ಬೆಂಗಳೂರು: ಡಿ.18ಕ್ಕೆ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಯುವ ಸಮಾವೇಶ

ಮಾನವ ಹಕ್ಕು ಕಾರ್ಯಕರ್ತೆ ಡಾ.ಅಶ್ವಿನಿ ಕೆ.ಪಿ., ಪತ್ರಕರ್ತ ಜಿ.ಮಹಾಂತೇಶ್ ಪ್ರಶಸ್ತಿಗೆ ಆಯ್ಕೆ

Update: 2022-12-16 17:53 GMT

ಬೆಂಗಳೂರು, ಡಿ.16: ‘ಭರವಸೆ, ಮರುನಿರ್ಮಾಣ, ಘನತೆ' ಎಂಬ ಧ್ಯೇಯವಾಕ್ಯದಡಿ ಡಿ.18ರಂದು ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಯುವ ಸಮಾವೇಶವನ್ನು ಆಯೋಜಿಸಿಲಾಗಿದೆ ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ಅಧ್ಯಕ್ಷ ಲಬೀದ್ ಶಾಫಿ ತಿಳಿಸಿದ್ದಾರೆ. 

ಶುಕ್ರವಾರ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯುವಕರ ನೈತಿಕ, ಸಾಮಾಜಿಕ, ಆರ್ಥಿಕ, ಆರೋಗ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಯುವಕರನ್ನು ಸಬಲೀಕರಿಸುವುದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ನ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಸಮಾಜದ ನಿರ್ಮಾಣಾತ್ಮಕ ಕೆಲಸಗಳಲ್ಲಿ ಯುವ ಸಮೂಹವನ್ನು ಸಜ್ಜುಗೊಳಿಸುವುದು ಈ ಸಮ್ಮೇಳನದ ಮುಖ್ಯ ಗುರಿಯಾಗಿದೆ ಎಂದರು.

ಸಮಾವೇಶದಲ್ಲಿ ಜಮಾತೆ ಇಸ್ಲಾಮೀ ಹಿಂದ್ನ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೈನಿ, ವಿದ್ವಾಂಸ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ, ನಹಾಸ್ ಮಾಲ, ಪ್ರಖ್ಯಾತ ವಾಗ್ಮಿ ಡಾ.ತಾಹಾ ಮತೀನ್, ಮುಹಮ್ಮದ್ ಕುಂಞ, ಮಾನವ ಹಕ್ಕು ಹೋರಾಟಗಾರ ಕೆ.ಕೆ.ಸುಹೈಲ್, ಲದೀದಾ ಪರ್ಝಾನಾ, ಶಬರಿಮಾಲ ಸೇರಿ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಖ್ಯಾತಿಯ ಪ್ರಮುಖ ಚಿಂತಕರು, ವಿದ್ವಾಂಸರು, ಲೇಖಕರು, ಪತ್ರಕರ್ತರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

‘ಮಾಧ್ಯಮ ವಿಶ್ಲೇಷಣೆ ಮತ್ತು ದ್ವೇಷ ಭಾಷಣ: ಒಂದು ಅವಲೋಕನ' ಎಂಬ ವಿಷಯದಲ್ಲಿ ಚಾವಡಿ ಚರ್ಚೆ ನಡೆಯಲಿರುವುದು. ಈ ಚರ್ಚೆಯಲ್ಲಿ ಪತ್ರಕರ್ತ ಆದಿತ್ಯ ಮೆನನ್, ಪ್ರಶಾಂತ್ ಟಂಡನ್, ಬಿ.ಎಂ. ಹನೀಫ್ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಜಿ.ಮಾಹಂತೇಶ್ ಸೇರಿ ಹತ್ತು ಮಂದಿ ಸಾಧಕರಿಗೆ ‘ಸಾಲಿಡಾರಿಟಿ ಅವಾರ್ಡ್': ಎಂದಿನಂತೆ ಈ ವರ್ಷವು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಯುವ ಸಾಧಕರಿಗೆ ‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್' ಅನ್ನು ನೀಡಲಾಗುವುದು. ಮಾಧ್ಯಮ ಕ್ಷೇತ್ರದಲ್ಲಿ ಜಿ.ಮಹಾಂತೇಶ್ ಭದ್ರಾವತಿ, ಮಾನವ ಹಕ್ಕು ಕಾರ್ಯಕರ್ತೆ ಡಾ.ಅಶ್ವಿನಿ ಕೆ.ಪಿ. ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ ಎಂದರು. 

ಮಾನವೀಯ ಸೇವೆಗಾಗಿ ತಬಸ್ಸುಮ್ ಮಂಗಳೂರು, ಸಮಾಜ ಸೇವೆ ಕ್ಷೇತ್ರದಲ್ಲಿ ತನ್ವೀರ್ ಅಹ್ಮದ್, ಪರಿಸರ ವಿಭಾಗದಲ್ಲಿ ಮನ್ಸೂರ್ ಗೌಸ್ ಬೆಂಗಳೂರು, ಕ್ರೀಡೆ ವಿಭಾಗದಲ್ಲಿ ಮುಹಮ್ಮದ್ ಅಝ್ಮತ್, ಶಿಕ್ಷಣ ಕ್ಷೇತ್ರದಲ್ಲಿ ಸುಹೇಬ್ ಬೇಗ್ ಕೆರೆಬಿಳಿಚಿ ಆಯ್ಕೆ ಆಗಿದ್ದಾರೆ ಎಂದು ಅವರು ತಿಳಿಸಿದರು.  

ಆರ್ಥಿಕ ಸಬಲೀಕರಣ ಕ್ಷೇತ್ರದಲ್ಲಿ ಅಸೋಷಿಯೇಷನ್ ಫಾರ್ ಮುಸ್ಲಿಂ  ಪ್ರೊಫೆಷನಲ್ಸ್ (ಎಎಂಪಿ), ಕಲೆ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ಶೇಖ್ ಮುಹಮ್ಮದ್ ಇದ್ರೀಸ್, ವಿಶೇಷ ಚೇತನ ಸ್ಫೂರ್ತಿ ವಿಭಾಗದಲ್ಲಿ ಅಬ್ದುಲ್ ರೆಹಮಾನ್ ‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್'ಗೆ ಆಯ್ಕೆ ಆಗಿದ್ದಾರೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಸಾಲಿಡಾರಿಟಿ ಯೂತ್ ಮೂವ್'ಮೆಂಟ್ ನ ಕಾರ್ಯದರ್ಶಿ ಮುಹಮ್ಮದ್ ರಿಹಾನ್, ಮುಹಮ್ಮದ್ ಅಖೀಲ್, ಮಾಝ್ ಸಲ್ಮಾನ್ ಮನಿಯಾರ್, ಮುಹಮ್ಮದ್ ನವಾಝ್ ಮತ್ತಿತರರು ಉಪಸ್ಥಿತರಿದ್ದರು.

Similar News