×
Ad

"ಶಾಸಕ ಹರೀಶ್ ಪೂಂಜ ದೇವಸ್ಥಾನಗಳ ಕಾರ್ಯಕ್ರಮದಲ್ಲಿ ರಾಜಕೀಯ ತರುವುದು ಸರಿಯಲ್ಲ"

ಹಿಂದೂ ಧಾರ್ಮಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಯರಾಮ್ ಶೆಟ್ಟಿ ಆರೋಪ

Update: 2022-12-14 19:33 IST

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರು ದೇವಸ್ಥಾನಗಳ ಕಾರ್ಯಕ್ರಮಗಳಲ್ಲಿ ರಾಜಕೀಯವನ್ನು ತರುತ್ತಿದ್ದು, ತಮಗೆ ಆಗದವರ ಹೆಸರುಗಳನ್ನು ಆಮಂತ್ರಣ ಪತ್ರಿಕೆಯಿಂದ ತೆಗೆಸುವ ಅವರು, ದೇವಸ್ಥಾನಗಳಿಗೆ ನೀಡುವ ದೇಣಿಗೆಗಳನ್ನು ತೆಗೆದುಕೊಳ್ಳದಂತೆ ರಾಜಕೀಯ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹಿಂದೂ ಧಾರ್ಮಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಯರಾಮ್ ಶೆಟ್ಟಿ ಹೇಳಿದರು.

ಬೆಳ್ತಂಗಡಿಯಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರಗಳನ್ನು ತಿಳಿಸಿದರು. ದೇಲಂಪುರಿ ಮಹಾದೇವ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದ ವೇಳೆ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಬಳಿ ದೇವಸ್ಥಾನದವರು ಸಹಾಯ ಕೇಳಲು ಹೋದಾಗ ಅವರು ದೇವಸ್ಥಾನದ ಆವರಣಕ್ಕೆ ಇಂಟರ್ ಲಾಕ್ ಅಳವಡಿಸುವ ಭರವಣೆ ನೀಡಿದ್ದರು. ಆದರೆ  ಶಾಸಕ ಹರೀಶ್ ಪೂಂಜರವರಿಗೆ ಈ ವಿಷಯ ತಿಳಿದು ರಕ್ಷಿತ್ ಶಿವಾರಂ ಅವರ ಸಹಾಯ ತೆಗೆದುಕೊಳ್ಳುವುದು ಬೇಡ  ಎಂದು ಒತ್ತಡ ಹಾಕಿರುವುದಲ್ಲದೆ  ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಹಾಕೋದು ಬೇಡ ಎಂದು ಅವರ ಹೆಸರನ್ನು ತೆಗೆಸುವ ಕಾರ್ಯ ಮಾಡಿದ್ದಾರೆ. ಧಾರ್ಮಿಕ ಕ್ಷೇತ್ರಗಳಲ್ಲಿ ಈ ರೀತಿಯಾಗಿ ರಾಜಕೀಯ ಮಾಡುವುದು ಸರಿಯಲ್ಲ ಹಿಂದೆ ಎಂದೂ ಯಾವುದೇ ಶಾಸಕರು ಇಂತಹ ರಾಜಕೀಯ ಮಾಡಿರಲಿಲ್ಲ ಇದು ನ್ಯಾಯವಲ್ಲ ಕೆಟ್ಟ ಪರಂಪರೆಯೊಂದನ್ನು ಬೆಳೆಸುವ ಕಾರ್ಯವಾಗಿದೆ. ಇದು ಇಲ್ಲಿಗೆ ನಿಲ್ಲಬೇಕು ಎಂದರು.

ಶಾಸಕರ ಈ ವರ್ತನೆ ನಮಗೆ ತುಂಬಾ ಬೇಸರವನ್ನು  ತಂದಿದೆ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ನಮ್ಮ ಗಮನಕ್ಕೂ ಬಂದಿದೆ ಈ ಹಿನ್ನೆಲೆಯಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯನ್ನು ರಚಿಸಿ ಹೇಳಿಕೆ ನೀಡುತ್ತಿದ್ದೇವೆ ಇಂತಹ ವಿಚಾರಗಳು ಜನರಿಗೂ ತಿಳಿಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂದರು.

ಇದೇ ವೇಳೆ ಮಾತನಾಡಿದ ಹಿಂದೂ ಧಾರ್ಮಿಕ ಹಿತರಕ್ಷಣೆ ವೇದಿಕೆಯ ಕೋಶಾಧಿಕಾರಿ ರಮೇಶ್ ಪೂಜಾರಿಯವರು ವೇಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಬ್ರಹ್ಮಕಲಶೋತ್ಸವ ನಡೆಯಲಿಕ್ಕಿದೆ. ಅಲ್ಲಿಯೂ ಪೂರ್ವಭಾವಿ ಸಭೆ ನಡೆದಿದ್ದು, ಎಲ್ಲಾ ಬಿಜೆಪಿ ಕಾರ್ಯಕರ್ತರನ್ನೇ ಕರೆ ತಂದು ಬಿಜೆಪಿಯ ಬೂತ್ ಕಮಿಟಿ ಮಾಡಿದ ಹಾಗೆ  ಬ್ರಹ್ಮ ಕಲಶೋತ್ಸವ ಸಮಿತಿ ರಚನೆ ಮಾಡಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ಇಂತಹ ಸಣ್ಣತನದ ರಾಜಕೀಯ ಮಾಡಬಾರದು  ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಧಾರ್ಮಿಕ ಹಿತರಕ್ಷಣಾ ವೇದಿಕೆಯ ಕಾರ್ಯದರ್ಶಿ ಪ್ರಭಾಕರ ಹೆಗ್ಡೆ ಹಟ್ಟಾಜೆ, ಉಪಾಧ್ಯಕ್ಷ ದೇಜಪ್ಪ ಶೆಟ್ಟಿ, ಸತೀಶ್ ಹೆಗ್ಡೆ, ಸತೀಶ್ ಬಜಿರೆ, ಅರವಿಂದ್ ಶೆಟ್ಟಿ ಉಪಸ್ಥಿತರಿದ್ದರು.

Similar News