ಸಾಹಿತಿಗಳ ಪ್ರತಿಮೆಗಳುಳ್ಳ ಬಯಲು ವಸ್ತು ಸಂಗ್ರಹಾಲಯ ಸ್ಥಾಪನೆಗೆ ಚಿಂತನೆ: ಸಿಎಂ ಬೊಮ್ಮಾಯಿ

Update: 2022-12-15 17:06 GMT

ಬೆಂಗಳೂರು, ಡಿ.15: ಕನ್ನಡ ನಾಡಿಗೆ ಜ್ಞಾನಪೀಠ ಪ್ರಶಸ್ತಿ ಹಾಗೂ ಅಪರೂಪದ ಸಾಹಿತ್ಯವನ್ನು ನೀಡಿದವರಿಗೆ ಬಯಲು ವಸ್ತುಸಂಗ್ರಹಾಲಯ(ಓಪನ್ ಏರ್ ಮ್ಯೂಸಿಯಂ) ಸ್ಥಾಪಿಸಿ ಅವರ ಪ್ರತಿಮೆಗಳನ್ನು ಅಳವಡಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗುರುವಾರ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನುಡಿನಮನ ಮೊದಲು ಮಾನವನಾಗು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾಮಾನ್ಯವಾಗಿ ರಾಜಕಾರಣಿಗಳ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ಸಾಹಿತಿಗಳ ಪ್ರತಿಮೆ ಅಪರೂಪ. ವಸ್ತುಸಂಗ್ರಹಾಲಯದಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರಿಗೆ ವಿಶೇಷವಾದ ಸ್ಥಾನವಿರಲಿದೆ. ವಿಭಿನ್ನ ವ್ಯಕ್ತಿಯಾಗಿದ್ದ ಸುಬ್ಬಣ್ಣ ಅವರ ವ್ಯಕ್ತಿತ್ವ, ಧ್ವನಿ, ಆತ್ಮೀಯತೆ, ಚಿಂತನೆ, ತತ್ವಾದರ್ಶಗಳು ತಮ್ಮದೇ ಆದ ಮೆರಗನ್ನು ಹೊಂದಿವೆ. ಇನ್ನೊಬ್ಬ ಸುಬ್ಬಣ್ಣ ಇರಲು ಸಾಧ್ಯವಿಲ್ಲ. ಹೀಗಾಗಿ, ಸುಬ್ಬಣ್ಣ ಅವರನ್ನು ಎಲ್ಲರೂ ಚಿರಕಾಲ ಸ್ಮರಿಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದರು. 

ಶರೀಫರು ಧರ್ಮದ ಚೌಕಟ್ಟನ್ನು ಮೀರಿ ತಮ್ಮ ತತ್ವಗಳನ್ನು ಮನಮುಟ್ಟುವಂತೆ ಹೇಳುತ್ತಿದ್ದ ಕವಿ ಶಿಶುನಾಳ ಶರೀಫರು ದಿನನಿತ್ಯ ಮಾಡುವ ಕರ್ಮಗಳಲ್ಲಿ ತತ್ವಗಳನ್ನು ಅಳವಡಿಸಿದ್ದಾರೆ. ತತ್ವ ಮತ್ತು ಮಾರ್ಮಿಕತೆಗೆ ವಿಶೇಷ ಭಾವನೆಗಳನ್ನು ನೀಡಿದವರು ಶಿವಮೊಗ್ಗ ಸುಬ್ಬಣ್ಣ. ತಮ್ಮ ಭಾಗದಲ್ಲಿ ಪ್ರಸಿದ್ಧರಾಗಿದ್ದ ಶರೀಫರನ್ನು ಇಡೀ ಕರ್ನಾಟಕಕ್ಕೆ ಮತ್ತು ಭಾರತಕ್ಕೆ ಶಿಶುನಾಳ ಶರೀಫರನ್ನು ಪರಿಚಯಿಸಿದ್ದು ಸುಬ್ಬಣ್ಣ. ಸಂತ ಶಿಶುನಾಳ ಶರೀಫರ ತತ್ವ ಹಾಗೂ ಸುಬ್ಬಣ್ಣನವರ ಗಾಯನದ ಉತ್ಕಷ್ಠತೆ ಅನನ್ಯವಾದುದು ಎಂದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಾಹಿತಿ ಚಂದ್ರಶೇಖರ ಕಂಬಾರ, ಕವಿ ಎಚ್.ಎಸ್. ವೆಂಕಟೇಶ ಮೂರ್ತಿ, ಲಹರಿ ವೇಲು ಹಾಗೂ ಮತ್ತಿತರರು ಹಾಜರಿದ್ದರು. 

Similar News