ಎನ್‌ಪಿಎ-ಮೋದಿ ಸರಕಾರದ ಹಗಲು ದರೋಡೆ

Update: 2022-12-17 04:06 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಮೊನ್ನೆ ಸಂಸತ್ತಿನಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ಆತಂಕ ಹುಟ್ಟಿಸುವ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ (2017-18 ರಿಂದ 2021-22) ಭಾರತದ ಬ್ಯಾಂಕುಗಳ ಎನ್‌ಪಿಎ-ನಾನ್ ಪರ್ಫಾರ್ಮಿಂಗ್ ಅಸೆಟ್ಸ್- ಅರ್ಥಾತ್ ವಸೂಲಾಗದ ಸಾಲದ ಮೊತ್ತ ರೂ. 10.09 ಲಕ್ಷ ಕೋಟಿಯನ್ನು ಮುಟ್ಟಿದೆ ಮತ್ತು ಅದು ಪ್ರತೀ ವರ್ಷ ಹೆಚ್ಚಾಗುತ್ತಿದೆ. ಇದು ದೇಶದ ಆರ್ಥಿಕ ಆರೋಗ್ಯದ ಬಗ್ಗೆ ಆತಂಕ ಹುಟ್ಟಿಸುವ ಸಂಗತಿಯಾಗಿದೆ. ಏಕೆಂದರೆ ಒಂದು ದೇಶದ ಆರ್ಥಿಕತೆ ಸುಸ್ಥಿರವಾಗಿರಲು ಆ ದೇಶದ ಬ್ಯಾಂಕಿಂಗ್ ವ್ಯವಸ್ಥೆ ಆರೋಗ್ಯಕರವಾಗಿರಬೇಕು. ಏಕೆಂದರೆ ಬ್ಯಾಂಕುಗಳು ದೇಶದ ಜನರ ಉಳಿತಾಯ ಇತ್ಯಾದಿ ಹಣಗಳನ್ನು ಡಿಪಾಸಿಟುಗಳಾಗಿ ಶೇಖರಿಸಿ ಅದನ್ನು ಇಡುಗಂಟಾಗಿ ಖಾಸಗಿ ಬಂಡವಾಳಿಗರಿಗೆ ಮತ್ತು ಸರಕಾರಕ್ಕೆ ಬಂಡವಾಳ ಸಾಲವನ್ನಾಗಿ ಕೊಡುತ್ತದೆ.

ಒಂದು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಈ ಬಗೆಯ ಸಾರ್ವಜನಿಕ ಸಾಲದ ಪಾತ್ರ ನಿರ್ಣಾಯಕವಾದುದು. ಈ ಸಾಲಗಳನ್ನು ಪಡೆದುಕೊಂಡ ಸಂಸ್ಥೆಗಳು ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸರಿಯಾದ ಮತ್ತು ವ್ಯವಹಾರಯೋಗ್ಯ ಯೋಜನೆಗಳಲ್ಲಿ ಹೂಡಿ ಸಾಲದ ಕಂತು ಮತ್ತು ಬಡ್ಡಿಯನ್ನು ಸೇರಿಸಿ ವಾಪಸ್ ಬ್ಯಾಂಕುಗಳಿಗೆ ಮರಳಿಸಿದಾಗಲೇ ಮತ್ತೆ ಬ್ಯಾಂಕುಗಳು ಮರು ಸಾಲ ಕೊಡಲಾಗುತ್ತದೆ ಅಥವಾ ತನ್ನಲ್ಲಿ ಹಣಹೂಡಿದ ಡಿಪಾಸಿಟರುಗಳಿಗೆ ಬಡ್ಡಿಯನ್ನು ಮತ್ತು ಅಸಲನ್ನು ತೀರಿಸಲು ಸಾಧ್ಯವಾಗುತ್ತದೆ. ಈ ಆರ್ಥಿಕ ಚಕ್ರದಲ್ಲಿ ಸಾಲ ತೆಗೆದುಕೊಂಡವರು ವಾಪಸ್ ಮಾಡದಿದ್ದರೆ ಇಡೀ ಆರ್ಥಿಕ ಚಕ್ರವೇ ಕುಸಿದು ಬೀಳುತ್ತದೆ. ಬ್ಯಾಂಕುಗಳು ದಿವಾಳಿಯೇಳುತ್ತವೆ. ದೇಶದ ಆರ್ಥಿಕತೆ ದಿಕ್ಕೆಡುತ್ತದೆ. ಹಾಗೆಂದು ಎಲ್ಲಾ ಎನ್‌ಪಿಎಗಳು ಉದ್ದೇಶಪೂರ್ವಕ ವಂಚನೆಗಳಾಗಿರುವುದಿಲ್ಲ. ಉದಾಹರಣೆಗೆ 2008ಕ್ಕೆ ಮುಂಚೆ ಭಾರತದ ಆರ್ಥಿಕತೆ ಶೇ.8ರಷ್ಟು ಗತಿಯಲ್ಲಿದ್ದಾಗ ಆ ಅಭಿವೃದ್ಧಿಯ ಗತಿಗೆ ಬೇಕಾದಷ್ಟು ಬಂಡವಾಳವನ್ನು ಪೂರೈಸಲು ಆಗಿನ ಸರಕಾರದ ಆದೇಶದಂತೆ ಬ್ಯಾಂಕುಗಳು ಹೆಚ್ಚು ವಿವೇಚನೆ ಇಲ್ಲದೆ ಲಕ್ಷಾಂತರ ಕೋಟಿ ರೂ. ಬಂಡವಾಳವನ್ನು ಖಾಸಗಿ ಕಾರ್ಪೊರೇಟ್ ಉದ್ಯಮಿಗಳಿಗೆ ನೀಡಿತು. ಆದರೆ ಈ ಅಭಿವೃದ್ಧಿ ಉದ್ಯಮಿಗಳ ಬೊಕ್ಕಸವನ್ನು ತುಂಬಿತೇ ವಿನಾ ಹೆಚ್ಚಿನ ಉದ್ಯೋಗಗಳನ್ನೇನೂ ಸೃಷ್ಟಿಸಲಿಲ್ಲ. ಅದರ ಜೊತೆಗೆ 2008ರ ನಂತರ ಇಡೀ ಜಗತ್ತೇ ಒಂದು ದೊಡ್ಡ ಹಣಕಾಸು ಬಿಕ್ಕಟ್ಟನ್ನು ಎದುರಿಸಿದ್ದರಿಂದ ಆರ್ಥಿಕ ಪ್ರಗತಿಯ ಗತಿ ಕುಂಠಿತವಾಯಿತು. ಇದರಿಂದಾಗಿ ಸಾಲ ಪಡೆದುಕೊಂಡಿದ್ದ ಹಲವಾರು ಕಂಪೆನಿಗಳು ನಷ್ಟವನ್ನೆದುರಿಸಬೇಕಾಗಿ ಬಂತು. ಬ್ಯಾಂಕುಗಳಿಗೆ ಅಸಲನ್ನಾಗಲೀ ಬಡ್ಡಿಯನ್ನಾಗಲೀ ತೀರಿಸಲು ಸಾಧ್ಯವಾಗಲಿಲ್ಲ. ಆದರೆ ಇಂತಹ ಪ್ರಾಮಾಣಿಕ ಎನ್‌ಪಿಎಗಳ ಪ್ರಮಾಣ ಭಾರತದಲ್ಲಿ ಕಡಿಮೆ.

