×
Ad

ಮುಷ್ಕರ ವೇಳೆ ವಜಾಗೊಂಡಿದ್ದ 500 ಮಂದಿ ಬಿಎಂಟಿಸಿ ಸಿಬ್ಬಂದಿ ಶೀಘ್ರವೇ ವಾಪಾಸ್: ನಂದೀಶ್ ರೆಡ್ಡಿ

Update: 2022-12-17 23:12 IST

ಬೆಂಗಳೂರು, ಡಿ.17: ಕೋವಿಡ್ ಸಂದರ್ಭದಲ್ಲಿ ಸಾರಿಗೆ ಮುಷ್ಕರದಲ್ಲಿ ಭಾಗವಹಿಸಿ ವಜಾಗೊಂಡಿದ್ದ ಎರಡು ಸಾವಿರ ಬಿಎಂಟಿಸಿ ಸಿಬ್ಬಂದಿಗಳಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದ 500 ಮಂದಿ ಸಿಬ್ಬಂದಿಗಳನ್ನು ಶೀಘ್ರವೇ ವಾಪಸ್ ತೆಗೆದುಕೊಳ್ಳಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ಎನ್.ಎಸ್. ನಂದೀಶ್ ರೆಡ್ಡಿ ತಿಳಿಸಿದರು.

ಶನಿವಾರ ಶಾಂತಿನಗರದಲ್ಲಿರುವ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಜಾಗೊಂಡು ನ್ಯಾಯಲಯದ ಮೊರೆ ಹೋಗಿರುವ 500 ಮಂದಿ ಸಿಬ್ಬಂದಿಗಳು ಡಿಸೆಂಬರ್ ಅಂತ್ಯದೊಳಗೆ ನಮ್ಮ ಕಚೇರಿಯಲ್ಲಿಯೇ ನಡೆಯುವ ಲೋಕ ಆದಾಲತ್‍ನಲ್ಲಿ ಭಾಗವಹಿಸಿ ತಮ್ಮ ಪ್ರಕರಣವನ್ನು ಬಗೆಹರಿಸಿಕೊಂಡು ಕೆಲಸಕ್ಕೆ ವಾಪಾಸ್ ತೆರಳಲು ಅವಕಾಶ ನೀಡಲಾಗಿದೆ ಎಂದರು. 

ಇದು ಡಿಸೆಂಬರ್ ಅಂತ್ಯದೊಳಗೆ ಮಾತ್ರ. ಅಷ್ಟರೊಳಗೆ ಯಾರು ಬರುವುದಿಲ್ಲವೋ ಅವರಿಗೆ ಅವಕಾಶ ಇರುವುದಿಲ್ಲ. ಬೆಂಗಳೂರಿನಲ್ಲಿ ಬಿಎಂಟಿಸಿ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಲಾಗಿದೆ. ಸುಮಾರು 2 ಸಾವಿರ ನೂತನ ಬಸ್ ಗಳನ್ನು ಈ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಿಡಲಾಗಿದೆ ಎಂದು ನಂದೀಶ್ ರೆಡ್ಡಿ ತಿಳಿಸಿದರು.

ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ಬಿಎಂಟಿಸಿ ಬಸ್ ಗಳ ಮೇಲಿನ ಅಪಘಾತ ದೂರುಗಳ ಪತ್ತೆಗಾಗಿ ಬಸ್ ಗಳ ಮುಂಭಾಗ ಹಾಗು ಹಿಂಭಾಗ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಮನು ಬಳಿಗಾರ್, 86ನೆ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ದೊಡ್ಡ ರಂಗೇಗೌಡ, ಬಿಎಂಟಿಸಿ ಭದ್ರತಾ ವಿಭಾಗದ ನಿರ್ದೇಶಕಿ ರಾಧಿಕಾ ಜಿ., ವ.ಚ.ಚನ್ನೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Similar News