ಕಾನೂನುಗಳ ಅನುಷ್ಠಾನಕ್ಕೂ ಹೋರಾಟ ಅಗತ್ಯ: ನ್ಯಾ.ಎಸ್.ಮುರಳೀಧರ್
ಬೆಂಗಳೂರು, ಡಿ. 17: ‘ಜನರ ಹೋರಾಟಗಳಿಂದ ಬಂದ ಕಾನೂನುಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಅಂತಹ ಕಾನೂನುಗಳ ಅನುಷ್ಟಾನದಿಂದ ಸಾಮಾಜಿಕ ಬದಲಾವಣೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಒಡಿಶಾ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶ ಎಸ್.ಮುರಳೀಧರ್ ಕರೆ ನೀಡಿದ್ದಾರೆ.
ಶನಿವಾರ ಇಲ್ಲಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಪರ್ಯಾಯ ಕಾನೂನು ವೇದಿಕೆಯು ಆಯೋಜಿಸಿದ್ದ ‘ಸಾಮಾಜಿಕ ಸುಧಾರಣೆಯ ಕೈಪಿಡಿ ಸಂವಿಧಾನ: ಮುಂದಿನ ಸವಾಲುಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯ್ದೆ, ಅರಣ್ಯ ಹಕ್ಕು ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಇವು ಜನರ ಹೋರಾಟಗಳಿಂದ ಬಂದ ಕಾನೂನುಗಳಾಗಿವೆ. ಹಾಗಾಗಿ ಸುಧಾರಣೆ ತರುವುದು ಕಷ್ಟವೆಂದು ಹೋರಾಟವನ್ನು ನಿಲ್ಲಿಸಬಾರದು. ನಿರಂತರ ಹೋರಾಟದಿಂದ ಮುಂದೊಂದು ದಿನ ಜಯ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
2013ರಲ್ಲಿ ಸಫಾಯಿ ಕರ್ಮಚಾರಿಗಳ ಬಗ್ಗೆ ಸುಪ್ರೀಂ ಕೋರ್ಟ್‍ನಲ್ಲಿ ಚರ್ಚೆಯಾಗಿ, ತೀರ್ಪು ಹೊರಬಂದಿತು. ತೀರ್ಪು ನಮ್ಮ ಪರವಾಗಿ ಬಂದಿತು ಎಂದು ಸಫಾಯಿ ಕರ್ಮಚಾರಿ ಸಮುದಾಯವು ಸುಮ್ಮನೆ ಕೂರಲಿಲ್ಲ. ತೀರ್ಪನ್ನು ಇಟ್ಟುಕೊಂಡು ದೇಶವ್ಯಾಪಿ ಸಂಚರಿಸಿ ತಮ್ಮ ಸಮುದಾಯದ ಜನರಲ್ಲಿ ತಿಳುವಳಿಕೆ ಮೂಡಿಸಿದರು. ಹಾಗಾಗಿ ಜನರು ಕಾನೂನಿನ ರಚನೆಗಾಗಿ ಎಷ್ಟು ಹೋರಾಟ ಮಾಡುತ್ತಾರೋ, ಕಾನೂನು ಬಂದ ಬಳಿಕ ಅದನ್ನು ಅನುಷ್ಠಾನ ಮಾಡಲು ಅಷ್ಟೇ ಹೋರಾಟಗಳನ್ನು ಮಾಡಬೇಕಾಗುತ್ತದೆ ಎಂದು ಅವರು ನುಡಿದರು.
ಸಂವಿಧಾನದ ರಚನಾ ಸಭೆಯಲ್ಲಿ ಗಣ್ಯರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಡಾ.ಬಿ.ಆರ್ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯವನ್ನು ಪ್ರಸ್ತಾಪಿಸಿದರು ಎಂದು ನೆನಪಿಸಿಕೊಂಡ ಅವರು, ಸಂವಿಧಾನವು ಸಾಮಾಜಿಕ ಕ್ರಾಂತಿಯ ದಾಖಲೆ ಆಗಿದೆ. ದಲಿತರಿಗೆ ಕೆರೆಯ ನೀರನ್ನು ಮುಟ್ಟಲು ಬಿಡದ ಕಾರಣ ಅಂಬೇಡ್ಕರ್ ದಲಿತರೊಂದಿಗೆ ಚಳವಳಿ ರೂಪಿಸಿ ನೀರು ಕುಡಿದಿದ್ದು, ರಾಜಕೀಯ ಇತಿಹಾಸದ ಮೈಲುಗಲ್ಲಾಗಿದೆ ಎಂದು ವಿವರಿಸಿದರು.
