ಭಾರತೀಯ ನೌಕಾಪಡೆಗೆ ಸ್ವದೇಶಿ ನಿರ್ಮಿತ ಕ್ಷಿಪಣಿ ವಿಧ್ವಂಸಕ ಸಮರ ನೌಕೆ ಸೇರ್ಪಡೆ

Update: 2022-12-18 15:30 GMT

ಮುಂಬೈ, ಡಿ. 18: ಅತ್ಯಾಧುನಿಕ ಕ್ಷಿಪಣಿ ವಿಧ್ವಂಸಕ ಸಮರನೌಕೆ ಐಎನ್ಎಸ್ ‘ಮೊರ್ಮುಗಾಂವ್’ ಅನ್ನು ರವಿವಾರ ಭಾರತೀಯ ನೌಕಾಪಡೆಗೆ ನಿಯೋಜನೆ ಗೊಳಿಸಲಾಯಿತು. ಮುಂಬೈಯಲ್ಲಿ ನಡೆದ ಸಮರನೌಕೆಯ ನಿಯೋಜನೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ನೌಕಾಪಡೆಯ ವರಿಷ್ಠ ಆಡ್ಮಿರಲ್ ಆರ್.ಹರಿಕುಮಾರ್ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಮಾತನಾಡಿ,‘ ಐಎನ್ಎಸ್ ಮೊರ್ಮುಗಾಂವ್ ’ನ ನಿಯೋಜನೆಯು ಭಾರತದ ನೌಕಾಪಡೆಗೆ ಬಲ ತುಂಬಲಿದೆ ಹಾಗೂ ಇದು ತಾಂತ್ರಿಕವಾಗಿ ಅತ್ಯಂತ ಸುಧಾರಿತವಾದ ಸಮರ ನೌಕೆಯಾಗಿದೆ ಎಂದರು. 

ಭಾರತದ ಆರ್ಥಿಕತೆಯು ಜಗತ್ತಿನ ಅತ್ಯಂತ ಶ್ರೇಷ್ಠ ಐದು ಆರ್ಥಿಕತೆಯ ರಾಷ್ಟ್ರಗಳಲ್ಲಿ ಒಂದಾಗಿದೆ.  ಆರ್ಥಿಕ ತಜ್ಞರ ಪ್ರಕಾರ 2027 ರ ವೇಳೆಗೆ ಭಾರತವು ಜಗತ್ತಿನ ಅತ್ಯುನ್ನತ 3 ರಾಷ್ಟ್ರಗಳಲ್ಲಿ ಒಂದಾಗಲಿದೆಯೆಂದು ಸಿಂಗ್ ತಿಳಿಸಿದರು.

ಗೋವಾ ವಿಮೋಚನಾ ದಿನಾಚರಣೆಯ ಮುನ್ನಾ ದಿನವಾದ ಈ ಸಮರನೌಕೆಯು ನೌಕಾಪಡೆಗೆ ನಿಯೋಜನೆಗೊಂಡಿದೆ. ಕಳೆದೊಂದು ದಶಕದಿಂದ ಭಾರತವು ಯುದ್ಧನೌಕೆಯ ವಿನ್ಯಾಸ ಹಾಗೂ ನಿರ್ಮಾಣ ಸಾಮರ್ಥ್ಯದಲ್ಲಿ ದೈತ್ಯ ಹೆಜ್ಜೆಗಳನ್ನಿಟ್ಟಿರುವುದನ್ನು ಇದು ಸೂಚಿಸುತ್ತದೆ ಎಂದರು.

ಭಾರತೀಯ ನೌಕೆಪಡೆಯ ಬಳಿಯಿರುವ ‘ವಿಶಾಖಪಟ್ಟಣಂ’ ದರ್ಜೆಯ ವಿಧ್ವಂಸಕ ನೌಕೆಗಳಲ್ಲಿ ಐಎನ್ಎಸ್ ಮೊರ್ಮುಗಾಂವ್ ಎರಡನೆಯದಾಗಿದೆ. ಭಾರತೀಯ ನೌಕಾಪಡೆಯು ವಿನ್ಯಾಸಗೊಳಿಸಿರುವ ಈ ಸಮರನೌಕೆಯನ್ನು ಮುಂಬೈನ ಮಝ್ಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಕಂಪೆನಿ ಲಿಮಿಟೆಡ್ ನಿರ್ಮಿಸಿದೆ.
ಗೋವಾದ ಬಂದರುನಗರವಾದ ಮೊರ್ಮುಗಾಂವ್ನ ಹೆಸರನ್ನೇ ಈ ನೌಕೆಗೆ ಇರಿಸಲಾಗಿದೆ. ಪೋರ್ಚುಗಲ್ ಆಳ್ವಿಕೆಯಿಂದ ಗೋವಾ ವಿಮೋಚನೆಯ ವರ್ಷಾಚರಣೆಯ ಸಂದರ್ಭದಲ್ಲಿಯೇ ಮೊರ್ಮುಗಾಂವ್ ನೌಕೆಯು ಚೊಚ್ಚಲ ಸಂಚಾರವನ್ನು ಆರಂಭಿಸಿರುವುದು ಕಾಕತಾಳೀಯವಾಗಿದೆ.

Similar News