×
Ad

ಮಂಗಳೂರು ವಿವಿ ಅಥ್ಲೆಟಿಕ್ ಚಾಂಪಿಯನ್‌ಶಿಪ್: ಮೂಡಬಿದಿರೆ ಆಳ್ವಾಸ್ ತಂಡಕ್ಕೆ ಚಾಂಪಿಯನ್ ಪ್ರಶಸ್ತಿ

Update: 2022-12-13 20:53 IST

ಉಡುಪಿ ಡಿ.13: ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿ ಜಿಲ್ಲಾ ಪಂಚಾಯತ್, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡು ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ಮಂಗಳೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ  ಮೂಡಬಿದಿರೆ ಆಳ್ವಾಸ್ ಕಾಲೇಜು ಟೀಂ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದೆ.

ಪುರುಷರ ವಿಭಾಗದಲ್ಲಿ ಆಳ್ವಾಸ್ 225 ಅಂಕಗಳೊಂದಿಗೆ ಪ್ರಥಮ ಸ್ಥಾನಿ ಯಾದರೆ, 72 ಅಂಕಗಳೊಂದಿಗೆ ಎಸ್‌ಡಿಎಂ ಉಜಿರೆ ದ್ವಿತೀಯ ಸ್ಥಾನ ಪಡೆದು ಕೊಂಡಿತು. 35 ಅಂಕದೊಂದಿಗೆ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಮತ್ತು 23 ಅಂಕದೊಂದಿಗೆ ಪುತ್ತೂರು ಸೈಂಟ್ ಫಿಲೋ ಮಿನಾ ನಾಲ್ಕನೆ ಸ್ಥಾನವನ್ನು ತನ್ನದಾಗಿಸಿಕೊಂಡಿತು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ 242 ಅಂಕದೊಂದಿಗೆ ಪ್ರಥಮ ಪ್ರಶಸ್ತಿ ಪಡೆದರೆ, 49 ಅಂಕದೊಂದಿಗೆ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ದ್ವಿತೀಯ, 36 ಅಂಕದೊಂದಿಗೆ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ತೃತೀಯ ಮತ್ತು 29 ಅಂಕದೊಂದಿಗೆ ಎಸ್‌ಡಿಎಂ ಉಜಿರೆ ನಾಲ್ಕನೆ ಸ್ಥಾನವನ್ನು ಗಳಿಸಿತು.

ಪುರುಷ ವಿಭಾಗದಲ್ಲಿ ಆಳ್ವಾಸ್‌ನ ಸಚಿನ್ ಯಾದವೆ ಹಾಗೂ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ಸ್ನೇಹಾ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದು ಕೊಂಡರು.  

ಸಮಾರೋಪ ಸಮಾರಂಭ: ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಜೆೆರಾಲ್ಡ್ ಸಂತೋಷ್ ಡಿಸೋಜ ಅಧ್ಯಕ್ಷತೆಯಲ್ಲಿ ಇಂದು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಫಲ್ಯ ಟ್ರಸ್ಟ್ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯರಾದ ದಯಾ ನಂದ ಶೆಟ್ಟಿ, ವಿಜಯ ಕುಮಾರ್ ಕೊಡವೂರು, ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕೆಂಪರಾಜ್, ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲ ಸುರೇಶ್ ರೈ ಕೆ. ಉಪಸ್ಥಿತರಿದ್ದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.  

ಒಟ್ಟು 9 ಕೂಟ ದಾಖಲೆಗಳು!

ಎರಡು ದಿನಗಳ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು ಒಂಭತ್ತು ಕೂಟ ದಾಖಲೆಗಳು ನಿರ್ಮಾಣಗೊಂಡವು. ಈ ಎಲ್ಲ ಹೊಸ ದಾಖಲೆಗಳನ್ನು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳೇ ನಿರ್ಮಿಸಿದ್ದಾರೆ.

400ಮೀಟರ್ ಓಟದಲ್ಲಿ ಮಹಂತೇಶ್(47.2ಸೆಕೆಂಡ್), 10000 ಮೀಟರ್ ಓಟದಲ್ಲಿ ಹರೀಶ್(29:54:8), ಶಾಟ್‌ಪುಟ್‌ನಲ್ಲಿ ಯೋಗೀತಾ (14.20ಮೀಟರ್), 1500ಮೀಟರ್ ಓಟದಲ್ಲಿ ವಿಶೇಸ್ ಮೆಹೆಲ(3:51:7), ಸ್ಟೀಪ್ಲ್ ಚೇಸ್‌ನಲ್ಲಿ ಸೌರಭ್(9:04:7), 100ಮೀಟರ್ ಓಟದಲ್ಲಿ ಸ್ನೇಹಾ (11.6ಸೆಕೆಂಡ್), 1500 ಮೀಟರ್ ಓಟದಲ್ಲಿ ದಿಶಾ ಬೊಸ್ರೆ(4:32:9), 5000 ಮೀಟರ್ ಓಟದಲ್ಲಿ ಬಸಂತಿ ಕುಮಾರಿ(17:08:8), ಹ್ಯಾಮರ್ ಥ್ರೋನಲ್ಲಿ ನಿತಿನ್ ಮಲ್ಲಿಕ್(66.63ಮೀಟರ್) ಹೊಸ ದಾಖಲೆ ಬರೆದಿದ್ದಾರೆ. 

Similar News