ವೋಟರ್ ಐಡಿ ಹಗರಣ ಮರೆಮಾಚಲು "ಕುಕ್ಕರ್ ಸ್ಫೋಟ ನಾಟಕ": ಡಿಕೆಶಿ ಆರೋಪ
''ತನಿಖೆಗೂ ಮುನ್ನವೇ ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು?''
ಬೆಂಗಳೂರು, ಡಿ.15:ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕವಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ ಹಗರಣವನ್ನು ಮರೆಮಾಚುವ ಸಲುವಾಗಿ ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ನಾಟಕ ಹುಟ್ಟು ಹಾಕಲಾಯಿತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಗುರುವಾರ ಬೆಂಗಳೂರು ಪ್ರೆಸ್‍ಕ್ಲಬ್ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಹಗರಣ ಬೆಳಕಿಗೆ ಬಂದ ಕೆಲವೇ ದಿನಗಳಲ್ಲಿ ದಿಢೀರ್ ಸ್ಫೋಟ ನಡೆಯಿತು. ಆನಂತರ ನಾಟಕೀಯ ಬೆಳವಣಿಗೆಯಂತೆ ಖುದ್ದು ರಾಜ್ಯ ಪೊಲೀಸ್ ಮಹಾನಿರ್ದೇಶಕರೇ ಹೋಗಿ ಪರಿಶೀಲನೆ ನಡೆಸಿದರು. ಆದರೆ, ಆ ಪ್ರಕರಣ ಯಾವ ಹಂತ ತಲುಪಿದೆ ಎಂದು ಪ್ರಶ್ನಿಸಿದರು.
ಮತ್ತೊಂದೆಡೆ ಪ್ರಕರಣದ ತನಿಖೆಗೂ ಮುನ್ನವೇ ಅಧಿಕಾರಿಗಳು ಇದನ್ನು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು. ಇದರ ಹಿಂದೆ ಯಾವ ಉಗ್ರ, ಯಾವ ಸಂಘಟನೆ ಇದೆ? ಯಾರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂಬುವುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಅದು ಅಲ್ಲದೆ, ಮತ ಮಾಹಿತಿ ಕಳವು ಪ್ರಕರಣವನ್ನು ಮುಚ್ಚಿಹಾಕಲು ಈ ಷಡ್ಯಂತ್ರ ರೂಪಿಸಿದ್ದಾರೆ. ಮತದಾರನ ಹಕ್ಕು ಕಳವು ಇಡೀ ದೇಶದಲ್ಲಿ ಆಗಿರಲಿಲ್ಲ. ಈಗ ಇದನ್ನು ಮಾಡಿ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ ಎಂದು ಸರಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.