1,173 ದಿನಗಳ ನಂತರ ಮೇಲ್ಮನವಿ ಅರ್ಜಿ ಸಲ್ಲಿಸಿದ ಉ.ಪ್ರ. ಸರ್ಕಾರಕ್ಕೆ 1 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

Update: 2022-12-21 09:11 GMT

ಹೊಸದಿಲ್ಲಿ: ಅಲಹಾಬಾದ್‌ ಹೈಕೋರ್ಟಿನ ತೀರ್ಪೊಂದನ್ನು ಪ್ರಶ್ನಿಸಿ 1,173 ದಿನಗಳ ವಿಳಂಬದ ನಂತರ, ಅದು ಕೂಡ ʻತಪ್ಪಾದ ವಿವರಗಳೊಂದಿಗೆʼ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌ ಈ ವಿಳಂಬಕ್ಕಾಗಿ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆಯಲ್ಲದೆ ರೂ. 1 ಲಕ್ಷ ದಂಡವನ್ನೂ ವಿಧಿಸಿದೆ.

"ಇಂತಹ ವಿಚಾರಗಳನ್ನು ಹೆಚ್ಚು ಪರಾಮರ್ಶಿಸದೆ ಹಾಗೂ ಸುಪ್ರೀಂ ಕೋರ್ಟಿನಿಂದ ವಜಾದ ಪ್ರಮಾಣಪತ್ರ ಪಡೆಯಲು  ಅಪೀಲುಗಳನ್ನು ಸಲ್ಲಿಸಲಾಗುತ್ತಿದೆ ಎಂಬ ಬಗ್ಗೆ ನಮಗೆ ಸಂಶಯವುಳಿದಿಲ್ಲ, ಇಂತಹ ಪದ್ಧತಿಯನ್ನು ವಿರೋಧಿಸುತ್ತೇವೆ ಹಾಗೂ ಅರ್ಜಿದಾರರಿಗೆ ಅದರ ವೆಚ್ಚವನ್ನು ವಿಧಿಸುವುದು ಅಗತ್ಯ ಎಂದು ಭಾವಿಸುತ್ತೇವೆ," ಎಂದು ನ್ಯಾಯಮೂರ್ತಿಗಳಾದ ದಿನೇಶ್‌ ಮಹೇಶ್ವರಿ ಮತ್ತು ಹೃಷಿಕೇಶ್‌ ರಾಯ್‌ ಅವರ ಪೀಠ ಹೇಳಿದೆ.

ಸರಕಾರ ಸ್ವಾಧೀನಪಡಿಸಿದ್ದ ಜೌನ್‌ಪುರ್‌ ಮೂಲದ ಮಹಿಳೆಯ ಜಮೀನಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ಹೈಕೋರ್ಟ್‌ ತನ್ನ ಮೇ 2019 ಆದೇಶದಲ್ಲಿ ಏರಿಸಿದ್ದನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

Similar News