ತಂದೆಯ ಕಣ್ಣೆದುರೇ ಯುವತಿಯ ಅಪಹರಣ ಪ್ರಕರಣಕ್ಕೆ ನಾಟಕೀಯ ತಿರುವು

Update: 2022-12-21 08:49 GMT

ಸಿರ್ಸಿಲ್ಲಾ (ತೆಲಂಗಾಣ) : ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಜರುಗಿದ್ದ 18 ವರ್ಷದ ಯುವತಿಯ ಅಪಹರಣ ಪ್ರಕರಣಕ್ಕೆ ನಾಟಕೀಯ ತಿರುವು ದೊರೆತಿದ್ದು, ಅಪಹೃತಳಾಗಿದ್ದಾಳೆ ಎಂದು ಹೇಳಲಾಗಿದ್ದ ಯುವತಿ ವಿಡಿಯೊ ಒಂದನ್ನು ಬಿಡುಗಡೆ ಮಾಡಿ, "ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ನನ್ನ ಸ್ವ ಇಚ್ಛೆಯಿಂದ ನನ್ನ ಪ್ರಿಯತಮನನ್ನು ವಿವಾಹವಾಗಲು ಪರಾರಿಯಾಗಿದ್ದೇನೆ" ಎಂದು ಹೇಳಿಕೊಂಡಿದ್ದಾಳೆ.

"ನಾವಿಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೇಮಿಸುತ್ತಿದ್ದೆವು. ಕಳೆದ ವರ್ಷ ನಾವಿಬ್ಬರೂ ವಿವಾಹ ಕೂಡಾ ಆಗಿದ್ದೆವು. ಆದರೆ, ನಾವಿಬ್ಬರೂ ಅಪ್ರಾಪ್ತರಾಗಿದ್ದುದರಿಂದ ಆ ವಿವಾಹಕ್ಕೆ ಕಾನೂನು ಮಾನ್ಯತೆ ಇರಲಿಲ್ಲ. ಹೀಗಾಗಿ ನನ್ನ ಪ್ರೇಮಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ನನ್ನ ಪೋಷಕರು ನನ್ನನ್ನು ಮರಳಿ ಮನೆಗೆ ಕರೆದುಕೊಂಡು ಹೋಗಿದ್ದರು. ಈಗ ಅವರು ನನ್ನ ವಿವಾಹವನ್ನು ಬೇರೊಬ್ಬರೊಂದಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನನ್ನ ಪ್ರೇಮಿಯು ದಲಿತ ಕುಟುಂಬಕ್ಕೆ ಸೇರಿರುವುದರಿಂದ ನನ್ನ ಪೋಷಕರು ಆತನನ್ನು ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ ನನ್ನೊಂದಿಗೆ ಪರಾರಿಯಾಗುವಂತೆ ನನ್ನ ಪ್ರೇಮಿಗೆ ಕೇಳಿಕೊಂಡಿದ್ದೆ. ಆತ ಮುಖಗವಸು ತೊಟ್ಟಿದ್ದುದರಿಂದ ಆರಂಭದಲ್ಲಿ ನನಗೆ ಆತನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ನಮ್ಮಿಬ್ಬರಿಗೆ ನನ್ನ ಕುಟುಂಬದಿಂದ ಅಪಾಯವಿರುವುದರಿಂದ ಪೊಲೀಸರು ಹಾಗೂ ಮಾಧ್ಯಮಗಳು ನಮ್ಮ ನೆರವಿಗೆ ಧಾವಿಸಬೇಕು" ಎಂದು ಆ ಯುವತಿ ವಿಡಿಯೊ ಸಂದೇಶದ ಮೂಲಕ ಮನವಿ ಮಾಡಿಕೊಂಡಿದ್ದಾಳೆ.

ಈ ವಿಡಿಯೊವನ್ನು ಭಾರತೀಯ ರಾಷ್ಟ್ರೀಯ ಸಮಿತಿಯ ಸಾಮಾಜಿಕ ಮಾಧ್ಯಮಗಳ ಸಂಚಾಲಕ ಕೃಶಾಂಕ್ ಮನ್ನೆ ಕೂಡಾ ಹಂಚಿಕೊಂಡಿದ್ದು, "ಪ್ರಿಯ ಮಡಿಲು ಮಾಧ್ಯಮಗಳೆ, ವಿಡಿಯೊ ತುಣುಕು ಆಧರಿಸಿ ಅಪಹರಣದ ಆರೋಪ ಮಾಡುವ ಮೂಲಕ ತೆಲಂಗಾಣ ಸರ್ಕಾರದ ಆಡಳಿತಕ್ಕೆ ಕಳಂಕ ಹಚ್ಚುವ ಪ್ರಯತ್ನದ ಭಾಗವಾಗಿ ನಮ್ಮ ಪ್ರತಿಕ್ರಿಯೆಗಾಗಿ ಮೇಲಿಂದ ಮೇಲೆ ಫೋನ್ ಕರೆ ಮಾಡುತ್ತಿದ್ದಿರಿ. ಇಗೋ ನೋಡಿ, ಸ್ವತಃ ಯುವತಿಯೇ ನನ್ನ ಅಪಹರಣವಾಗಿಲ್ಲ; ನಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ವಿವಾಹವಾಗಿದ್ದೇನೆ ಎಂದು ಹೇಳಿದ್ದಾಳೆ" ಎಂದು ಕಿಡಿ ಕಾರಿದ್ದಾರೆ.

ಈ ಮುನ್ನ ಶಾಲಿನಿಯ ತಂದೆ ತಡೆಯಲು ಪ್ರಯತ್ನಿಸಿದರೂ ಆಕೆಯನ್ನು ಕೆಲವು ಯುವಕರು ಬಲವಂತವಾಗಿ ಕಾರಿಗೆ ನೂಕಿದ್ದ ದೃಶ್ಯ ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾ ಒಂದರಲ್ಲಿ ದಾಖಲಾಗಿತ್ತು. ಸಿರ್ಸಿಲ್ಲಾ ಜಿಲ್ಲೆಯ ವೇಮುಲ್ವಾಡಾದ ಚಂದುರ್ತಿ ಗ್ರಾಮದಲ್ಲಿನ ದೇವಾಲಯವೊಂದಕ್ಕೆ ಭೇಟಿ ನೀಡಿ ಮರಳುವಾಗ ಶಾಲಿನಿಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಪೊಲೀಸರ ಪ್ರಕಾರ, ಅಪಹರಣಗೊಂಡಿರುವ ಯುವತಿಯು ಈ ಮುನ್ನ ಗ್ಯಾನೇಶ್ವರ್ ಎಂಬ ಯುವಕನೊಂದಿಗೆ ಪರಾರಿಯಾಗಿ ಆತನೊಂದಿಗೆ ಔಪಚಾರಿಕ ವಿವಾಹವಾಗಿದ್ದಳು. ಈ ಕುರಿತು ದೂರು ದಾಖಲಾಗಿತ್ತು ಎಂದು ತಿಳಿಸಿದ್ದಾರೆ. 

ಅಪಹರಣ ಪ್ರಕರಣದ ಸಂಬಂಧ ಈಗಾಗಲೇ ಕೆಲವು ಶಂಕಿತರನ್ನು ವಶಕ್ಕೆ ಪಡೆದಿರುವ ಪೊಲೀಸರು, ಆರೋಪಿಯನ್ನು ಬಂಧಿಸಲು ಮೂರು ತಂಡಗಳನ್ನು ರಚಿಸಿದ್ದಾರೆ.

Similar News