ಬೆಂಗಳೂರು | ಮಹಿಳೆಗೆ ಚುಚ್ಚುಮದ್ದು: ನಕಲಿ ವೈದ್ಯ, ಔಷಧಿ ಅಂಗಡಿ ಮಾಲಕ ಸೆರೆ
ಬೆಂಗಳೂರು, ಡಿ.15: ಮಹಿಳೆಗೆ ಚುಚ್ಚುಮದ್ದು ಕೊಟ್ಟು ಅವಾಂತರಕ್ಕೆ ಕಾರಣನಾದ ನಕಲಿ ವೈದ್ಯ, ಔಷಾಧಿ ಅಂಗಡಿ ಮಾಲಕನನ್ನು ಇಲ್ಲಿನ ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾದೇಶ್ವರ ನಗರದ ನಿವಾಸಿ ನಕಲಿ ವೈದ್ಯ ಡಾ.ನಾಗರಾಜ ಸವಣೂರ (55), ಕ್ಲಿನಿಕ್ ಮಾಲಕ ಕುಮಾರಸ್ವಾಮಿ (35) ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.
ಹೆಗ್ಗನಹಳ್ಳಿ ಕ್ರಾಸ್ ನಿವಾಸಿ ಜ್ಯೋತಿ ಎಂಬುವರು ಸೆ.25ರಂದು ಹೆಗ್ಗನಹಳ್ಳಿಯ ಸಂಜೀವಿನಿ ನಗರದಲ್ಲಿರುವ ಸಹನಾ ಪಾಲಿಕ್ಲಿನಿಕ್‍ಗೆ ಚಿಕಿತ್ಸೆ ಪಡೆಯಲು ಹೋಗಿದ್ದರು. ಆ ವೇಳೆ, ವೈದ್ಯ ಎಂದು ಹೇಳಿಕೊಂಡಿದ್ದ ನಾಗರಾಜ್ ಮಹಿಳೆಯನ್ನು ಪರೀಕ್ಷಿಸಿ ಸೊಂಟದ ಭಾಗಕ್ಕೆ 2 ಚುಚ್ಚುಮದ್ದು ಅನ್ನು ಒಂದೇ ಬಾರಿ ಕೊಟ್ಟಿದ್ದರು. ಇದಾದ 2 ದಿನಗಳ ಬಳಿಕ ಅತಿಯಾದ ನೋವು ಕಾಣಿಸಿಕೊಂಡಿತ್ತು.
ಆತಂಕಗೊಂಡ ಜ್ಯೋತಿ ಮತ್ತೆ ಇದೇ ಕ್ಲಿನಿಕ್‍ಗೆ ಹೋಗಿ ನಾಗರಾಜ್‍ಗೆ ತೋರಿಸಿದ್ದರು. ಆ ವೇಳೆ ನಾಗರಾಜ್ ಸಮೀಪದ ಮೆಡಿಕಲ್‍ನಿಂದ ಮುಲಾಮು ತಂದುಕೊಟ್ಟು ರಕ್ತ ಹೆಪ್ಪುಗಟ್ಟಿದ ಜಾಗಕ್ಕೆ ಲೇಪಿಸುವಂತೆ ಸೂಚಿಸಿದ್ದರು. ಇದಾದ ನಾಲ್ಕೈದು ದಿನಗಳಲ್ಲಿ ರಕ್ತಹೆಪ್ಪುಗಟ್ಟಿದ ಜಾಗದಲ್ಲಿ ಜ್ಯೋತಿ ಅವರಿಗೆ ರಕ್ತಸ್ರಾವವಾಗಿತ್ತು. ಅ.18ರಂದು ಮತ್ತೊಮ್ಮೆ ನಾಗರಾಜ್ ಅವರನ್ನು ಭೇಟಿ ಮಾಡಿದಾಗ ಅವರು ಬೇರೆ ಕ್ಲಿನಿಕ್‍ನಲ್ಲಿ ತೋರಿಸಿಕೊಳ್ಳುವಂತೆ ಸೂಚಿಸಿದ್ದರು.
ನಂತರ ಮಹಿಳೆಯು ಖಾಸಗಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಗೆ ತೋರಿಸಿದಾಗ ಅವರು ಶಸ್ತ್ರ ಚಿಕಿತ್ಸೆ ಮಾಡುವಂತೆ ಸೂಚಿಸಿದ್ದರು.ಅದರಂತೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ಚುಚ್ಚುಮದ್ದು ನೀಡಿದ್ದ ಜಾಗದ ಕೊಳೆತ ಮಾಂಸವನ್ನು ತೆಗೆದು 8 ಹೊಲಿಗೆ ಹಾಕಿದ್ದರು. ಈ ಸಂಬಂಧ ದಾಖಲಾದ ದೂರಿನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಇಬ್ಬರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.