×
Ad

ಪಂಚರತ್ನ ರಥಯಾತ್ರೆಯಿಂದ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ನಡುಕ: ಕುಮಾರಸ್ವಾಮಿ

Update: 2022-12-15 20:49 IST

ಬೆಂಗಳೂರು, ಡಿ.15: ನನ್ನ ಪಂಚರತ್ನ ರಥಯಾತ್ರೆ ನಂತರ ಕಾಂಗ್ರೆಸ್, ಬಿಜೆಪಿ ಪಕ್ಷಗಳಲ್ಲಿ ನಡುಕ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ನಗರದಲ್ಲಿರುವ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬರುತ್ತಿರುವ ಸಮೀಕ್ಷೆಗಳಲ್ಲಿ ಇವೆರಡೂ ಪಕ್ಷಗಳಿಗಿಂತ ಹೆಚ್ಚು ಸ್ಥಾನಗಳನ್ನು ಜೆಡಿಎಸ್ ಗೆಲ್ಲಲಿದೆ ಎಂದು ಗೊತ್ತಾಗಿದೆ ಎಂದರು.

ಹಾಗೆಯೇ, ನಾಳೆ (ಡಿ.16)ಶ್ರೀನಿವಾಸ ಕಲ್ಯಾಣ ಮುಗಿದ ನಂತರ ದೇವರ ಅನುಗ್ರಹ ಪಡೆದು 97 ರಿಂದ 116 ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ಶಕ್ತಿ 1994ರಿಂದ ವಿಶ್ಲೇಷಣೆ ಮಾಡಿದರೆ ಈ ಚುನಾವಣೆಯಲ್ಲಿ 65 ರಿಂದ 70 ಸ್ಥಾನ ಗಳಿಸಬಹುದು. ಬಿಜೆಪಿ ಕೂಡ 50 ರಿಂದ 60 ಕ್ಷೇತ್ರ ಗೆಲ್ಲಬಹುದು. ಇದರಲ್ಲೂ ಯಾವುದೇ ಅಚ್ಚರಿ ಇಲ್ಲ ಎಂದರು .

15 ರಿಂದ 20 ಜನ ಪಕ್ಷಕ್ಕೆ ಬರುತ್ತಾರೆ ಎಂದು ಪಾಪ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದಾರೆ. ಅವರ ಪಕ್ಷದಿಂದ ಯಾರು ಯಾರು ಹೊರಗೆ ಹೋಗುತ್ತಾರೆ ಎನ್ನುವ ಪಟ್ಟಿ ನನ್ನ ಹತ್ರ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಏನೇ ಮಾಡಿದರೂ ನಮ್ಮ ಭದ್ರಕೋಟೆ ಒಡೆಯಲು ಸಾಧ್ಯವಿಲ್ಲ. ಏನೇ ಕಾರ್ಯತಂತ್ರ, ಜಾತಿವಾರು ಸಭೆ, ಸಮಾವೇಶ ಮಾಡಿದರೂ ಅಸಾಧ್ಯ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಈ ಬಾರಿ ಜನ ದೂರ ಇಡುತ್ತಾರೆ ಎಂದರು.

ಡಿ.ಕೆ.ಶಿವಕುಮಾರ್ ಕಾಂಗ್ರೆಸ್‍ಗೆ 130 ಸ್ಥಾನ ಬರುತ್ತೆ ಅಂತಾರೆ. ಹಾಗಾದರೆ ಯಾಕೆ ಜೆಡಿಎಸ್, ಬಿಜೆಪಿಯಿಂದ ಶಾಸಕರು ಬರುತ್ತಾರೆ ಎನ್ನುತ್ತಿದ್ದಾರೆ. ಅವರ ಬಳಿ ಗೆಲ್ಲುವ ಅಭ್ಯರ್ಥಿಗಳಿಗೆ ಗತಿ ಇಲ್ಲ ಎಂದರ್ಥ ಅಲ್ಲವೇ? ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಅಗತ್ಯಬಿದ್ದರೆ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುತ್ತೇವೆ ಎಂದು ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಪಂಚರತ್ನ ರಥಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಈಗಾಗಲೇ ಯಾತ್ರೆ ಮಾಡಿರುವ 19 ಕ್ಷೇತ್ರದಲ್ಲಿ ನಾವು 17 ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಇನ್ನು ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಜಿ.ಟಿ.ದೇವೇಗೌಡ, ಶಾಸಕರಾದ ಎಂ.ಕೃಷ್ಣಾರೆಡ್ಡಿ, ಲಿಂಗೇಶ್, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೆಗೌಡ, ಜಿ.ಡಿ.ಹರೀಶ್‍ಗೌಡ ಮುಂತಾದವರು ಉಪಸ್ಥಿತರಿದ್ದರು.

Full View

Similar News