PSI ಹಗರಣ | ಗೃಹ ಸಚಿವರೇ ಅಭ್ಯರ್ಥಿಗಳ ಬಳಿ ಸಾಕ್ಷಿ ಕೇಳುತ್ತಿದ್ದಾರೆ...: ಪ್ರಿಯಾಂಕ್ ಖರ್ಗೆ

ಆಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್ ನಾಯಕ

Update: 2022-12-17 11:16 GMT

ಬೆಂಗಳೂರು, ಡಿ.17: 'PSI ಹಗರಣಕ್ಕೆ ಸಂಬಂಧಿಸಿ ಸಾಕ್ಷಿ ಇದ್ದರೆ ಕೊಡಿ ಎಂದು ಗೃಹ ಸಚಿವರು ಕೇಳುತ್ತಿದ್ದಾರೆ. ನೀವು ಸಚಿವರಾಗಿದ್ದು, ಗುಪ್ತಚರ, ಪೊಲೀಸ್ ಇಲಾಖೆ ನಿಮ್ಮದೇ ಕೈಯಲ್ಲಿದೆ. ನೀವೇ ಅಭ್ಯರ್ಥಿಗಳ ಬಳಿ ಸಾಕ್ಷಿ ಕೇಳುತ್ತಿದ್ದೀರಿ. ಇದೇನಾ ಗೃಹಸಚಿವರ ಜವಾಬ್ದಾರಿ? ನೀವು ಏನು ಮಾಡಲು ಹೊರಟಿದ್ದೀರಿ?" ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. 

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮೂವರು ಶಾಸಕರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಶಾಮೀಲಾಗಿರುವ ಕುರಿತು ಖುದ್ದಾಗಿ ಸಾಕ್ಷ್ಯ ನೀಡಿದ್ದರೂ ತ‌ಇಖೆ ನಡೆಸುತ್ತಿಲ್ಲ ಎಂಬುದಾಗಿ  ಅಭ್ಯರ್ಥಿಯೊಬ್ಬರು ಗೃಹ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಒಂದನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

'ನಿಮಗೆ ತಾಕತ್ತು ಧಮ್ಮು ಇದ್ದರೆ ಈ ಬಗ್ಗೆ ಚರ್ಚೆ ಮಾಡಿ. ನೀವು ಮಾಧ್ಯಮ ಅಥವಾ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ. ನಾವು ಸಿದ್ಧವಿದ್ದೇವೆ. ನಾವು ಏನಾದರೂ ಕೇಳಿದರೆ, ಕಾಂಗ್ರೆಸ್ ಅವಧಿಯಲ್ಲಿ ನಡೆದಿಲ್ಲವಾ ಎಂದು ಕೇಳುತ್ತೀರಿ. ಇದೇನಾ ನಿಮ್ಮ ಜವಾಬ್ದಾರಿ. ಇಷ್ಟೆನಾ ನಿಮ್ಮ ಸರ್ಕಾರದ ಸಾಮರ್ಥ್ಯ? ಈ ಅಸಮರ್ಥ ಉತ್ತರ ನೀಡಲು, ಇಂತಹ ಅಯ್ಯೋಗ್ಯ ಸರ್ಕಾರ ಮಾಡಲು ಇವರು ಸಾವಿರ ಕೋಟಿ ಖರ್ಚು ಮಾಡಿ ಬಾಂಬೆತನಕ ಹೋಗಿದ್ದರು. ನೀವು ಹಾಕಿರುವ ಬಂಡವಾಳ ಹಿಂಪಡೆಯಲು ಸರ್ಕಾರ ನಡೆಸುತ್ತಿದ್ದೀರಾ? ಯುವಕರ ಭವಿಷ್ಯ ಹಾಳು ಮಾಡುತ್ತಿದ್ದೀರಲ್ಲಾ ನಾಚಿಕೆಯಾಗುವುದಿಲ್ಲವೇ? ಅದಾಗ್ಯೂ ದೊಡ್ಡಮಾತಗಳನ್ನಾಡುತ್ತೀರಿ' ಎಂದು ವಾಗ್ದಾಳಿ ನಡೆಸಿದರು. 

ಮೊನ್ನೆ ಅವರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಯುವಕರಿಗೆ 1 ಲಕ್ಷ ಉದ್ಯೋಗ ನೀಡುವುದಾಗಿ ಹೇಳಿದ್ದಾರೆ? ಹೇಗೆ ನೀಡುತ್ತೀರಾ ಸ್ವಾಮಿ? ಕೆಎಎಸ್ ಒಂದೂ ಆಗಿಲ್ಲ, ಕೆಪಿಎಸ್ ಸಿ 9-11 ಆಗಿರಬಹುದು. ಎಲ್ಲವೂ ಹಗರಣವಾಗಿವೆ. ಈ ಸರ್ಕಾರದಲ್ಲಿ ಆಗಿರುವ ಎಲ್ಲ ನೇಮಕಾತಿ ಹಗರಣವಾಗಿದ್ದು, ನೀವು 1 ಲಕ್ಷ ಉದ್ಯೋಗ ನೀಡುತ್ತೀರಾ? 54 ಸಾವಿರ ಅಭ್ಯರ್ಥಿಗಳು ನಮ್ಮನ್ನು ನೋಡುತ್ತಿದ್ದು ಅವರಿಗೆ ಯಾವ ಸಂದೇಶ ರವಾನಿಸುತ್ತಿದ್ದೀರ? ಎಂದು ಪ್ರಶ್ನೆ ಮಾಡಿದರು. 

'ಈ ಸರ್ಕಾರ ಬೆಳಗ್ಗೆ ಒಂದು, ಸಂಜೆ ಒಂದು, ಡಿಜಿ, ಸಿಎಂ, ಗೃಹಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಇದೇನಾ ನೀವು ಸರ್ಕಾರ ನಡೆಸುವ ರೀತಿ. ನೀವು ಮಾಡಲು ಹೊರಟಿರುವ ಕೆಲಸಕ್ಕೆ ಉತ್ತರ ನೀಡಿ. ಈ ಆಡಿಯೋ ಯಾರದ್ದು? ಅದರಲ್ಲಿ ಏನು ಚರ್ಚೆ ಮಾಡಿದ್ದೀರಿ? ಅದು ಸತ್ಯವೇ ಅಲ್ಲವೇ? ಎಲ್ಲವೂ ಹೊರಬರಬೇಕು. ಈ ಪ್ರಕರಣವನ್ನು ಸರ್ಕಾರ ನ್ಯಾಯಾಂಗ ತನಿಖೆಗೆ ಒಫ್ಪಿಸಬೇಕು. ಸದನದಲ್ಲಿ ಈ ಬಗ್ಗೆ ಚರ್ಚಿಸಲು ನಾವು ತಯಾರಾಗಿದ್ದು, ಅವಕಾಶ ಮಾಡಿಕೊಡಬೇಕು. ಕೇವಲ ಪಿಎಸ್ ಐ ಮಾತ್ರವಲ್ಲ, ಜೆಇಇ, ಡಿಡಬ್ಲ್ಯೂ ಡಿ, ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಎಲ್ಲ ನೇಮಕಾತಿ ಹುದ್ದೆ ಅಕ್ರಮದ ಚರ್ಚೆ ಆಗಬೇಕು' ಎಂದು ಆಗ್ರಹಿಸಿದರು. 

Full View

Similar News