲ್ಲಿಯ ಆರ್ಥಿಕ ಸೂಚಕಗಳನ್ನೂ ಪ್ರಸಾಪಿಸಬೇಕಿತ್ತು. ಆರ್ಥಿಕತೆಯು ಖಂಡಿತವಾಗಿಯೂ ಐಸಿಯುನಲ್ಲಿತ್ತು ಮತ್ತು ಭಾರತವನ್ನು ದುರ್ಬಲ ಐದು ರಾಷ್ಟ್ರಗಳಲ್ಲಿ ಸೇರಿಸಲಾಗಿತ್ತು ಎಂದು ಸೀತಾರಾಮನ್ ಹೇಳಿದರು.

Similar News