ಹಳೆ ಪಿಂಚಣಿ ಜಾರಿಗೆ ಆಗ್ರಹ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ
ಬೆಂಗಳೂರು, ಡಿ.20: ರಾಜ್ಯದ ಸರಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.
ಹೊಸ ಪಿಂಚಣಿ ಪದ್ಧತಿಯಿಂದ ಸರಕಾರಿ ನೌಕರರ ಬದುಕಿಗೆ ಆರ್ಥಿಕ ಸುರಕ್ಷತೆ ಇಲ್ಲದಂತಾಗಿದೆ. ನಿವೃತ್ತಿ ನಂತರದ ಜೀವನ ನಿರ್ವಹಣೆ ತೀವ್ರ ಸಂಕಷ್ಟಮಯ ಆಗುತ್ತದೆ. ಇದು ಆರ್ಥಿಕ ಶೋಷಣೆ ಹಾಗೂ ತಾರತಮ್ಯ ಉಂಟು ಮಾಡಿದಂತಾಗುತ್ತದೆ. ಪ್ರಜಾತಾಂತ್ರಿಕ ತತ್ವಕ್ಕೆ ವಿರೋಧವಾದ ಈ ಯೋಜನೆ ಕೈಬಿಡಲು ಸರಕಾರ ಮುಂದಾಗಬೇಕು ಎಂದಿದ್ದಾರೆ.
2006ರಲ್ಲಿ ಜಾರಿಗೊಂಡ ಹೊಸ ಪಿಂಚಣಿ ಪದ್ಧತಿಯಿಂದ ನಿಶ್ಚಿತ ಪಿಂಚಣಿ ಕಸಿದುಕೊಂಡಂತಾಗಿದೆ. ಮೂಲವೇತನ ಹಾಗೂ ತುಟ್ಟಿ ಭತ್ಯೆಯಲ್ಲಿ ಶೇ.10ರಷ್ಟು ಪ್ರತಿ ತಿಂಗಳು ವಂತಿಗೆಯಾಗಿ ಕಟಾಯಿಸುತ್ತಿರುವುದು ತಕ್ಷಣವೇ ನಿಲ್ಲಿಸಬೇಕು. ಅಲ್ಲದೆ ಕಡಿತಗೊಳಿಸಿದ ಮೊತ್ತವನ್ನು ಬಡ್ಡಿ ಸಮೇತ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಂಪನ್ಮೂಲ ಕ್ರೋಢೀಕರಣದ ನೆಪದಲ್ಲಿ ನೌಕರರ ಪಿಂಚಣಿ ಹಾಗೂ ನಿವೃತ್ತಿ ನಂತರದ ಸೌಲಭ್ಯ ಕಡಿತಗೊಳಿಸುವ ನೀತಿ ಹಿಂಪಡೆಯಬೇಕು. ಸರಕಾರಿ ನೌಕರರು ಸಂಧ್ಯಾ ಕಾಲದ ಬದುಕಿಗೆ ಭದ್ರತೆ ಕಲ್ಪಿಸುವ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕರು, ಸಂಸದರು, ಸಚಿವರ ಸಾರಿಗೆ ಮತ್ತು ಸಂಬಳ ಏರಿಕೆಯ ವಿಚಾರದಲ್ಲಿ ಆರ್ಥಿಕ ಹೊರೆ ಗಮನ ಹರಿಸದ ಸರಕಾರ ನೌಕರರ ವಿಷಯದಲ್ಲಿ ಮೀನಮೇಷ ಎಣಿಸುವುದು, ನೆಪ ಹೇಳುವುದು ಸರಿಯಲ್ಲ. ಹಳೆಯ ಪಿಂಚಣಿ ವ್ಯವಸ್ಥೆ ಮತ್ತೆ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.