×
Ad

ಭಾರತದ ‘ಜಿ20 ಆರ್ಥಿಕ ಪ್ರಗತಿ’ಯ ಆದ್ಯತೆಗೆ ವ್ಯಾಪಕ ಬೆಂಬಲ: ಅಜಯ್ ಸೇಠ್

Update: 2022-12-14 23:51 IST

ಬೆಂಗಳೂರು, ಡಿ. 14: ಜನಸಾಮಾನ್ಯರು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಂಬಂಧಪಡುವಂತಹ ವಿಷಯಗಳು, ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು, ಭಾರತವು ಜಿ20 ರಾಷ್ಟ್ರಗಳ ಎದುರು ತಾನು ಸಿದ್ಧಪಡಿಸಿರುವ ಆದ್ಯತೆಗಳನ್ನು ಮುಂದಿಟ್ಟಿದ್ದು, ಜಿ20 ರಾಷ್ಟ್ರಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ ಎಂದು ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ತಿಳಿಸಿದರು.

ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿನ ಖಾಸಗಿ ರೆಸಾರ್ಟ್‍ನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಜಿ20 ಆರ್ಥಿಕ ಹಾಗೂ ಕೇಂದ್ರೀಯ ಬ್ಯಾಂಕ್‍ಗಳ ಪ್ರತಿನಿಧಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಸಭೆಯಲ್ಲಿ ಜಿ20 ರಾಷ್ಟ್ರಗಳ 184 ಪ್ರತಿನಿಧಿಗಳು, 13 ಆಹ್ವಾನಿತ ರಾಷ್ಟ್ರಗಳು, 17 ಅಂತರ್‍ರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕಳೆದ ಎರಡು ದಿನಗಳಿಂದ ಏಳು ಚರ್ಚಾಗೋಷ್ಠಿಗಳು ಹಾಗೂ ಎರಡು ವಿಚಾರ ಸಂಕಿರಣಗಳನ್ನು ನಡೆಸಲಾಗಿದೆ. ಪ್ರಧಾನಮಂತ್ರಿ ಹಾಗೂ ಭಾರತದ ಜಿ20 ಅಧ್ಯಕ್ಷತೆಯ ಘೋಷ ವಾಕ್ಯವಾದ ‘ವಸುದೈವ ಕುಟುಂಬಕ್ಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ದ ದೃಷ್ಟಿಕೋನದಂತೆ ಚರ್ಚೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

2023ನೆ ಸಾಲಿನಲ್ಲಿ ನ.30ರವರೆಗೆ ಯಾವ ಯಾವ ವಿಷಯಗಳ ಮೇಲೆ ಚರ್ಚೆ ನಡೆಯಬೇಕು. ದೇಶಿಯ ಹಾಗೂ ಅಂತರ್‍ರಾಷ್ಟ್ರೀಯ ಸಂಸ್ಥೆಗಳು ಒಳಗೊಂಡಂತೆ ಯಾರು ಯಾರು ಏನೆಲ್ಲ ಕೆಲಸಗಳನ್ನು ಮಾಡಬೇಕು ಎಂಬುದರ ಬಗ್ಗೆಯೂ ಚರ್ಚಿಸಿ, ತೀರ್ಮಾನ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ಆರಂಭವಾಗಿದ್ದು, ಅದರ ಪರಿಣಾಮಗಳು ಮುಂಬರುವ ತಿಂಗಳುಗಳಲ್ಲಿ ಕಂಡು ಬರಲಿವೆ ಎಂದು ಅಜಯ್‍ಸೇಥ್ ತಿಳಿಸಿದರು.

ಇಡೀ ವಿಶ್ವದಲ್ಲಿ ಕಾಡುತ್ತಿರುವ ಬೆಲೆ ಏರಿಕೆ, ವಿವಿಧ ದೇಶಗಳಲ್ಲಿನ ನೀತಿಗಳು, ಜಾಗತಿಕ ಆರ್ಥಿಕತೆ ಹಾಗೂ ಸಮಸ್ಯೆಗಳು, ಮಲ್ಟಿಲ್ಯಾಟರಲ್ ಅಭಿವೃದ್ಧಿ ಬ್ಯಾಂಕುಗಳ ಸಶಕ್ತಿಕರಣ, ಹಣದುಬ್ಬರ, ಆಹಾರ ಮತ್ತು ಇಂಧನ ಅಭದ್ರತೆ, ಹವಾಮಾನದಲ್ಲಿನ ಬದಲಾವಣೆಯಿಂದ ಆಗುತ್ತಿರುವ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಣದ ಬಗ್ಗೆಯೂ ಚರ್ಚೆ ನಡೆಸಲಾಗಿದೆ. 21ನೆ ಶತಮಾನದಲ್ಲಿ ಅಂತರ್‍ರಾಷ್ಟ್ರೀಯ ಸಂಸ್ಥೆಗಳನ್ನು ಯಾವ ರೀತಿ ಸಿದ್ಧಗೊಳಿಸಬೇಕು. ಪ್ರಗತಿಯ ಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಬಗ್ಗೆಯೂ ಚರ್ಚೆಯಾಗಿದೆ ಎಂದು ಅವರು ಹೇಳಿದರು.

