ಪಡುಬಿದ್ರೆ ಬೀಚ್‌ನಲ್ಲಿ ಹೆಜ್ಜೇನು ದಾಳಿ: ಭೀತಿಯಿಂದ ಸಮದ್ರಕ್ಕೆ ಹಾರಿದ ವ್ಯಕ್ತಿ ಮೃತ್ಯು, ಇಬ್ಬರು ಗಂಭೀರ

Update: 2022-12-15 16:16 GMT

ಪಡುಬಿದ್ರಿ, ಡಿ.15: ಹೆಜ್ಜೇನು ದಾಳಿಗೆ ಬೆದರಿದ ವ್ಯಕ್ತಿಯೊಬ್ಬರು ಸಮುದ್ರಕ್ಕೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಗುರುವಾರ ಮಧ್ಯಾಹ್ನದ ವೇಳೆ ಪಡುಬಿದ್ರೆ ಬೀಚ್‌ನಲ್ಲಿ ನಡೆದಿದೆ.

ಮೃತರನ್ನು ಪಡುಬಿದ್ರಿ ಬೀಚ್ ನಿವಾಸಿ ವಾಸುದೇವ ಡಿ.ಸಾಲ್ಯಾನ್ (65) ಎಂದು ಗುರುತಿಸಲಾಗಿದೆ. ಇದೇ ಸಂದರ್ಭದಲ್ಲಿ ಹೆಜ್ಜೇನು ದಾಳಿಗೆ ಒಳಗಾಗಿದ್ದ ಸ್ಥಳೀಯ ನಿವಾಸಿ ಚಂದ್ರಶೇಖರ್(62) ಹಾಗು ಶಂಕರ್ ಅಮೀನ್ ಎಂಬವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇವರು ಪಡುಬಿದ್ರಿ ಬೀಚ್ ಸಮೀಪ ನಡೆದುಕೊಂಡು ಹೋಗುತಿದ್ದ ವೇಳೆ ಹೆಜ್ಜೇನು ದಾಳಿ ನಡೆಸಿತ್ತೆನ್ನಲಾಗಿದೆ. ಜೇನುಗಳ ದಂಡು ಇವರಿಬ್ಬರ ಮೈಮೇಲೆ ಹಾಗೂ ಮುಖವನ್ನು ಕಚ್ಚಿ ಗಾಯಗೊಳಿಸಿತು. ಇವರಲ್ಲಿ ವಾಸುದೇವ ಸಾಲ್ಯಾನ್ ಹೆಜ್ಜೇನು ದಾಳಿಯಿಂದ ಭಯಭೀತರಾಗಿ ತನ್ನನ್ನು ರಕ್ಷಿಸಿಕೊಳ್ಳಲು ಅಲ್ಲೇ ಸಮೀಪದ ಸಮುದ್ರದ ನೀರಿಗೆ ಹಾರಿದರು.

ಆದರೆ ಇವರು ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ. ವೃತ್ತಿಯಲ್ಲಿ ಮೀನುಗಾರರಾಗಿರುವ ವಾಸುದೇವ ಸಾಲ್ಯಾನ್ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡ ಚಂದ್ರಶೇಖರ್ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಪರಿಸರದಲ್ಲಿ ಬೆಳಗ್ಗೆಯಿಂದ ಹೆಜ್ಜೇನುಗಳು ಸುತ್ತುತ್ತಿದ್ದು, ಇಲ್ಲಿದ್ದ ಹಲವು ಮಂದಿ ಇದರಿಂದ ರಕ್ಷಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದರು. ಅಲ್ಲೇ ಸಮೀಪ  ಆಂಗ್ಲ ಮಾಧ್ಯಮದ ಶಾಲೆ ಇದ್ದು, ಸಂಜೆಯ ವೇಳೆ ಶಾಲೆ ಬಿಟ್ಟು ಬರುವ ಮಕ್ಕಳನ್ನು ಆ ರಸ್ತೆಯಾಗಿ ನಡೆದುಕೊಂಡು ಬಾರದಂತೆ ತಡೆಯಲಾಗಿತ್ತು. ಬಳಿಕ ಮಕ್ಕಳನ್ನು ವಾಹನಗಳಲ್ಲಿ ಮನೆಗೆ ತಲುಪಿಸಲಾಗಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.

ಸಂಜೆಯ ವೇಳೆ ಈ ಬೀಚ್‌ಗೆ ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದು, ಹೆಜ್ಜೇನು ದಾಳಿಯ ಸುದ್ದಿ ತಿಳಿದು ಜನ ಬೀಚ್ ಹತ್ತಿರ ಸುಳಿಯಲು ಹಿಂದೇಟು ಹಾಕಿದ್ದರು. ಇದರಿಂದ ಬೀಚ್‌ನಲ್ಲಿ ಜನ ವಿರಳವಾಗಿರುವುದು ಕಂಡುಬಂತು. ಅಪಾಯಕಾರಿಯಾಗಿರುವ ಹೆಜ್ಜೇನು ಹಿಂಡನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಸಂಬಂಧಪಟ್ಟವರನ್ನ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಪಡುಬಿದ್ರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

Similar News