'ಅಪಹೃತ' ಯುವತಿ ಪ್ರತ್ಯಕ್ಷ : 20 ತಿಂಗಳು ಜೈಲಲ್ಲಿ ಕಳೆದ ಅಮಾಯಕ ಯುವಕ !

Update: 2022-12-18 03:15 GMT

ಡೆಹ್ರಾಡೂನ್: ಅಪ್ರಾಪ್ತ ವಯಸ್ಸಿನ ಯುವತಿಯನ್ನು ಅಪಹರಿಸಿದ ಆರೋಪದಲ್ಲಿ 20 ತಿಂಗಳ ಕಾಲ ಜೈಲು ವಾಸ ಅನುಭವಿಸಿದ 19 ವರ್ಷದ ಯುವಕನೊಬ್ಬ ಇದೀಗ ಯುವತಿ ಪತ್ತೆಯಾದ ಹಿನ್ನೆಲೆಯಲ್ಲಿ ಜೈಲಿನಿಂದ ಹೊರಬಂದಿದ್ದಾನೆ. ಯುವಕನ ಮೇಲೆ ಮಾಡಿರುವ ಆರೋಪಗಳು ಸುಳ್ಳು ಹಾಗೂ ಯುವಕ ಅಮಾಯಕ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಶುಕ್ರವಾರ ತನ್ನ ಪೋಷಕರ ಬಳಿಗೆ ಮರಳಿದ ಯುವತಿ, ತಾನು ಯಾರಿಗೂ ಮಾಹಿತಿ ನೀಡದೇ ಚಂಡೀಗಢಕ್ಕೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ, ಆರೋಪಿ ಯುವಕನನ್ನು ಬಿಡುಗಡೆ ಮಾಡಿದೆ. ಈ ಭಯಾನಕ ಅನುಭವ ತನಗೆ ಭೀತಿ ಹಾಗೂ ಆಘಾತ ತಂದಿದೆ ಎಂದು ಜೈಲಿನಿಂದ ಬಿಡುಗಡೆಯಾದ ಯುವಕ ಹೇಳಿದ್ದಾನೆ.

ಹೃಷಿಕೇಶದ ಯುವಕ 2021ರಲ್ಲಿ ಯುವತಿಯನ್ನು ಅಪಹರಿಸಿದ್ದಾನೆ ಎಂದು ಯುವತಿಯ ಕುಟುಂಬ ದೂರು ನೀಡಿತ್ತು. ಯುವತಿ ನಾಪತ್ತೆಯಾಗಿದ್ದು, ಆಕೆಯ ಫೋನ್ ಸ್ವಿಚ್ ಆಫ್ ಇದೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಯುವಕ ಕೂಡಾ ನಾಪತ್ತೆಯಾಗಿದ್ದು, ಆತ ಯುವತಿಯನ್ನು ಅಪಹರಿಸಿ ಫೋನ್ ಸ್ವಿಚ್ ಆಫ್ ಮಾಡಿರಬೇಕು ಎಂದು ದೂರಿದ್ದರು.

ಪೊಲೀಸರು ಭಾರತೀಯ ದಂಡಸಂಹಿತೆ ಸೆಕ್ಷನ್ 363 (ಅಪಹರಣ), 366 ಎ (ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಸ್ವಾಧೀನ ಮಾಡಿಕೊಳ್ಳುವುದು), 376 (ಅತ್ಯಾಚಾರ) ಹಾಗೂ ಪೋಕ್ಸೋ ಕಾಯ್ದೆಯ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿದ್ದರು. 2021ರ ಏಪ್ರಿಲ್ 20ರಂದು ಯುವಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ತನ್ನ ಮೇಲೆ ವಿಧಿಸಿರುವ ಎಲ್ಲ ಆರೋಪಗಳು ಸುಳ್ಳು ಎಂದು ವಿಚಾರಣೆ ವೇಳೆ ಯುವಕ ಹೇಳಿದ್ದ.

ಅಪಹರಣಕ್ಕೆ ಒಳಗಾಗಿದ್ದಾಳೆ ಎನ್ನಲಾದ ಯುವತಿ ದಿಢೀರನೇ ಪ್ರತ್ಯಕ್ಷವಾಗಿದ್ದಳು ಹಾಗೂ ಉನ್ನತ ವ್ಯಾಸಂಗಕ್ಕಾಗಿ ಪೋಷಕರಿಗೆ ಹೇಳದೇ ತಾನು ಚಂಡೀಗಢಕ್ಕೆ ತೆರಳಿದ್ದಾಗಿ ಹೇಳಿಕೆ ನೀಡಿದ್ದಳು. ಸ್ನೇಹಿತರ ಜತೆ ಅಲ್ಲಿ ವಾಸ್ತವ್ಯವಿದ್ದು, ಪೋಷಕರಿಗೆ ಮಾಹಿತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಳು. ಆರೋಪಿ ಯುವಕನ ಜತೆ ಸಂಪರ್ಕ ಇತ್ತಾದರೂ, ಚಂಡೀಗಢಕ್ಕೆ ತಾನೇ ಸ್ವತಃ ಹೋಗಿದ್ದಾಗಿ ಯುವತಿ ಹೇಳಿಕೆ ನೀಡಿದ್ದಳು ಎಂದು timesofindia.com ವರದಿ ಮಾಡಿದೆ.

Similar News