ಸಾಮಾಜಿಕ ಪ್ರಗತಿ ಸೂಚ್ಯಂಕ; ದೇಶದಲ್ಲಿ ಯಾವ ರಾಜ್ಯಕ್ಕೆ ಯಾವ ಸ್ಥಾನ?

Update: 2022-12-21 02:09 GMT

ಹೊಸದಿಲ್ಲಿ: ದೇಶದ ಸಾಮಾಜಿಕ ಪ್ರಗತಿ ಸೂಚ್ಯಂಕದಲ್ಲಿ  (Social Progress Index)  ಪುದುಚೇರಿ 65.9 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದೆ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಯ್ಕೆ, ವಸತಿ ಹಾಗೂ ನೀರು ಮತ್ತು ನೈರ್ಮಲ್ಯ ಹೀಗೆ ಎಲ್ಲ ಮಾನದಂಡಗಳಲ್ಲೂ ತೋರಿದ ಗಣನೀಯ ಸಾಧನೆಯಿಂದಾಗಿ ಈ ಕೇಂದ್ರಾಡಳಿತ ಪ್ರದೇಶ ಅಗ್ರ ಸ್ಥಾನದ ಹೆಗ್ಗಳಿಕೆ ಪಡೆದಿದೆ.

ಲಕ್ಷದ್ವೀಪ ಹಾಗೂ ಗೋವಾ ಕೂಡಾ ಪುದುಚೇರಿಗೆ ತೀವ್ರ ಪೈಪೋಟಿ ನೀಡಿದ್ದು, ಕ್ರಮವಾಗಿ 65.8 ಹಾಗೂ 65.5 ಅಂಕಗಳೊಂದಿಗೆ ನಂತರದ ಎರಡು ಸ್ಥಾನಗಳನ್ನು ಗಳಿಸಿವೆ. 100 ಅಂಕಗಳ ಪೈಕಿ 44.9, 44.4 ಹಾಗೂ 43.9 ಅಂಕಗಳನ್ನು ಪಡೆದ ಅಸ್ಸಾಂ, ಬಿಹಾರ ಹಾಗೂ ಜಾರ್ಖಂಡ್ ಕೊನೆಯ ಮೂರು ಸ್ಥಾನಗಳಲ್ಲಿವೆ.

ಸ್ಪರ್ಧಾತ್ಮಕತೆ ಮತ್ತು ಸಾಮಾಜಿಕ ಪ್ರಗತಿ ಅಗತ್ಯತೆ ಸಂಸ್ಥೆ ಈ ಸೂಚ್ಯಂಕ ನಿರ್ಣಯಿಸಿದ್ದು, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಗೆ ಸಲ್ಲಿಸಿದೆ. ಇದನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

"ಸೋಶಿಯಲ್ ಪ್ರೋಗ್ರೆಸ್ ಇಂಡೆಕ್ಸ್: ಸ್ಟೇಟ್ಸ್ ಅಂಡ್ ಡಿಸ್ಟ್ರಿಕ್ಟ್ಸ್ ಆಫ್ ಇಂಡಿಯಾ" ಹೆಸರಿನ ವರದಿಯಲ್ಲಿ ಇಎಸಿ-ಪಿಎಂ ಅಧ್ಯಕ್ಷ ಬಿಬೇಕ್ ದೇಬರಾಯ್ ಬಿಡುಗಡೆ ಮಾಡಿದ್ದು, ಐಜ್ವಾಲ್ (ಮಿಜೋರಾಂ), ಸೋಲನ್ (ಹಿಮಾಚಲ ಪ್ರದೇಶ) ಮತ್ತು ಶಿಮ್ಲಾ (ಹಿಮಾಚಲ ಪ್ರದೇಶ) ಅತ್ಯುತ್ತಮ ಸಾಧನೆಯ ಮೂರು ಜಿಲ್ಲೆಗಳಾಗಿ ಹೊರಹೊಮ್ಮಿವೆ. ಹಿಂದುಳಿದ ಜಿಲ್ಲೆಗಳ ಪ್ರಗತಿಯ ಬಗ್ಗೆಯೂ ಈ ಸೂಚ್ಯಂಕ ಬೆಳಕು ಚೆಲ್ಲಿದ್ದು, ಹಿಂದುಳಿದ 112 ಜಿಲ್ಲೆಗಳ ಪೈಕಿ ಕೇವಲ 27 ಜಿಲ್ಲೆಗಳು ಮಾತ್ರ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಅಂಕ ಪಡೆದಿದೆ.

ಜಾಗತಿಕ ಎಸ್‍ಪಿಐ ಮಾನದಂಡಕ್ಕೆ ಅನುಗುಣವಾಗಿ ದೇಶದಲ್ಲಿ ರಾಜ್ಯ ಹಾಗೂ ಜಿಲ್ಲೆಗಳ ಪ್ರಗತಿಯನ್ನು ಅಳೆಯಲಾಗುತ್ತಿದೆ. 2022ರ ಸೆಪ್ಟೆಂಬರ್‍ನಲ್ಲಿ ಬಿಡುಗಡೆ ಮಾಡಲಾದ ಜಾಗತಿಕ ರ್ಯಾಂಕಿಂಗ್‍ನಲ್ಲಿ ಭಾರತ 60.2 ಅಂಕಗಳೊಂದಿಗೆ 110ನೇ ಸ್ಥಾನವನ್ನು ಗಳಿಸಿತ್ತು. ಸಾಮಾಜಿಕ ಪ್ರಗತಿ ಸಾಧನೆಯಲ್ಲಿ ಭಾರತ ನಾಲ್ಕನೇ ಸ್ತರದಲ್ಲಿತ್ತು. ಜಾಗತಿಕ ಪ್ರಗತಿ ಸರಾಸರಿ 65.2ರಷ್ಟಿದ್ದರೆ ಭಾರತ ಅದಕ್ಕಿಂತಲೂ ಕೆಳಗಿದೆ. ಒಟ್ಟು 169 ದೇಶಗಳ ಪ್ರಗತಿಯ ಅಧ್ಯಯನ ಮಾಡಿ ಸೂಚ್ಯಂಕ ನೀಡಲಾಗಿದೆ.

Similar News