ಸಂವಿಧಾನದ 17ನೆ ಮತ್ತು 23ನೆ ವಿಧಿಯು ಸಂವಿಧಾನದಲ್ಲೇ ಅತಿ ಮುಖ್ಯವಾದ ಅಂಶವಾಗಿದೆ. ಇವೆರಡು ದಲಿತರಿಗೆ ರಕ್ಷಣೆಯನ್ನು ಕಲ್ಪಿಸಿವೆ. ಆದರೆ ಭಾರತದಲ್ಲಿ ಇದನ್ನು ಸಮರ್ಪಕವಾಗಿ ಅಳವಡಿಸಲು ಕಷ್ಟವಾಗುತ್ತಿದೆ ಎಂದು ಅವರು ಬೇಸರವ್ಯಕ್ತಪಡಿಸಿದರು.
ಸಾಮಾಜಿಕ ಪ್ರಜಾಪ್ರಭುತ್ವ ಎಂದರೆ ಜೀವನ ನಡೆಸುವಂತಹ ಒಂದು ಕ್ರಮ ಆಗಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಪೂರ್ವಪೀಠಿಕೆಯಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವವನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ್ತಿ ದು.ಸರಸ್ವತಿ ಮಾತನಾಡಿ, ಇಪ್ಪತ್ತು ವರ್ಷದವಳಾಗಿದ್ದಾಗ ನನಗೆ ಕಾನೂನಿನ ಬಗ್ಗೆ ನಂಬಿಕೆ ಇರಲಿಲ್ಲ. ನ್ಯಾಯಕ್ಕಾಗಿ ಕೋರ್ಟಿಗೆ ಹೋದರೆ, ಅನ್ಯಾಯದ ತೀರ್ಪುಗಳು ಬರುತ್ತಿದ್ದವು. ಪೋಲಿಸ್ ವ್ಯವಸ್ಥೆಯಿಂದಲೂ ಬೇಸರವಾಗಿತ್ತು. ಪರ್ಯಾಯ ಕಾನೂನು ವೇದಿಕೆ ನನಗೆ ಸಹಾಯ ಮಾಡಿತು. ವೇದಿಕೆಯು ದಲಿತರ, ದಮನಿತರ ಸಮಸ್ಯೆಗಳನ್ನು ಗುರುತಿಸಿ ಹೋರಾಟಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಸಂಸ್ಕೃತಿಯನ್ನು ವಿಶಾಲ ದೃಷ್ಟಿಕೋನದಿಂದ ನೋಡುವ ಅನಿವಾರ್ಯತೆ ಇಂದು ನಿರ್ಮಾಣವಾಗಿದೆ. ಅದು ಪರಿಸರದೊಂದಿಗೆ ಹಂಚಿಕೊಂಡಿದೆ. ಕೆಲೆ ಇಲ್ಲದೆ ಸಂಸ್ಕೃತಿ ಇರಲು ಸಾಧ್ಯವಿಲ್ಲ. ಹಾಗಾಗಿ ಭಾರತಕ್ಕೆ ಬಹುಜನರ ಸಂಸ್ಕøತಿಯೇ ಮುಖ್ಯವಾಗಿದೆ. ಭಾರತೀಯತೆ ನಮ್ಮ ಧರ್ಮವಾಗಬೇಕು, ಭಾರತದ ಸಂವಿಧಾನವು ನಮ್ಮ ಪವಿತ್ರ ಗ್ರಂಥವಾಗಬೇಕು. ಸಂವಿಧಾನದ ಉಳಿವು ಬಹುತ್ವ ಭಾರತದ ಉಳಿವು ಆಗಿರುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪರ್ಯಾಯ ಕಾನೂನು ವೇದಿಕೆಯ 22ನೆ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ನೂತನ ವೆಬ್‍ಸೈಟ್ ಅನ್ನು ಉದ್ಘಾಟಿಸಲಾಯಿತು. ಗಮನ ಮಹಿಳಾ ಸಂಘದ ತಂಡದಿಂದ ಸಾಂಸ್ಕೃತಿಕ ತಂಡ ಸಂವಿಧಾನದ ಗೀತೆಗಳನ್ನು ಪ್ರಸ್ತುತಪಡಿಸಿತು.
ವಿವಿಧ ದಲಿತ ಸಂಘಟನೆಗಳು, ಲೈಂಗಿಕ ಕಾರ್ಯಕರ್ತೆಯರ ಸಂಘಟನೆಗಳು, ಗಾಮೆರ್ಂಟ್ಸ್ ಕಾರ್ಮಿಕರ ಸಂಘ, ಗೃಹ ಕಾರ್ಮಿಕರ ಸಂಘ, ವಿದ್ಯಾರ್ಥಿ ಸಂಘಟನೆಗಳು ಹಾಘೂ ಮಾನವ ಹಕ್ಕುಗಳ ಸಂಘಟನೆಗಳ ಪ್ರತಿನಿಧಿಗಳು, ಹಿರಿಯ ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.