ವ್ಯವಹಾರ ಚೆನ್ನಾಗಿ ನಡೆಯುತ್ತಿದ್ದರೂ, ಸಾಲವನ್ನಾಗಲೀ ಬಡ್ಡಿಯನ್ನಾಗಲೀ ತೀರಿಸದ ಅಥವಾ ಕೊಟ್ಟ ಸಾಲಗಳನ್ನು ಇತರ ಉದ್ದೇಶಗಳಿಗೆ ಐಷಾರಾಮಗಳಿಗೆ ವ್ಯಯ ಮಾಡುತ್ತಾ ಸರಕಾರದೊಂದಿಗೆ ತಮಗಿರುವ ರಾಜಕೀಯ ಸಂಬಂಧಗಳನ್ನು ಬಳಸಿಕೊಂಡು ಜನರ ಹಣವನ್ನು ಹಗಲು ದರೋಡೆ ಮಾಡುತ್ತಿರುವ ಪ್ರಮಾಣವೇ ಎನ್‌ಪಿಎಗಳಲ್ಲಿ ಹೆಚ್ಚು. ಹೀಗಾಗಿ ಭಾರತದಲ್ಲಿ ಎನ್‌ಪಿಎಗಳು ಭಾರತದ ಉದ್ಯಮಪತಿಗಳ ಮತ್ತು ಸರಕಾರಗಳ ಜಂಟಿ ದರೋಡೆ, ಅದಕ್ಷತೆ ಮತ್ತು ಭ್ರಷ್ಟಾಚಾರಗಳ ಸಂಕೇತಗಳೇ ಆಗಿವೆ. 2014ರಲ್ಲಿ ರಘುರಾಮ್ ರಾಜನ್ ಅವರು ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಬಂದ ಮೇಲೆ ಪ್ರತೀ ವರ್ಷ ಬ್ಯಾಂಕುಗಳ ಸಾಲದ ಗುಣಮಟ್ಟವನ್ನು (ಅಸೆಟ್ ಕ್ವಾಲಿಟಿ ರಿವ್ಯೆ) ಪರಿಶೀಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು.

ಈ ರೀತಿ ಬ್ಯಾಂಕುಗಳ ಹಣವನ್ನು ವಂಚಿಸಿ ಹಗಲು ದರೋಡೆ ಮಾಡುತ್ತಿರುವವರ ದೊಡ್ಡ ಪಟ್ಟಿಯನ್ನು 2015ರಲ್ಲೇ ಪ್ರಧಾನ ಮಂತ್ರಿ ಕಾರ್ಯಾಲಯ (ಪಿಎಂಒ)ಕ್ಕೆ ಸಲ್ಲಿಸಿದ್ದರು. ಆದರೆ ಅದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ಮೋದಿ ಸರಕಾರ ಆ ಪಟ್ಟಿಯಲ್ಲಿದ್ದ ಮೆಹುಲ್ ಚೋಸ್ಕಿ, ವಿಜಯ ಮಲ್ಯ, ನೀರವ್ ಮೋದಿಯವರ ಜೊತೆ ಬಹಿರಂಗವಾಗಿ ಕಾಣಿಸಿಕೊಂಡು ಅವರ ಆರ್ಥಿಕ ಕೊಡುಗೆಗಳ ಬಗ್ಗೆ ಪ್ರಶಂಸೆ ಮಾಡಿದ ನಿದರ್ಶನಗಳು ಹೆಚ್ಚಾಗಲಾರಂಭಿಸಿದವು. ಹೀಗಾಗಿಯೇ ಬ್ಯಾಂಕುಗಳು ಅವರ ಮೇಲೆ ನಿಗಾ ಇಟ್ಟಿದ್ದರೂ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಮಲ್ಯ-ಚೋಸ್ಕಿ-ನೀರವ್ ಮೋದಿಗಳೇ ಅಂದಾಜು 30,000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಹಣವನ್ನು ಬ್ಯಾಂಕುಗಳಿಗೆ ಪಂಗನಾಮ ಹಚ್ಚಿದ್ದರು. ಇದು ಬಹಿರಂಗವಾಗುವ ಸ್ವಲ್ಪಮುಂಚೆಯೇ ಮೋದಿ ಸರಕಾರದ ಮೂಗಿನಡಿಯಲ್ಲಿಯೇ ಅವರು ಒಬ್ಬೊಬ್ಬರಾಗಿ ದೇಶ ಬಿಟ್ಟು ಹಾರಿ ಹೋದರು. ಇಂಥವರ ಪಟ್ಟಿಯಲ್ಲಿ ಮೋದಿಯವರ ಪರಮಾಪ್ತ ರಾಮ್ ದೇವ್ ಒಡೆತನದ ರುಚಿ ಸೋಯಾ, ರೂಯ ಕಂಪೆನಿಯ ಎಸ್ಸಾರ್ ಸ್ಟೀಲ್ಸ್ ಇತ್ಯಾದಿ ಕಂಪೆನಿಗಳಿದ್ದರೂ ಅವರ ಮೇಲೆ ಈವರೆಗೆ ಯಾವುದೇ ದಂಡನಾ ಕ್ರಮಗಳನ್ನು ತೆಗೆದುಕೊಂಡಿಲ್ಲ.

