ಪ್ರಧಾನಿ ಮೋದಿಯನ್ನು ಲಾಡೆನ್‌ಗೆ ಹೋಲಿಸಿದ ಪಾಕ್ ವಿದೇಶಾಂಗ ಸಚಿವ: ಭಾರತ ಸರ್ಕಾರ ಖಂಡನೆ
Update: 2022-12-16 17:39 IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ವೈಯಕ್ತಿಕ ದಾಳಿಯ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ವಿರುದ್ಧ ಭಾರತ ಸರ್ಕಾರ ಕಿಡಿ ಕಾರಿದೆ. "ಪಾಕಿಸ್ತಾನವು ಒಸಾಮ ಬಿನ್ ಲಾಡೆನ್ ಅನ್ನು ಹುತಾತ್ಮ ಎಂದು ವೈಭವೀಕರಿಸುವ ಮತ್ತು ಲಖ್ವಿ, ಹಫೀಝ್ ಸಯೀದ್, ಮಸೂದ್ ಅಝರ್, ಸಾಜಿದ್ ಮಿರ್ ಮತ್ತು ದಾವೂದ್ ಇಬ್ರಾಹಿಂ ಅವರಂತಹ ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶವಾಗಿದೆ. ವಿಶ್ವ ಸಂಸ್ಥೆಯಿಂದ ಗೊತ್ತುಪಡಿಸಿದ 126 ಭಯೋತ್ಪಾದಕರು ಮತ್ತು 27 ಭಯೋತ್ಪಾದಕ ಘಟಕಗಳನ್ನು ಹೊಂದಿರುವ ಯಾವುದೇ ದೇಶವು ಹೆಮ್ಮೆಪಡುವಂತಿಲ್ಲ. !" ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆಗೆ ಭಾರತ ಸರ್ಕಾರ ಪ್ರತಿಕ್ರಿಯೆ ನೀಡಿದೆ. ಭಾರತವು ಪಾಕಿಸ್ತಾನವನ್ನು ʼಭಯೋತ್ಪಾದನೆಯ ಕೇಂದ್ರʼ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ, “ಒಸಾಮ ಬಿನ್ ಲಾಡೆನ್ ಸತ್ತಿದ್ದಾನೆ, ಆದರೆ ಗುಜರಾತ್‌ನ ಕಟುಕ ಬದುಕಿದ್ದಾನೆ." ಎಂದು ಪ್ರಧಾನಿ ಮೋದಿಯನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದರು ಎಂದು ndtv ವರದಿ ಮಾಡಿದೆ. ಪ್ರಧಾನಿ ಕುರಿತು ಬಿಲಾವಲ್ ಭುಟ್ಟೊ ನೀಡಿರುವ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಬಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಾಜ್ಯ ಸಚಿವೆ, ʼಭುಟ್ಟೋ ಹೇಳಿಕೆ ಅನಾಗರಿಕವಾಗಿದೆʼ ಎಂದು ಹೇಳಿದ್ದಾರೆ. "ಪಾಕಿಸ್ತಾನದ ವಿದೇಶಾಂಗ ಸಚಿವರು ಬಳಸುವ ಭಾಷೆ ಅವರು ದಿವಾಳಿಯಾದ ದೇಶವನ್ನು ಪ್ರತಿನಿಧಿಸುವುದು ಮಾತ್ರವಲ್ಲ, ಮಾನಸಿಕವಾಗಿಯೂ ದಿವಾಳಿಯಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಭಯೋತ್ಪಾದಕ ಮನಸ್ಥಿತಿ ಹೊಂದಿರುವವರಿಂದ ನೀವು ಏನನ್ನು ನಿರೀಕ್ಷಿಸಬಹುದು?" ಎಂದು ಅವರು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಸಚಿವ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, “ಬಹುಶಃ , 1971 ರಲ್ಲಿ ಈ ದಿನ ಭಾರತೀಯ ಸೇನೆಯು ಪಾಕಿಸ್ತಾನ ಸೇನೆಯನ್ನು ಸೋಲಿಸಿದ ರೀತಿಗೆ ಅವರು ಇನ್ನೂ ನೋವಿನಲ್ಲಿದ್ದಾರೆ. ಅದರ ನಂತರವೂ ಪಾಕಿಸ್ತಾನವು ಭಯೋತ್ಪಾದಕರನ್ನು ಸೃಷ್ಟಿಸಲು ಮತ್ತು ಹೆಚ್ಚಿಸಲು ಪ್ರಯತ್ನಗಳನ್ನು ಮುಂದುವರೆಸಿತು. ಭಯೋತ್ಪಾದನೆ ವಿರುದ್ಧ ಯಾರಾದರೂ ನಿರಂತರ ಕಠಿಣ ಕ್ರಮ ಕೈಗೊಂಡಿದ್ದರೆ ಅದು ಮೋದಿ ಸರಕಾರ. ಇಂತಹ ಹೇಳಿಕೆಗಳು ಯಾವುದೇ ವಿದೇಶಾಂಗ ಸಚಿವರಿಗೆ ಸರಿಹೊಂದುವುದಿಲ್ಲ” ಎಂದು ಹೇಳಿದ್ದಾರೆ. "ಪಾಕಿಸ್ತಾನದ ಮಣ್ಣನ್ನು ಭಯೋತ್ಪಾದನೆಯನ್ನು ಪೋಷಿಸಲು, ರಕ್ಷಿಸಲು ಮತ್ತು ರಕ್ಷಿಸಲು ಬಳಸಲಾಗಿದೆ. ಅವರ ನೀಚ ಯೋಜನೆಗಳು ಜಗತ್ತಿಗೆ ಬಹಿರಂಗಗೊಂಡಿದೆ" ಎಂದು ಠಾಕೂರ್ ಹೇಳಿದರು.