7ನೇ ದಿನಕ್ಕೆ ಕಾಲಿಟ್ಟ ಒಳಮೀಸಲಾತಿ ಹೋರಾಟ: ಡಿ.22ಕ್ಕೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ
ಬೆಂಗಳೂರು, ಡಿ.17: ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ನಡೆಸುತ್ತಿರುವ ಹೋರಾಟ ಇಂದಿಗೆ(ರವಿವಾರ) ಏಳನೆ ದಿನಕ್ಕೆ ಕಾಲಿಟ್ಟಿದೆ. ಜತೆಗೆ, ಈ ಹೋರಾಟ ಬೆಂಬಲಿಸಿ ಡಿ.22ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ದಲಿತ ಹೋರಾಟಗಾರರು ಕರೆ ನೀಡಿದ್ದಾರೆ.
ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ನಿವೃತ್ತ ಐಎಎಸ್ ಅಧಿಕಾರಿಗಳು, ನಟ ಚೇತನ್ ಹಾಗೂ ದಲಿತ ಸಂಘಟನೆಗಳ ಮುಖಂಡರು ಪಾಲ್ಗೊಂಡು, ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಕುರಿತು ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡರು, ಡಿ.22ರಂದು ಚಳಿಗಾಲ ಅಧಿವೇಶನ ನಡೆಯುತ್ತಿರುವ ಬೆಳಗಾವಿ ಸೇರಿದಂತೆ ರಾಜ್ಯದ ಆಯಾ ಜಿಲ್ಲಾ ಕೇಂದ್ರಗಳಲ್ಲಿ ದಲಿತ ಸಂಘಟನೆಗಳು ಒಗ್ಗೂಡಿ ಒಳ ಮೀಸಲಾತಿ ಹೋರಾಟ ಬೆಂಬಲಿಸಿ ಪ್ರತಿಭಟನೆ ಮಾಡುತ್ತೇವೆ ಎಂದರು.
ನ್ಯಾ.ಎ.ಜೆ.ಸದಾಶಿವ ಅವರು, ಅತ್ಯಂತ ನುರಿತ ನ್ಯಾಯಮೂರ್ತಿಯಾಗಿದ್ದು, ಎಲ್ಲ ಆಯಾಮಗಳಿಂದ ಆಲೋಚನೆ ಮಾಡಿ, ಎರಡು ವರ್ಷಗಳ ಸುದೀರ್ಘ ಅಧ್ಯಯನ ಮಾಡಿ ವರದಿ ನೀಡಿದ್ದಾರೆ. ವರದಿಯಲ್ಲಿ ಹೆಚ್ಚು ವ್ಯತ್ಯಾಸಗಳು ಏನು ಇರುವುದಿಲ್ಲ. ಈಗ ಪರಿಶಿಷ್ಟ ಜಾತಿ ಮೀಸಲಾತಿ ಶೇ.17 ಆಗಿದೆ. ಹಾಗಾಗಿ ಹೆಚ್ಚಳವಾಗಿರುವ ಶೇ.2ರಷ್ಟನ್ನು ಏನು ಮಾಡಬೇಕು ಎನ್ನುವುದನ್ನು ಬಿಟ್ಟರೆ, ವರದಿಯಲ್ಲಿ ಸೇರಿಸುವಂತದ್ದು ಏನು ಇರಲಾರದು ಎಂದು ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ನಟ ಚೇತನ್ ಮಾತನಾಡಿ, ಈ ಹೋರಾಟಕ್ಕೆ ಮಣಿದು ರಾಜ್ಯ ಸರಕಾರವು ಒಳಮೀಸಲಾತಿ ಕುರಿತು ಪರಿಶೀಲಿಸಲು ಉಪ ಸಮಿತಿ ರಚನೆ ಮಾಡಿದ್ದು, ವರದಿ ಸಲ್ಲಿಕೆಗೆ ಕಾಲಮಿತಿ ಕೂಡ ನಿಗದಿ ಮಾಡಿಲ್ಲ. ಆದರೆ, ಚುನಾವಣೆ ಹೊಸ್ತಿಲಲ್ಲಿ ಇದು ಕಣ್ಣೊರೆಸುವ ತಂತ್ರ ಆಗಬಾರದು. ಮೀಸಲಾತಿ ಹಕ್ಕು ದೊರೆಯುವಂತೆ ಸರಕಾರ ಮಾಡಬೇಕು ಎಂದರು.