ಅದರ ಬದಲಿಗೆ ಸರಕಾರವು ಅವುಗಳನ್ನು ಬಿಕ್ಕಟ್ಟಿನಲ್ಲಿರುವ ಕಂಪೆನಿಗಳೆಂದು ಹೆಸರಿಸಿ ಅವುಗಳ ಸಾಲವನ್ನು ಮನ್ನಾ ಮಾಡುವ ಕೆಲಸ ಪ್ರಾರಂಭಿಸಿದೆ. ಇದರಂತೆ ಮೊದಲು ಬ್ಯಾಂಕುಗಳಲ್ಲಿ ಸಾಲ ಖಾತೆಯಲ್ಲಿದ್ದ ಅವರ ಖಾತೆಯನ್ನು ರದ್ದು ಮಾಡಿ (ರೈಟ್ ಆಫ್) ಬ್ಯಾಂಕುಗಳ ಬ್ಯಾಲೆನ್ಸ್ ಶೀಟನ್ನು ಶುದ್ಧಗೊಳಿಸಲಾಗುವುದು. ಆನಂತರ ಸಾಲ ವಾಪಸ್ ಮಾಡದ ಕಂಪೆನಿಗಳನ್ನು ಹೇಗೆ ಉಳಿಸಬಹುದು ಎಂದು ಸಾಲ ಕೊಟ್ಟ ಬ್ಯಾಂಕುಗಳು ಒಟ್ಟುಗೂಡಿ, ಬದಲಾದ ಕಂಪೆನಿಗಳ ಸಾಲ ವಸೂಲಾತಿ ಕಾನೂನುಗಳ ಪ್ರಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮೋದಿ ಸರಕಾರ ಈ ಉದ್ದೇಶಕ್ಕಾಗಿ ಯೋಚಿಸಿರುವ ಕ್ರಮ ಈ ಕಂಪೆನಿಗಳ ಸಾಲವನ್ನು ಮಾರಿಬಿಡುವುದು. ಅಂದರೆ ಅವರ ಸಾಲವನ್ನು ಲಾಭ ಮಾಡುತ್ತಿರುವ ಸಾರ್ವಜನಿಕ ಕಂಪೆನಿಗಳು ಕೊಂಡುಕೊಳ್ಳುವಂತೆ ಮಾಡುವುದು! ಅಥವಾ ಅವರ ಸಾಲವನ್ನು ಬಹುಪಾಲು ಮನ್ನಾ ಮಾಡಿ ಇತರ ಕಂಪೆನಿಗಳು ಕೊಂಡುಕೊಳ್ಳುವಂತೆ ಪ್ರೋತ್ಸಾಹಿಸುವುದು ಮತ್ತು ಅದಕ್ಕೆ ಬೇಕಿರುವ ಹಣವನ್ನು ಮತ್ತೆ ಬ್ಯಾಂಕುಗಳೇ ಕೊಡುವುದು. ಇದನ್ನು ಬ್ಯಾಂಕ್ ಪರಿಭಾಷೆಯಲ್ಲಿ ಹೇರ್ ಕಟ್ ಯೋಜನೆ ಎನ್ನುತ್ತಾರೆ. ಈ ರೀತಿ ಕಳೆದ ಐದು ವರ್ಷಗಳಲ್ಲಿ ಕೇವಲ 13 ಕಂಪೆನಿಗಳು ಬ್ಯಾಂಕುಗಳಿಗೆ ಕೊಡಬೇಕಿದ್ದ 5 ಲಕ್ಷ ಕೋಟಿ ಸಾಲದಲ್ಲಿ 4 ಲಕ್ಷ ಕೋಟಿಯನ್ನು ಮನ್ನಾ (ರೈಟ್ ಆಫ್ ಅಲ್ಲ ವೇಯ್ವಾ ಆಫ್!)ಮಾಡಲಾಗಿದೆ.

