‘ಉಪ ಸಮಿತಿ ನೆಪ ಮಾತ್ರ'; 5ನೇ ದಿನಕ್ಕೆ ಕಾಲಿಟ್ಟ ಒಳಮೀಸಲಾತಿ ಹೋರಾಟ
ಬೆಂಗಳೂರು, ಡಿ. 14: ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಹೋರಾಟ ಜಾರಿ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ಇಂದಿಗೆ(ಗುರುವಾರ) ಐದನೆ ದಿನಕ್ಕೆ ಕಾಲಿಟ್ಟಿದ್ದು, ರಾಜ್ಯ ಸರಕಾರ ನೆಪಕ್ಕೆ ಮಾತ್ರ ಸಚಿವ ಉಪ ಸಮಿತಿ ಮಾಡಿದೆ ಎಂದು ಆಕ್ರೋಶ ಹೊರಹಾಕಿದರು.
ಬುಧವಾರವೂ ಫ್ರೀಡಂ ಪಾರ್ಕಿನಲ್ಲಿ ಜಮಾಯಿಸಿದ ಹೋರಾಟಗಾರರು, ಒಳ ಮೀಸಲಾತಿ ಜಾರಿ ಆಗುವ ತನಕ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಣೆಗಳನ್ನು ಕೂಗಿದರು. ನ್ಯಾ.ಸದಾಶಿವ ಆಯೋಗದ ವರದಿಯ ಗಂಟನ್ನು ಬಿಚ್ಚಿ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲೇಬೇಕು. ಇಲ್ಲದಿದ್ದರೆ 2018ರಲ್ಲಿ ಕಾಂಗ್ರೆಸ್‍ಗೆ ಆದ ಗತಿಯೇ 2023ರಲ್ಲಿ ಬಿಜೆಪಿಗೂ ಆಗಲಿದೆ ಎಂದು ಹೋರಾಟಗಾರರು ಎಚ್ಚರಿಸಿದರು.
ಇನ್ನೂ, ಒಳ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ, ಈ ಬಗ್ಗೆ ಪರಿಶೀಲಿಸಿ ಶಿಫಾರಸು ಮಾಡಲು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಿದೆ. ಆದರೆ, ಒತ್ತಡಕ್ಕೆ ಮಣಿದು ಈ ಕ್ರಮ ಕೈಗೊಂಡಿದೆ ಎಂದೇ ಹೇಳಬಹುದು ಎಂದು ಮುಖಂಡರು ತಿಳಿಸಿದರು.
ಅದೇ ರೀತಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಪರಭಾರೆ ನಿಷೇಧ(ಪಿಟಿಸಿಎಲ್) ಕಾಯ್ದೆಗೆ ತಿದ್ದುಪಡಿ ತಂದು ದಲಿತರ ಭೂಮಿ ರಕ್ಷಣೆ ಮಾಡಬೇಕು. ಸಫಾಯಿ ಕರ್ಮಚಾರಿಗಳನ್ನು ಮುಖ್ಯವಾಹಿನಿಗೆ ತರಲು ಐಪಿಡಿ ಸಾಲಪ್ಪ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದೂ ಒಕ್ಕೂಟದ ಮುಖಂಡರು ಒತ್ತಾಯಿಸಿದರು.