ಮುಲ್ಕಿ | ಯುವಕನಿಗೆ ಮಾರಣಾಂತಿಕ ಹಲ್ಲೆ ಪ್ರಕರಣ: ಬಂಧಿತ ಮೂವರ ಬಿಡುಗಡೆ

Update: 2022-12-18 17:20 GMT

ಮುಲ್ಕಿ, ಡಿ.18: ಇಲ್ಲಿನ ಕೆರೆಕಾಡು ಎಂಬಲ್ಲಿ ಯುವಕನೋರ್ವನನ್ನು ಕಂಬಕ್ಕೆ ಕಟ್ಟಿ ಹಾಕಿ ತೀವ್ರವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಕೆರೆಕಾಡು ಕೆಂಚನಕೆರೆ ನಿವಾಸಿಗಳಾದ ದಿವೇಶ್ ದೇವಾಡಿಗ(38), ರಾಜೇಶ್ ಹಾಗೂ ಯೋಗೇಶ್ ಕುಮಾರ್(46) ಬಂಧಿತ ಆರೋಪಿಗಳು. ಅವರನ್ನು ಬಂಧಿಸಿರುವ ಮುಲ್ಕಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎಲ್ಲಾ ಮೂವರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ.

ಈ ನಡುವೆ ಹಲ್ಲೆಗೊಳಗಾದ ಹಳೆಯಂಗಡಿ ಕೊಪ್ಪಲ ನಿವಾಸಿ ದಾವೂದ್ ಹಕೀಂ(33) ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದ್ದು, ಆತನನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾವೂದ್ ಹಕೀಂ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ಐವರ ತಂಡವು ಶನಿವಾರ ಕಂಬಕ್ಕೆ ಕಟ್ಟಿ ಹಾಕಿ ತೀವ್ರ ಹಲ್ಲೆ ನಡೆಸಿತೆನ್ನಲಾಗಿದೆ. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು, ದಾವೂದ್‌ನನ್ನು ವಶಕ್ಕೆ ಪಡೆದು ಮುಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Similar News