ಹಾಗೆ ಸಾಲ ಮುಕ್ತವಾದ ಕಂಪೆನಿಗಳನ್ನು ಮತ್ತೆ ಅದೇ ಮಾಲಕರ ಸಂಬಂಧಿಗಳು ಕೊಂಡುಕೊಂಡ ಭ್ರಷ್ಟಾತಿ ಭ್ರಷ್ಟ ಪ್ರಕರಣಗಳಿಗೆ ಭಷ್ಟಾಚಾರ ವಿರೋಧಿ ಎಂದು ಕೊಚ್ಚಿಕೊಳ್ಳುವ ಮೋದಿ ಸರಕಾರ ಹೆಚ್ಚೆಚ್ಚು ಅವಕಾಶ ಮಾಡಿಕೊಡುತ್ತಿದೆ. ಹೀಗಾಗಿಯೇ ರೂ. 10 ಲಕ್ಷ ಕೋಟಿಯಲ್ಲಿ ಎನ್‌ಪಿಎಗಳಲ್ಲಿ ಕೇವಲ ರೂ. 1.3 ಲಕ್ಷ ಕೋಟಿ ಮಾತ್ರ ಅಂದರೆ ಶೇ.13 ರಷ್ಟು ಮಾತ್ರ ವಸೂಲಾಗಿದೆ. ಉಳಿದದ್ದು ರೈಟ್ ಆಫ್ ಹೆಸರಿನಲ್ಲಿ ಹೇರ್ ಕಟ್‌ಗಳ ಮೂಲಕ ವೇಯ್ವಿ ಆಫ್ ಅಂದರೆ ಮನ್ನಾ ಆಗಲಿದೆ. ಇದರಿಂದ ಬ್ಯಾಂಕುಗಳು ದಿವಾಳಿಯೇಳದಂತೆ ಮಾಡಬೇಕೆಂದರೆ ಸರಕಾರವು ಬ್ಯಾಂಕುಗಳಿಗೆ ಅಷ್ಟು ಹಣವನ್ನು ಮರುಪೂರಣ ಮಾಡಬೇಕಾಗುತ್ತದೆ. ಅದನ್ನು ಬಜೆಟ್‌ನಿಂದಲೇ ಅರ್ಥಾತ್ ಜನರ ತೆರಿಗೆ ಹಣದಿಂದಲೇ ಮಾಡಬೇಕಾಗುತ್ತದೆ. ಅಂದರೆ ಕಾರ್ಪೊರೇಟುಗಳು ಸರಕಾರದ ಕುಮ್ಮಕ್ಕಿನೊಂದಿಗೆ ಸಾಮಾನ್ಯ ಜನರ ಡಿಪಾಸಿಟ್ ಹಾಗೂ ತೆರಿಗೆ ಎರಡನ್ನೂ ದರೋಡೆ ಮಾಡುತ್ತಿವೆ. ದೇಶ ತನ್ನ ಕೈಯಲ್ಲಿ ಸುಭದ್ರವಾಗಿದೆ ಎಂದು ಹೇಳಿದವರ ಮೇಲ್ವಿಚಾರಣೆಯಲ್ಲೇ ಈ ಹಗಲು ದರೋಡೆ ನಡೆಯುತ್ತಿದೆ ಎನ್ನುವುದನ್ನು ಮರೆಯಬಾರದು.

Similar News