ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿಗೆ ಆದ್ಯತೆ: ಮೌಲಾನ ಶಾಫಿ ಸಅದಿ
ಜಿಲ್ಲಾ ವಕ್ಫ್ ಅಧ್ಯಕ್ಷರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ
ಬೆಂಗಳೂರು, ಡಿ.15: ರಾಜ್ಯದಲ್ಲಿ ಸುಮಾರು 40 ಸಾವಿರ ವಕ್ಫ್ ಸಂಸ್ಥೆಗಳಿದ್ದು, ಅವುಗಳ ಅಧೀನದಲ್ಲಿರುವ ಆಸ್ತಿಗಳನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು ಹಾಗೂ ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದರು.
ಗುರುವಾರ ಶೇಷಾದ್ರಿಪುರಂನ ಕೆಎಂಡಿಸಿ ಭವನದ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹಾಗೂ ರಾಜ್ಯ ವಕ್ಫ್ ಮಂಡಳಿ ವತಿಯಿಂದ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರು, ಜಿಲ್ಲಾ ವಕ್ಫ್ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ‘ಆಘಾಝ್’ ಸಂವಾದ ಕಾರ್ಯಕ್ರಮದ ಕುರಿತು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿರುವ ಎಲ್ಲ ಜಿಲ್ಲೆಗಳ ಜಿಲ್ಲಾ ವಕ್ಫ್ ಅಧಿಕಾರಿಗಳು ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಿಗೆ ಅವರಿಗೆ ಜವಾಬ್ದಾರಿಗಳನ್ನು ತಿಳಿಸಿಕೊಡಬೇಕಾದ ಅಗತ್ಯವಿದೆ. ಇವತ್ತು ಇಡೀ ದಿನ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಮ್ಮ ವಕ್ಫ್ ಬೋರ್ಡ್‍ನ ಸದಸ್ಯರೆ ಇವರಿಗೆ ಮಾಹಿತಿಗಳನ್ನು ಒದಗಿಸಿಕೊಡಲಿದ್ದಾರೆ ಎಂದು ಅವರು ಹೇಳಿದರು.
ಹಿರಿಯ ಸದಸ್ಯ ರಿಯಾಝ್ ಖಾನ್, ವಕ್ಫ್ ಬೋರ್ಡ್‍ನ ಪರಿಚಯ, ಅದರ ಕೆಲಸ, ವಕ್ಫ್ ಕಾಯ್ದೆ, ಪ್ರಕರಣಗಳು, ವಕ್ಫ್ ಆಸ್ತಿಗಳ ನೋಂದಣಿ, ಸಮೀಕ್ಷೆ, ಗೆಜೆಟ್‍ನಲ್ಲಿ ಆಸ್ತಿಗಳ ವಿವರ ಅಳವಡಿಕೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮತ್ತೊಬ್ಬ ಸದಸ್ಯ ಆಸಿಫ್ ಅಲಿ ಅವರು, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‍ನಲ್ಲಿರುವ ವಕ್ಫ್ ಪ್ರಕರಣಗಳು, ಅವುಗಳನ್ನು ಗೆಲ್ಲಲು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ ಎಂದು ಅವರು ತಿಳಿಸಿದರು.
ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ರೂಪಿಸಿರುವ ನಿಯಮಾವಳಿಗಳ ಬಗ್ಗೆ ಶಾಸಕ ತನ್ವೀರ್ ಸೇಠ್ ತಿಳಿಸಿಕೊಡಲಿದ್ದಾರೆ. ಕೇಂದ್ರ ಸರಕಾರದಲ್ಲಿರುವ ವಕ್ಫ್ ಸಂಬಂಧಿತ ಯೋಜನೆಗಳ ಬಗ್ಗೆ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ವಿಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಿಕೊಡಲಿದ್ದಾರೆ ಎಂದು ಶಾಫಿ ಸಅದಿ ಹೇಳಿದರು.
ಇಮಾಮ್ ಹಾಗೂ ಮುಅದ್ದೀನ್‍ಗಳಿಗೆ ಸರಕಾರದ ವತಿಯಿಂದ ನೀಡುತ್ತಿರುವ ಗೌರವ ಧನದ ಬಗ್ಗೆ ಮೌಲಾನ ಮೀರ್ ಅಝರ್ ಅಲಿ, ವಕ್ಫ್ ಆಸ್ತಿಗಳ ಅಭಿವೃದ್ಧಿ, ಶಾಲಾ, ಕಾಲೇಜುಗಳ ಅಭಿವೃದ್ಧಿ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ, ಆರೋಗ್ಯ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಸದಸ್ಯ ಜಿ.ಯಾಕೂಬ್ ಮಾಹಿತಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ವಕ್ಫ್ ವುಮೆನ್ಸ್ ಫೌಂಡೇಷನ್ ವತಿಯಿಂದ ಇರುವ ಯೋಜನೆಗಳ ಬಗ್ಗೆ ಶಾಸಕಿ ಕನೀಝ್ ಫಾತಿಮಾ ತಿಳಿಸಿಕೊಡಲಿದ್ದಾರೆ. ಕಂದಾಯ ಇಲಾಖೆಗೆ ಸಂಬಂಧಿಸಿದ ವಿಚಾರಗಳನ್ನು ಸದಸ್ಯೆ ಖಾಝಿ ನಫೀಸಾ ತಿಳಿಸಿಕೊಡಲಿದ್ದಾರೆ. ಜಿಲ್ಲಾ ಮಟ್ಟದಲ್ಲಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾ ಅಧ್ಯಕ್ಷರು ಹಾಗೂ ಅಧಿಕಾರಿಗಳು ತಿಳಿಸಲು ಅವಕಾಶ ಕಲ್ಪಿಸಲಾಗಿದೆ. ಅವರ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರ ಆಪ್ತ ಕಾರ್ಯದರ್ಶಿ ಪಿ.ಎಂ.ಚಿದಂಬರ, ವಕ್ಫ್ ಬೋರ್ಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಖಾನ್ ಪರ್ವೇಝ್ ಸೇರಿದಂತೆ ವಕ್ಫ್ ಬೋರ್ಡ್‍ನ ಸದಸ್ಯರು ಉಪಸ್ಥಿತರಿದ್ದರು.