ಎಚ್.ವಿಶ್ವನಾಥ್‍ಗೆ 15 ಕೋಟಿ ರೂ. ನೀಡಿರುವ ಬಗ್ಗೆ BJP ಸಂಸದರ ಹೇಳಿಕೆ: ಚುನಾವಣಾ ಆಯೋಗ, ಈಡಿಗೆ ದೂರು ನೀಡಿದ ಆಪ್

ಸೂಕ್ತ ತನಿಖೆಗೆ ಆಗ್ರಹ

Update: 2022-12-19 14:39 GMT

ಬೆಂಗಳೂರು, ಡಿ.19: ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಎಚ್.ವಿಶ್ವನಾಥ್ ಅವರಿಗೆ 15 ಕೋಟಿ ರೂ. ನೀಡಿರುವುದನ್ನು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಒಪ್ಪಿಕೊಂಡಿರುವ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಆಮ್ ಆದ್ಮಿ ಪಾರ್ಟಿಯು ಚುನಾವಣಾ ಆಯೋಗ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಸೋಮವಾರ ದೂರು ನೀಡಿದೆ.

ಆಮ್ ಆದ್ಮಿ ಪಾರ್ಟಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮಾತನಾಡಿ, ‘ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್‍ರಿಗೆ 15 ಕೋಟಿ ರೂಪಾಯಿ ಹಣ ನೀಡಿರುವುದು ಹಾಗೂ ಅದರಲ್ಲಿ ವಿಶ್ವನಾಥ್ 4ರಿಂದ 5 ಕೋಟಿ ರೂಪಾಯಿಯನ್ನು ಖರ್ಚು ಮಾಡಿರುವ ಗಂಭೀರ ವಿಚಾರವನ್ನು ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಬಹಿರಂಗ ಪಡಿಸಿದ್ದಾರೆ. ವಿ.ಶ್ರೀನಿವಾಸ್ ಪ್ರಸಾದ್‍ರವರು ಕೂಡ ಚುನಾವಣೆಗೆ ಹಣ ಪಡೆದಿದ್ದಾರೆ ಎಂದು ಎಚ್.ವಿಶ್ವನಾಥ್ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಈ 15 ಕೋಟಿ ರೂಪಾಯಿಯನ್ನು ಬಿಜೆಪಿ ಹೇಗೆ ಸಂಪಾದಿಸಿತು? ಅಭ್ಯರ್ಥಿ ಎಚ್.ವಿಶ್ವನಾಥ್‍ರವರಿಗೆ ಯಾಕಾಗಿ ವರ್ಗಾಯಿಸಲಾಯಿತು? ವಿಶ್ವನಾಥ್‍ರವರು 4 ಅಥವಾ 5 ಕೋಟಿ ರೂಪಾಯಿಯನ್ನು ಹೇಗೆ ಖರ್ಚು ಮಾಡಿದರು? ಉಳಿದ 10 ಕೋಟಿ ರೂಪಾಯಿ ಈಗ ಎಲ್ಲಿದೆ? ಚುನಾವಣಾ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಆದುದರಿಂದ ಚುನಾವಣಾ ಆಯೋಗ ಹಾಗೂ ಜಾರಿ ನಿರ್ದೇಶನಾಲಯವು ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

2019ರಲ್ಲಿದ್ದ ಚುನಾವಣಾ ಆಯೋಗದ ನೀತಿ ಸಂಹಿತೆ ಪ್ರಕಾರ ಅಭ್ಯರ್ಥಿಯು 28 ಲಕ್ಷ ರೂಪಾಯಿಯನ್ನು ಮಾತ್ರ ಖರ್ಚು ಮಾಡಲು ಅವಕಾಶ ಇರುತ್ತದೆ. ಬಿಜೆಪಿ ಸಂಸದರೇ ಬಹಿರಂಗವಾಗಿ ಒಪ್ಪಿಕೊಂಡಿರುವಂತೆ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್‍ರವರು 4ರಿಂದ 5 ಕೋಟಿ ರೂಪಾಯಿ ಖರ್ಚು ಮಾಡಿರುವುದು ಗರಿಷ್ಠ ಮಿತಿಗಿಂತ ಬರೋಬ್ಬರಿ 15 ಪಟ್ಟಿಗೂ ಹೆಚ್ಚು ಖರ್ಚು ಮಾಡಿದಂತಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Similar News