ನಮ್ಮ ದೇಶದಲ್ಲಿ ನಗರಾಭಿವೃದ್ಧಿ ಆಗುತ್ತಿದೆ. ಶೇ.75ರಷ್ಟು ನಗರ ಮೂಲಸೌಕರ್ಯ ಅಭಿವೃದ್ಧಿಯಾಗಬೇಕಿದೆ. ಬಹುತೇಕ ಎಲ್ಲ ದೇಶಗಳಲ್ಲಿಯೂ ನಗರ ಮೂಲಸೌಕರ್ಯ ದೊಡ್ಡ ಸವಾಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ‘ನಾಳೆಯ ಆರ್ಥಿಕ ನಗರಗಳು’ ಎಂಬ ವಿಷಯದ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅಜಯ್ ಸೇಥ್ ತಿಳಿಸಿದರು.

ಅಂತರ್‍ರಾಷ್ಟ್ರೀಯ ತೆರಿಗೆಯ ವಿಚಾರದ ಕುರಿತು ಚರ್ಚೆ ನಡೆಸಲಾಗಿದೆ. ಅದರಲ್ಲಿ ಪಾರದರ್ಶಕತೆ ಜೊತೆಗೆ ಸಾಮಥ್ರ್ಯವೃದ್ಧಿಗೂ ಅವಕಾಶ ಇರಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದ್ದು, ಮುಂದಿನ ತಿಂಗಳು ಈ ಸಂಬಂಧ ಒಡಂಬಡಿಕೆಗೆ ಸಹಿ ಹಾಕುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಕೋವಿಡ್ ನಂತಹ ಸಾಂಕ್ರಮಿಕಗಳು ಬರದಂತೆ ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಹಕಾರದೊಂದಿಗೆ ಆರ್ಥಿಕ ಹಾಗೂ ಆರೋಗ್ಯ ಸಚಿವಾಲಯಗಳ ನಡುವೆ ಸಮನ್ವಯ ಸಾಧಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಜಿ20 ರಾಷ್ಟ್ರಗಳ ಭಾರತದ ಅಧ್ಯಕ್ಷತೆಯ ಅವಧಿಯ ಇಡೀ ವರ್ಷದ ಕಾರ್ಯಸೂಚಿಯನ್ನು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಫೆಬ್ರವರಿ 23-25ರವರೆಗೆ ಜಿ20 ರಾಷ್ಟ್ರಗಳ ವಿತ್ತ ಸಚಿವರು ಹಾಗೂ ಸೆಂಟ್ರಲ್ ಬ್ಯಾಂಕ್‍ಗಳ ಗವರ್ನರ್‍ಗಳ ಸಭೆ ನಡೆಯಲಿದ್ದು, ಅಲ್ಲಿಯೂ ಬಹುತೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ.ಅನಂತ ನಾಗೇಶ್ವರನ್, ಪಿಐಬಿ ಎಡಿಜಿ ಎಸ್.ಜಿ.ರವೀಂದ್ರ ಉಪಸ್ಥಿತರಿದ್ದರು.

ಕ್ರಿಫ್ಟೋ ಕರೆನ್ಸಿಗೆ ನಿಯಮಾವಳಿ ಅಳವಡಿಕೆ: ಕ್ರಿಫ್ಟೋ ಕರೆನ್ಸಿಯನ್ನು ನಿಷೇಧಿಸುವುದು ಕಷ್ಟಕರ. ಜಾಗತಿಕ ಮಟ್ಟದಲ್ಲಿ ಇದರ ಬಳಕೆಯಾಗುತ್ತಿದೆ. ಈ ಕರೆನ್ಸಿಯ ಬಳಕೆಗೆ ಅಗತ್ಯ ನಿಯಮಗಳನ್ನು ರೂಪಿಸಿ, ಡಿಜಿಟಲ್ ಪಾವತಿಗೆ ಪ್ರೋತ್ಸಾಹ ನೀಡಬಹುದು. ಆದರೆ, ಈ ನಿಟ್ಟಿನಲ್ಲಿ ಪಾರದರ್ಶಕತೆ ಅಗತ್ಯ ಎಂದು ಅಜಯ್ ಸೇಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Similar News