ದೇವಾಲಯಗಳಲ್ಲಿ ಮೊಬೈಲ್ ಫೋನ್ ನಿಷೇಧ ಮಾಡುವಂತೆ ಮುಜರಾಯಿ ಸಚಿವರಿಗೆ ಮನವಿ
ಬೆಂಗಳೂರು, ಡಿ.17: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧ ಮಾಡಬೇಕೆಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮುಜರಾಯಿ ಸಚಿವರಿಗೆ ಮನವಿ ಮಾಡಿದೆ.
ದೇವಾಲಯಗಳಲ್ಲಿ ಧಾರ್ಮಿಕ ಆಚರಣೆಗಳು ನಡೆಯುವ ಸಂದರ್ಭಗಳ ಮಧ್ಯೆದಲ್ಲಿ ಅಶ್ಲೀಲವಾದ ರಿಂಗ್ ಟೋನ್‌ಗಳು ಕಿರಿಕಿರಿ ಉಂಟು ಮಾಡುವುದರಿಂದ, ಭಕ್ತಾಧಿಗಳು ಧ್ಯಾನಸ್ತಕರಾಗಿ ಧ್ಯಾನ ಮಾಡುವಾಗ ಕೆಲವು ಹೆಣ್ಣು ಮಕ್ಕಳ ಫೋಟೋ ತೆಗೆಯುವುದು, ಜೋರಾಗಿ ಮಾತನಾಡುವುದು, ದೇವರ ಫೋಟೋ ತೆಗೆಯುವುದು, ಅರ್ಚನೆ ಮಾಡುತ್ತಿರುವಾಗ ಮಂತ್ರಗಳ ಉಚ್ಛಾರಣೆ ಮಾಡುವಾಗ ಮೊಬೈಲ್‌ನಲ್ಲಿ ಹಾಡುಗಳನ್ನು ಹಾಕುವುದು, ಹೀಗೆ ದೇವಾಲಯಗಳಲ್ಲಿ ಮೊಬೈಲ್ ಬಳಕೆ ಮಾಡುವುದರಿಂದ ಪೂಜೆ ಮತ್ತು ಭಕ್ತಾಧಿಗಳ ಏಕಾಗ್ರತೆಗೆ ಧಕ್ಕೆ ಉಂಟಾಗುತ್ತದೆ.
ಆ ಕಾರಣ ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ಮೊಬೈಲ್ ಅನ್ನು ಸೀಮಿತ ಸ್ಥಳದಲ್ಲಿ ಇರಿಸಿ ನಂತರ ಪ್ರವೇಶಿಸಬೇಕೆಂದು ಆದೇಶಿಸುವಂತೆ ಒಕ್ಕೂಟ ಕೋರಿದೆ.